ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಂಗ್‌ ಪಡೆಯದೇ ವಾಣಿಜ್ಯ ತೆರಿಗೆ ಅಧಿಕಾರಿಯಾದ ಗೃಹಿಣಿ ಶ್ವೇತಶ್ರೀ

ಮಗುವಿನ ಪೋಷಣೆ; ಬಾಲ್ಯದ ಕನಸೂ ಸಾಕಾರ
Last Updated 28 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ದಾವಣಗೆರೆ: ದೂರದ ಚೆನ್ನೈನಲ್ಲಿ ಮೂರು ವರ್ಷದ ಮಗನನ್ನು ಪೋಷಿಸುತ್ತ ಸಿಕ್ಕ ಸಮಯದಲ್ಲೇ ಅಧ್ಯಯನ ಮಾಡಿ ಮೊದಲ ಯತ್ನದಲ್ಲೇ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರದ ಎಂಜಿನಿಯರಿಂಗ್‌ ಪದವೀಧರೆ ಎಸ್‌.ಸಿ. ಶ್ವೇತಶ್ರೀ ಸಾಧನೆ, ಉಳಿದ ತಾಯಂದಿರಿಗೂ ಸ್ಫೂರ್ತಿಯಾಗಿದೆ.

ಯಾವುದೇ ಕೋಚಿಂಗ್‌ ಪಡೆಯದೇ, ಸ್ವಾಧ್ಯಾಯ ಕೈಗೊಂಡು 2017ನೇ ಸಾಲಿನ ಕೆಪಿಎಸ್‌ಸಿ ಪರೀಕ್ಷೆ ಬರೆದು ರ‍್ಯಾಂಕ್‌ ಗಳಿಸಿದ ಶ್ವೇತಶ್ರೀ ಅವರು, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂಬ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ದಾವಣಗೆರೆಯ ನಿವೃತ್ತ ಉಪ ಪ್ರಾಂಶುಪಾಲ ಚನ್ನಬಸಪ್ಪ ಎಸ್‌. ಹಾಗೂ ಕೋಟೇಶ್ವರಮ್ಮ ದಂಪತಿಯ ಪುತ್ರಿ ಶ್ವೇತಶ್ರೀ ಅವರ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣ ನಡೆದಿದ್ದು ಜಗಳೂರಿನಲ್ಲಿ. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದ ಇವರು ಕ್ಯಾಂಪಸ್‌ ಸಂದರ್ಶನ ಮೂಲಕ ಸಾಫ್ಟ್‌ವೇರ್‌ ಕಂಪನಿಯಲ್ಲಿ ನೌಕರಿ ಪಡೆದುಕೊಂಡಿದ್ದರು. ಮೂರು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ಚೆನ್ನೈನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಕೋನಸಾಗರದ ಟಿ.ಎಂ. ವಿಕಾಸ್‌ ಅವರೊಂದಿಗೆ ಮದುವೆಯಾಗಿ ಚೆನ್ನೈನಲ್ಲಿ ಗೃಹಿಣಿಯಾಗಿ ಜೀವನ ಸಾಗಿಸುತ್ತಿದ್ದರು. ಮಗ ಆರ್ಯನ್‌ ಜನಿಸಿದ ಬಳಿಕ ಆತನ ಪೋಷಣೆ ಮಾಡುತ್ತಲೇ ನಾಗರಿಕ ಸೇವಾ ಪರೀಕ್ಷೆ ಬರೆದು ಅಧಿಕಾರಿಯಾಗಬೇಕು ಎಂಬ ಕನಸಿಗೆ ನೀರೆರೆಯುತ್ತಿದ್ದರು.

‘ಚೆನ್ನೈನಲ್ಲಿ ಕೆಪಿಎಸ್‌ಸಿ ಪರೀಕ್ಷೆಗೆ ಕೋಚಿಂಗ್‌ ನೀಡುವವರು ಇರಲಿಲ್ಲ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ನೇಹಿತರ ಮಾರ್ಗದರ್ಶನ ಪಡೆದು, ನಾನೇ ಹಲವು ಪುಸ್ತಕಗಳನ್ನು ತರಿಸಿಕೊಂಡು ಅಧ್ಯಯನ ಮಾಡಿದೆ. ಮನೆಕೆಲಸ ಮುಗಿಸಿ, ಮಗು ಮಲಗಿದ ಸಮಯದಲ್ಲೆಲ್ಲ ಓದುತ್ತಿದ್ದೆ. ನಾವು ಎಷ್ಟು ಗಂಟೆ ಓದುತ್ತೇವೆ ಎಂಬುದಕ್ಕಿಂತ ಓದಿದ್ದನ್ನು ಎಷ್ಟು ಮನದಟ್ಟು ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯ’ ಎಂದು ಶ್ವೇತಶ್ರೀ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಕ್ಕಳಾದ ಮೇಲೆ ಓದಲು ಸಮಯ ಸಿಗುವುದಿಲ್ಲ ಎಂದು ಹೆಚ್ಚಿನ ಹೆಣ್ಣುಮಕ್ಕಳು ಓದುವುದನ್ನೇ ನಿಲ್ಲಿಸುತ್ತಿದ್ದಾರೆ. ಆದರೆ, ಸ್ಪಷ್ಟ ಗುರಿ; ಸಮಯ ನಿರ್ವಹಣೆ ಜೊತೆಗೆ ಛಲವೂ ಇದ್ದಾಗ ಸಾಧಿಸಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿ. ತಾಯಿಯ ಜವಾಬ್ದಾರಿ ಜೊತೆಗೆ ಬಾಲ್ಯದ ಕನಸನ್ನೂ ಈಡೇರಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಐಎಎಸ್‌ ಅಧಿಕಾರಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಹೀಗಾಗಿ ಕೆಪಿಎಸ್‌ಸಿ ಪರೀಕ್ಷೆಯನ್ನುಮತ್ತೆ ತೆಗೆದುಕೊಂಡು, ದೊಡ್ಡ ಹುದ್ದೆಗೆ ಆಯ್ಕೆಯಾಗಬೇಕು ಎಂಬ ಗುರಿ ಇದೆ’ ಎನ್ನುತ್ತಾರೆ ಶ್ವೇತಶ್ರೀ.

ಭರತನಾಟ್ಯವನ್ನೂ ಕಲಿತಿರುವ ಶ್ವೇತಶ್ರೀ ಅವರಿಗೆ ಕವನ ರಚಿಸುವ ಹವ್ಯಾಸವೂ ಇದೆ.

***

ನನ್ನ ಸಾಧನೆ ಮಗನಿಗೆ ಸ್ಫೂರ್ತಿಯಾಗಬೇಕು ಎಂಬ ಸಂಕಲ್ಪದೊಂದಿಗೆ ಈ ಸಾಧನೆ ಮಾಡಿದ್ದೇನೆ. ನನ್ನಿಂದ ಪ್ರೇರಣೆ ಪಡೆದು ಮಗನೂ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಕೆಲಸ ಮಾಡುವಂತಾಗಲಿ.

– ಎಸ್‌.ಸಿ. ಶ್ವೇತಶ್ರೀ, ಪ್ರೊಬೆಷನರಿ ವಾಣಿಜ್ಯ ತೆರಿಗೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT