ಬುಧವಾರ, ಮೇ 18, 2022
27 °C
ಹೊನ್ನಾಳಿ ತಾಲ್ಲೂಕು ಕಚೇರಿ ತಪಾಸಣೆಗೆ ಡಿ.ಸಿ ಭೇಟಿ; ಅಮಾನತು ಎಚ್ಚರಿಕೆ

ಆರ್‌ಆರ್‌ಟಿ ಸಿಬ್ಬಂದಿಗೆ ಶೋಕಾಸ್ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಹೊನ್ನಾಳಿ: ಕಡತಗಳನ್ನು ವಿಲೇವಾರಿ ಮಾಡದ ಹಕ್ಕು ದಾಖಲೆ ಶಾಖೆಯ (ಆರ್‌ಆರ್‌ಟಿ) ಮೂವರು ಸಿಬ್ಬಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗುರುವಾರ ಶೋಕಾಸ್ ನೋಟಿಸ್‌ ನೀಡುತ್ತೇನೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂಬ ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕಂದಾಯ ಇಲಾಖೆಯ ವಿವಿಧ ವಿಭಾಗಗಳಿಗೆ ಗುರುವಾರ ಭೇಟಿ ನೀಡಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

‘ಈ ವಿಭಾಗದಲ್ಲಿ ದಾಖಲೆಗಳನ್ನು ಜೆರಾಕ್ಸ್ ಮಾಡಿಸುವುದಕ್ಕೆ ಜನರನ್ನು ಹೊರಗಡೆಗೆ ಕಳುಹಿಸುತ್ತಾರೆ. ಇದರಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಜೊತೆಗೆ ಕೆಲಸಕ್ಕೆ ಬರುವವರಿಂದ ಅಧಿಕೃತ ಶುಲ್ಕ ಬಿಟ್ಟು ಇತರೆ ಶುಲ್ಕ ವಸೂಲಿ ಮಾಡುತ್ತಿರುವ ಆರೋಪಗಳಿವೆ. ಈ ಕಾರಣಕ್ಕೆ ಅವರಿಗೆ ಶೋಕಾಸ್ ನೋಟಿಸ್ ನೀಡುತ್ತಿದ್ದೇನೆ. ನೋಟಿಸ್ ನೀಡುವುದರಿಂದ ಇಲಾಖೆಯ ಅಧಿಕಾರಿಗಳು ಚುರುಕಾಗುತ್ತಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ತಾಲ್ಲೂಕು ಕಚೇರಿಯಲ್ಲಿ ಅನೇಕ ದಿನಗಳಿಂದ ಸಾಕಷ್ಟು ಕಡತಗಳು ಪರಿಹಾರ ಕಂಡಿಲ್ಲ. ಅರ್ಜಿಗಳು ಕಪಾಟು, ಬೀರುವಿನಲ್ಲಿ, ಟೇಬಲ್‌ಗಳಲ್ಲಿ ಮಲಗಿಕೊಂಡಿವೆ. ಮುಂದೆ ಮತ್ತೊಮ್ಮೆ ಭೇಟಿ ನೀಡಿದಾಗ ಇದೇ ರೀತಿ ಕಡತಗಳ ಉಳಿಸಿಕೊಳ್ಳುವಿಕೆ, ಅವ್ಯವಸ್ಥೆ ಕಂಡುಬಂದರೆ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಾಲ್ಲೂಕು ಕಚೇರಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

‘ನಾನು ಬಂದಾಗಲೇ ನೂರಾರು ಜನರು ತಮ್ಮ ಅರ್ಜಿಗಳನ್ನು ಹಿಡಿದು ನನ್ನನ್ನು ಭೇಟಿಯಾಗಲು ಬರುತ್ತಾರೆ ಏಕೆ ಎಂದು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದ ಮಹಾಂತೇಶ ಬೀಳಗಿ, ಸಂಬಂಧಪಟ್ಟ ಅಧಿಕಾರಿಗಳು ಜನರ ಕೆಲಸ ಕಾರ್ಯಗಳಿಗೆ ತಕ್ಷಣವೇ ಸ್ಪಂದಿಸಿದರೆ ಅವರು ಅರ್ಜಿಗಳನ್ನು ನನ್ನ ಗಮನಕ್ಕೆ ತರುತ್ತಿರಲಿಲ್ಲ. ನಾನು ಕಚೇರಿ ತಪಾಸಣೆಗೆ ಬಂದಾಗಲೂ ಸುಮಾರು 35 ಅರ್ಜಿಗಳನ್ನು ಸಾರ್ವಜನಿಕರು ತಂದು ಅರಿಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಉಪ ವಿಭಾಗಾಧಿಕಾರಿಗಳು ತಾಲ್ಲೂಕು ಕಚೇರಿಯ ಎಲ್ಲಾ ಸೆಕ್ಷನ್ ಗಳಿಗೆ ಭೇಟಿ ನೀಡಿ ಟೇಬಲ್, ಬೀರು, ಕಪಾಟು ತಡಕಾಡಿ’ ಎಂದು ಸೂಚನೆ ನೀಡಿದರು.

‘ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂದು ಮಾಡಿದೆ. ಇದರ ಜೊತೆಗೆ ತಾಲ್ಲೂಕು ಕಚೇರಿಗಳ ಭೇಟಿ ಮತ್ತು ತಪಾಸಣೆ ಮುಖ್ಯಮಂತ್ರಿಗಳ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವುದು ತಪ್ಪುತ್ತದೆ. ಖರ್ಚು ಮಿಕ್ಕುತ್ತದೆ’ ಎಂದರು.

‘ಗ್ರಾಮ-1 ಕೇಂದ್ರ ಸ್ಥಾಪನೆಯ ಉದ್ದೇಶ ಗ್ರಾಮಗಳಲ್ಲಿಯೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ಆದರೆ ಗ್ರಾಮಸ್ಥರು ಕೆಲವರು ತಾಲ್ಲೂಕು ಕಚೇರಿಗೆ ಬಂದಿದ್ದು, ಅವರನ್ನು ವಿಚಾರಿಸಿದಾಗ ಅವರು ಸರ್ವರ್ ಸಮಸ್ಯೆ ಇದೆ ಎಂದು ಹೇಳಿದ್ದು, ಸರಿಯಲ್ಲ. ಸರ್ವರ್ ಸಮಸ್ಯೆ ಇಡೀ ರಾಜ್ಯದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದನ್ನು ಅರ್ಥ ಮಾಡಿಕೊಂಡು ತಾಳ್ಮೆಯಿಂದ ಸಾರ್ವಜನಿಕರು ತಮ್ಮ ಕೆಲಸಗಳನ್ನು ಆದಷ್ಟು ಗ್ರಾಮ-1ರಲ್ಲಿಯೇ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಕಚೇರಿಯಲ್ಲಿನ ಸರ್ವೇ ವಿಭಾಗ, ಆಹಾರ ವಿಭಾಗ, ಆರ್‌ಆರ್‌ಟಿ, ಭೂಮಿ ಕೇಂದ್ರ, ಎಲ್‍ಎನ್‍ಡಿ ಶಾಖೆ, ಯುಎನ್‍ಡಿ ಶಾಖೆ, ಮುಜರಾಯಿ ಹಾಗೂ ಸಾಮಾಜಿಕ ಭದ್ರತೆ ವಿಭಾಗಗಳಿಗೆ ಭೇಟಿ ನೀಡಿ ಟೇಬಲ್ ಹಾಗೂ ಕಡತಗಳ ತಪಾಸಣೆ ಮಾಡಿದರು.

ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ, ತಹಶೀಲ್ದಾರ್ ಎಚ್.ಜೆ. ರಶ್ಮಿ, ಗ್ರೇಡ್ -2 ತಹಶೀಲ್ದಾರ್ ಸುರೇಶ್ ನಾಯ್ಕ, ಪಿಎಸ್‍ಐ ಬಸವನಗೌಡ ಬಿರಾದರ್, ಉಪತಹಶೀಲ್ದಾರ್ ಮಂಜುನಾಥ್ ಇಂಗಳಗೊಂದಿ, ಪರಮೇಶ್‍ನಾಯ್ಕ, ಗ್ರಾಮ ಲೆಕ್ಕಾಧಿಕಾರಿಗಳಾದ ಬಸವರಾಜ್, ಧರ್ಮಪ್ಪ, ಪೊಲೀಸ್ ಸಿಬ್ಬಂದಿ ಯೋಗೀಶ್, ವೆಂಕಟೇಶ್‍ನಾಯ್ಕ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗರಾಜ್ ಮಾದೇನಹಳ್ಳಿ, ಕುಂದೂರು ಶಾಂತರಾಜ್, ಮಹಾಂತೇಶ್ ಹಾಜರಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು