ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲ ಗೆಹಲೋತ್‌ ವಿರುದ್ಧ ಪ್ರತಿಭಟನೆ

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ, ಬೀದಿಗೆ ಇಳಿದ ‘ಅಹಿಂದ’ ಮುಖಂಡರು
Published : 17 ಆಗಸ್ಟ್ 2024, 16:29 IST
Last Updated : 17 ಆಗಸ್ಟ್ 2024, 16:29 IST
ಫಾಲೋ ಮಾಡಿ
Comments

ದಾವಣಗೆರೆ: ‘ಮುಡಾ’ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ವಿರುದ್ಧ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಜೆಡಿಎಸ್‌ ನಿರ್ದೇಶನದಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲರ ಆದೇಶ ಹೊರಬೀಳುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಕಾರರು ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಬಳಿ ಜಮಾಯಿಸಿದರು. ಹೋರಾಟದ ಕುರಿತು ಕೆಲಹೊತ್ತು ಚರ್ಚೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಬೀದಿಗೆ ಇಳಿದರು.

ಜಯದೇವ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಟೈರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಪಟ್ಟುಬಿಡದ ಪ್ರತಿಭಟನಕಾರರು ರಸ್ತೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಸಿದರು. ಇದರಿಂದ ಪಿಬಿ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪ್ರಾಸಿಕ್ಯೂಷನ್‌ ನೆಪದಲ್ಲಿ ಸಿದ್ದರಾಮಯ್ಯ ಅವರಿಗೆ ಕಿರುಕುಳ ನೀಡುವುದನ್ನು ‘ಅಹಿಂದ’ ವರ್ಗ ಸಹಿಸುವುದಿಲ್ಲ. ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ರಾಜೀನಾಮೆ ಕೇಳುತ್ತಿರುವುದು ಜನವಿರೋಧಿ ನೀತಿಯಾಗಿದೆ. ಕಿರುಕುಳ ಮುಂದುವರಿದರೆ ರಾಜ್ಯದಲ್ಲಿ ನಡೆಯುವ ಬೆಳವಣಿಗೆಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ನಿರ್ದೇಶನದಂತೆ ರಾಜ್ಯಪಾಲ ಗೆಹಲೋತ್‌ ವರ್ತಿಸುತ್ತಿದ್ದಾರೆ. ‘ಅಹಿಂದ’ ವರ್ಗದ ನಾಯಕರಾದ ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ರಾಜಭವನವನ್ನು ದುರುಪಯೋಗಪಡಿಸಿಕೊಂಡು ಒಳಸಂಚು ರೂಪಿಸಲಾಗಿದೆ. ಶೋಷಿತ ಸಮುದಾಯ ಇದನ್ನು ಖಂಡಿಸುತ್ತದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಧೂಡಾ’ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ, ಪಾಲಿಕೆ ಸದಸ್ಯ ಉದಯ್‌ಕುಮಾರ್‌, ಬಂಜಾರ್ ಸಮಾಜದ ಮುಖಂಡ ಅನಂತ ನಾಯ್ಕ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಮುಸ್ಲಿಂ ಸಮಾಜದ ಮುಖಂಡ ಅಯೂಬ್ ಖಾನ್, ಜಿಲ್ಲಾ ಈಡಿಗ ಸಮಾಜದ ಎ.ನಾಗರಾಜ್, ಕತ್ತಲಗೆರೆ ತಿಪ್ಪಣ್ಣ, ಎ.ಕೆ.ನಾಗಪ್ಪ, ತಕಡಿ ಮಂಜುನಾಥ್, ದೀಪಕ್ ಜೋಗಪ್ಪನವರ್ ಇದ್ದರು.

ಸಿದ್ದರಾಮಯ್ಯ ನಾಯಕತ್ವಕ್ಕೆ ಮನ್ನಣೆ ನೀಡಿದ ರಾಜ್ಯದ ಜನರು ಅಧಿಕಾರ ಕೊಟ್ಟಿ್ದ್ದಾರೆ. ಈ ಜನಮನ್ನಣೆ ಸಹಿಸದ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ.
–ಎಚ್‌.ಬಿ.ಮಂಜಪ್ಪ, ಅಧ್ಯಕ್ಷ ಕಾಂಗ್ರೆಸ್‌ ಜಿಲ್ಲಾ ಘಟಕ
136 ಶಾಸಕರ ಬಲದೊಂದಿಗೆ ಸಿದ್ದರಾಮಯ್ಯ ಸುಭದ್ರ ಸರ್ಕಾರ ರಚಿಸಿದ್ದಾರೆ. ಇಂತಹ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿರುವ ಬಿಜೆಪಿಗೆ ಸಂವಿಧಾನದ ಮೇಲೆ ಗೌರವ ಇಲ್ಲ.
–ಹೊದಿಗೆರೆ ರಮೇಶ್‌, ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT