ಸಿದ್ದೇಶ್ವರರನ್ನು ಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದೇಕೆ?

ಮಂಗಳವಾರ, ಏಪ್ರಿಲ್ 23, 2019
33 °C
ಕೆ‍ಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನೆ

ಸಿದ್ದೇಶ್ವರರನ್ನು ಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದೇಕೆ?

Published:
Updated:
Prajavani

ದಾವಣಗೆರೆ: ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಜಿ.ಎಂ. ಸಿದ್ದೇಶ್ವರ ಅವರನ್ನು ಆ ಸ್ಥಾನದಿಂದ ಏಕೆ ಕೆಳಗಿಳಿಸಲಾಯಿತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಹೇಳಿದರು.

‘ಅವರು ಮಂತ್ರಿ ಸ್ಥಾನ ನಿಭಾಯಿಸಲು ಅಸಮರ್ಥರು ಎಂಬ ಕಾರಣಕ್ಕಾಗಿಯೇ ಮೋದಿ ಅವರನ್ನು ಕೆಳಗಿಳಿಸಿದರು. ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದ ಸಿದ್ದೇಶ್ವರ ಲೋಕಸಭಾ ಸದಸ್ಯರಾಗಿಯೂ ಉತ್ತಮವಾಗಿ ಕೆಲಸ ಮಾಡಿಲ್ಲ. ಮೂರು ಬಾರಿ ಸಂಸದರಾದರೂ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡಿಲ್ಲ. ಇದು ಅವರೊಬ್ಬರ ಪ್ರಶ್ನೆ ಅಲ್ಲ; ರಾಜ್ಯದ ಬಿಜೆಪಿ ಎಂಪಿಗಳೆಲ್ಲರೂ ಮೋದಿ ಜಪ ಮಾಡುವುದರಲ್ಲೇ ನಿರತರಾದರೇ ಹೊರತು, ತಾವು ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸವನ್ನು ಮರೆತರು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಅವರಿಗೆ ಹೈಕಮಾಂಡ್‌ ಟಿಕೆಟ್ ನೀಡಿತ್ತು. ಅವರು ಬೇರೆ, ಬೇರೆ ಕಾರಣಗಳಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಲಿಲ್ಲ. ಹಾಗಾಗಿ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಜತೆ ಚರ್ಚಿಸಿಯೇ ಮಂಜಪ್ಪ ಅವರನ್ನು ಸೂಕ್ತ ವ್ಯಕ್ತಿ ಎಂದು ಸ್ಪರ್ಧೆಗೆ ಇಳಿಸಲಾಗಿದೆ. ಅವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಅವರನ್ನು ಸ್ಪರ್ಧೆಗೆ ಇಳಿಸಿರುವುದು ಒಳ್ಳೆಯ ತೀರ್ಮಾನ ಎಂದು ಈಗ ಮಾಹಿತಿ ಬರುತ್ತಿದೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಗೆಲುವು ನಮ್ಮದಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದೇಶ್ವರ ಎದುರು ಮಲ್ಲಿಕಾರ್ಜುನ ಅವರೇ ಸೂಕ್ತ ಅಭ್ಯರ್ಥಿ ಎಂಬ ಮಾತು ಕೇಳಿಬರುತ್ತಿರುವಾಗಲೇ ಪಕ್ಷ ಮಂಜಪ್ಪ ಅವರಿಗೆ ಟಿಕೆಟ್‌ ನೀಡಿದ್ದು ಏಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವೊಮ್ಮೆ ರಾಜಕೀಯವಾಗಿ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಕಸ್ಮಿಕ ತೀರ್ಮಾನವೇ ಒಮ್ಮೊಮ್ಮೆ ಹೊಸ ನಾಯಕತ್ವವನ್ನು ರೂಪಿಸುತ್ತದೆ’ ಎಂದಷ್ಟೇ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಪದಾಧಿಕಾರಿಗಳಾದ ದಿನೇಶ್‌ ಕೆ.ಶೆಟ್ಟಿ, ಕೆ.ಎಸ್. ಬಸವಂತಪ್ಪ, ಅಯೂಬ್‌ ಪೈಲ್ವಾನ್‌, ಜೆಡಿಎಸ್‌ ಮುಖಂಡ ಗಣೇಶ ದಾಸಕರಿಯಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !