ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಅಮೃತಮಹೋತ್ಸವ ಮುಂದಿನ ಚುನಾವಣೆಗೆ ದಿಕ್ಸೂಚಿ: ಎಸ್‌ಎಸ್‌ಎಂ

Last Updated 7 ಆಗಸ್ಟ್ 2022, 6:27 IST
ಅಕ್ಷರ ಗಾತ್ರ

ದಾವಣಗೆರೆ: ಕುಂದವಾಡದ ಶಾಮನೂರು ಪ್ಯಾಲೇಸ್‌ ಮೈದಾನದಲ್ಲಿ ಆ.3ರಂದು ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಮೃತಮಹೋತ್ಸವ ಅಭೂತಪೂರ್ವ ಯಶಸ್ಸು ಕಂಡಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಭಿಪ್ರಾಯಿಸಿದರು.

ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಪ್ರವಾಹದ ರೀತಿಯಲ್ಲಿ ಬಂದಿದ್ದರು. ಸಣ್ಣ ಸಹಿತಕರ ಘಟನೆಯೂ ನಡೆಯದಂತೆ ಕಾರ್ಯಕ್ರಮ ಯಶಸ್ವಿಯಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಈ ಹುಮ್ಮಸ್ಸು ಮುಂದಿನ ಚುನಾವಣೆಯ ವರೆಗೂ ಕಾಯ್ದುಕೊಳ್ಳಬೇಕಿದೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಹಿಂದೆ ಸೋನಿಯಾಗಾಂಧಿಯವರು ಬಂದಾಗಲೂ ಇಷ್ಟು ಜನ ಸೇರಿರಲಿಲ್ಲ. ಬಿಜೆಪಿಯವರೇ ಅವರ ಕಾಲ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ. ಹಾಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ’ ಎಂದರು.

‘ವೇದಿಕೆ ಕಾರ್ಯಕ್ರಮದಿಂದ ಹಿಡಿದು ಉಪಾಹಾರ, ಊಟದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿ ಆಗಿತ್ತು. 5–6 ಲಕ್ಷ ಮಂದಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೆವು. ಆದರೆ ಜನರ ಅದನ್ನು ಮೀರಿ ಬಂದರು. ಸುಮಾರು 15 ಲಕ್ಷ ಸೇರಿದ್ದರು. ಪೊಲೀಸ್ ಇಲಾಖೆ ಇನ್ನೂ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದಿತ್ತು. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಹೀಗೆ ಮಾಡಿದರೂ ಗೊತ್ತಿಲ್ಲ. ರಾಹುಲ್ ಗಾಂಧಿ ಬರಲು 2 ಗಂಟೆ ತಡವಾಯಿತು. ಹೆದ್ದಾರಿಯಲ್ಲಿ ಒಂದು ಕಡೆ ಪಾರ್ಕಿಂಗ್ ಮಾಡಿ ಮತ್ತೊಂದು ಕಡೆ ಜನ ಹೋಗಲು ವ್ಯವಸ್ಥೆ ಮಾಡಿದ್ದೆರ ಚೆನ್ನಾಗಿತ್ತು’ ಎಂದು ಅಭಿಪ್ರಾಯ ಪಟ್ಟರು.

ಎಎಸ್‌ಯುಐ, ಸೇವಾದಳ, ಮಹಿಳಾ ಕಾಂಗ್ರೆಸ್, ಇನ್‌ಟೆಕ್ ಉತ್ತಮ ಕೆಲಸ ಮಾಡಿದೆ. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಇತಿಹಾಸ ನಿರ್ಮಿಸಿದ ಕಾರ್ಯಕ್ರಮವಾಯಿತು. ನನ್ನ ಜೀವಮಾನದಲ್ಲಿಯೇ ಇಂಥ ಕಾರ್ಯಕ್ರಮ ನೋಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಜನ ತಾಳ್ಮೆಯಿಂದ ಎಲ್ಲವನ್ನೂ ನೋಡುತ್ತಾ ಬಂದಿದ್ದರು. ಬಿಜೆಪಿ ಸರ್ಕಾರಗಳು ಮಧ್ಯಮ ವರ್ಗವನ್ನು ಬಡವರನ್ನಾಗಿ ಮಾಡಿದಿದೆ. ಇನ್ನು ಬಡವರ ಗತಿಯೇನು. ಹಾಗಾಗಿ ತಾಳ್ಮೆಯ ಕಟ್ಟೆ ಒಡೆದಿದ್ದರಿಂದ ಈ ಕಾರ್ಯಕ್ರಮಕ್ಕೆ ‍ಪ್ರವಾಹದಂತೆ ಬಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಕಾರ್ಯಕ್ರಮ, ಕಳಂಕ ರಹಿತ ಆಡಳಿತವನ್ನು ಜನ ನೋಡಿದ್ದರು. ಈಗ ಶೇ 40ರ ಆಡಳಿತವನ್ನು ನೋಡುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಸರ್ಕಾರ ಮತ್ತೆ ಬಂದರೆ ಜನರಿಗೆ ಅನುಕೂಲ ಆಗುತ್ತದೆ ಎಂಬ ಭರವಸೆಯಲ್ಲಿ ಜನ ಬಂದಿದ್ದರು ಎಂದು ವಿವರಿಸಿದರು.

ಯಾರು ಮುಖ್ಯಮಂತ್ರಿ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಅದರ ಬಗ್ಗೆ ಗೊಂದಲಗಳಿಲ್ಲ. ಬಿಜೆಪಿಯವರು ಜನೋತ್ಸವ ಮಾಡಲಿ, ಇಲ್ಲವೇ ಮೋದಿ ಉತ್ಸವ ಬೇಕಾದರೂ ಮಾಡಲಿ. ಕಾಂಗ್ರೆಸ್‌ಗೆ ಭಯವಿಲ್ಲ. ಈಗ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾವು ಆರಂಭಗೊಂಡಿದೆ. ಮೈಸೂರು, ಕಲ್ಬುರ್ಗಿಯಲ್ಲಿ ಸಮಾವೇಶಗಳನ್ನು ಮಾಡಿ, ರಾಜ್ಯಾದ್ಯಂತ ಕಾಲ್ನಡಿಗೆ ಮೊದಲಾದ ಕಾರ್ಯಕ್ರಮಗಳು ಮಾಡಿ ಆ ಕಾವು ಹಾಗೇ ಇರುವಂತೆ ಕಾಪಾಡಿಕೊಳ್ಳುತ್ತೇವೆ ಎಂದರು.

ಕಾಂಗ್ರೆಸ್‌ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಾಗಾನಹಳ್ಳಿ ಪರಶುರಾಮ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮುದೇಗೌಡ್ರು ಗಿರೀಶ್, ಬೇತೂರು ಕರಿಬಸಪ್ಪ, ಕೆ.ಎಸ್. ಬಸವಂತಪ್ಪ, ಆರ್.ಎಚ್. ನಾಗಭೂಷಣ್, ಕಾಡಜ್ಜಿ ಚಂದ್ರಣ್ಣ, ಜಯಕುಮಾರ್, ಪಾಲಿಕೆಯ ಸದಸ್ಯ ಕಲ್ಲಳ್ಳಿ ನಾಗರಾಜ್, ಮಾರುತಿ ಶಾಮನೂರು, ಎಚ್‌.ಒ. ಗಿರಿಧರ್‌, ಅಮಾನುಲ್ಲಾ ಇದ್ದರು.

ಕೈಗಾರಿಕಾ ಕಾರಿಡಾರ್‌ಗೆ ವಿರೋಧ

ಮೆಳ್ಳೆಕಟ್ಟೆ, ಅಣಜಿ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಮಾಡುವುದು ಸರಿಯಲ್ಲ. ಕೈಗಾರಿಕೆಗೆ ಸೂಕ್ತವಾದ ಜಾಗದಲ್ಲಿ ಮಾಡಬೇಕೆ ಹೊರತು ಇವರಿಗೆ ಖುಷಿ ಬಂದಲ್ಲಿ ಮಾಡುವುದಲ್ಲ ಎಂದು ಮಲ್ಲಿಕಾರ್ಜುನ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು

ಕೈಗಾರಿಕೆಗಳನ್ನು ಮಾಡಲು ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲ ಸೌಲಭ್ಯಗಳು ಬೇಕು. ಅವುಗಳ ಲಭ್ಯತೆ ಆಧರಿಸಿ ಯೋಜನೆ ರೂಪಿಸಬೇಕು ಎನ್ನುವ ಸಾಮಾನ್ಯ ಜ್ಞಾನ ಬೇಕು. ಡಿನೋಟಿಫೈ ಮಾಡಿ, ಜನರನ್ನು ಹೆದರಿಸಿ ಶೇ 40 ಕಮಿಷನ್ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT