‘ಕಮಲ’ ವಿಜಯಯಾತ್ರೆಗೆ ಸಾರಥಿಯಾದ ಸಿದ್ದೇಶ್ವರ

ಗುರುವಾರ , ಜೂನ್ 27, 2019
30 °C
ಬಿಜೆಪಿಯ ಎರಡೂವರೆ ದಶಕಗಳ ಗೆಲುವಿನ ಮ್ಯಾರಾಥಾನ್‌ಗಿಲ್ಲ ಹರ್ಡಲ್ಸ್‌!

‘ಕಮಲ’ ವಿಜಯಯಾತ್ರೆಗೆ ಸಾರಥಿಯಾದ ಸಿದ್ದೇಶ್ವರ

Published:
Updated:
Prajavani

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಜಿಲ್ಲೆಯಲ್ಲಿ ‘ಕಮಲ’ದ ವಿಜಯಯಾತ್ರೆಯನ್ನು ಸಾರಥಿಯಾಗಿ ಮುನ್ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಆರನ್ನು ಗೆದ್ದುಕೊಂಡಿದ್ದ ಬಿಜೆಪಿಯ ಗೆಲುವಿನ ಮ್ಯಾರಾಥಾನ್‌ಗೆ ಯಾವುದೇ ಹರ್ಡಲ್ಸ್‌ ಇಲ್ಲದಿರುವುದು ಪಕ್ಷದ ಶಕ್ತಿಯನ್ನು ಇಮ್ಮಡಿಗೊಳಿಸಿದೆ.

ಕಳೆದ ಮೂರು ಬಾರಿಯೂ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದ ಸಿದ್ದೇಶ್ವರ, ಈ ಬಾರಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ, ‘ಯಾವುದೇ ಕೆಲಸವನ್ನು ಮಾಡಿಲ್ಲ’ ಎಂದು ತಮ್ಮನ್ನು ಟೀಕಿಸುತ್ತಿದ್ದ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಸಿದ್ದೇಶ್ವರ ನಾಮಪತ್ರ ಸಲ್ಲಿಸುವ ದಿನ ದಾವಣಗೆರೆಗೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ‘ಈಗಾಗಲೇ ನಮ್ಮ ಸಿದ್ದೇಶಣ್ಣ ಗೆದ್ದಾಗಿದೆ; ಎಷ್ಟು ಮತಗಳ ಅಂತರದಿಂದ ಎಂಬುದನ್ನು ಲೆಕ್ಕಮಾಡುವುದು ಮಾತ್ರ ಬಾಕಿ ಇದೆ’ ಪತ್ರಕರ್ತರ ಜೊತೆ ಖುಷಿ ಹಂಚಿಕೊಂಡಿದ್ದರು. ಯಡಿಯೂರಪ್ಪ ನುಡಿದ ಭವಿಷ್ಯ ಸತ್ಯವಾಗಿದೆ ಎಂಬುದು ಫಲಿತಾಂಶವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.

ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎಚ್‌.ಬಿ. ಮಂಜಪ್ಪ ಅವರು ಅಹಿಂದ ಸಮಾಜದ ಮತ ಬ್ಯಾಂಕ್‌, ಮೈತ್ರಿ ಪಕ್ಷಗಳ ಬೆಂಬಲ ತಮ್ಮ ‘ಕೈ’ ಹಿಡಿಯಬಹುದು ಎಂದು ಲೆಕ್ಕಹಾಕಿದ್ದರು. ಆದರೆ, ದೇಶದ ಎಲ್ಲೆಡೆ ಬೀಸಿದ ಪ್ರಧಾನಿ ನರೇಂದ್ರ ಮೋದಿಯ ಪ್ರಬಲ ಅಲೆ ದಾವಣಗೆರೆಯಲ್ಲೂ ಬೀಸಿದ್ದು, ಮಂಜಪ್ಪ ಅವರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.

ಕಳೆದ ಮೂರು ಚುನಾವಣೆಗಳಲ್ಲೂ ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನಡುವೆ ಸ್ಪರ್ಧೆ ನಡೆದಿದ್ದರಿಂದ ಲಿಂಗಾಯತ ಮತಗಳು ವಿಭಜನೆಗೊಳ್ಳುತ್ತಿದ್ದವು. ಈ ಬಾರಿ ಕುರುಬ ಸಮಾಜದ ಮಂಜಪ್ಪ ಅವರು ‘ಅಹಿಂದ’ ಮತಗಳನ್ನು ಸೆಳೆಯಲು ಮುಂದಾದಾಗ ದ್ರುವೀಕರಣಗೊಂಡ ಲಿಂಗಾಯತ ಮತಗಳು ಕ್ಷೇತ್ರದಲ್ಲಿ ಮತ್ತೆ ‘ಕಮಲ’ ಅರಳಲು ನೀರೆರೆಯಿತು.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇದು 12ನೇ ಚುನಾವಣೆಯಾಗಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ಆರು ಬಾರಿ ಅಧಿಕಾರ ಹಂಚಿಕೊಂಡಿದೆ. ಜಿ.ಎಂ. ಸಿದ್ದೇಶ್ವರ ನಾಲ್ಕು ಬಾರಿಯಾದರೆ, ಅವರ ತಂದೆ ಜಿ. ಮಲ್ಲಿಕಾರ್ಜುನಪ್ಪ ಎರಡು ಬಾರಿ ಆಯ್ಕೆಯಾಗಿರುವುದು ವಿಶೇಷ. ‘25 ವರ್ಷಗಳಿಂದ ಒಂದೇ ಕುಟುಂಬದವರು ಅಧಿಕಾರದಲ್ಲಿದ್ದಾರೆ’ ಎಂಬ ಕಾಂಗ್ರೆಸ್‌ ಟೀಕೆಗೂ ಮತದಾರ ಪ್ರಭು ಕಿವಿಗೊಡಲಿಲ್ಲ.

ಕ್ಷೇತ್ರದಲ್ಲಿ ಒಟ್ಟು 25 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಸಿದ್ದೇಶ್ವರ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿ ಮಂಜಪ್ಪ ನಡುವೆಯೇ ನೇರ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ ಉಂಟಾದಾಗಲೇ ಬಿಜೆಪಿ ಪಾಳಯದಲ್ಲಿ ಗೆಲ್ಲುವ ವಿಶ್ವಾಸ ಇಮ್ಮಡಿಗೊಂಡಿತ್ತು.

ಸತತ ಮೂರು ಬಾರಿ ಸಿದ್ದೇಶ್ವರ ವಿರುದ್ಧ ಸೋತಿದ್ದ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪರಾಭವಗೊಂಡ ಬಳಿಕ ಸಾರ್ವಜನಿಕ ಜೀವನದಿಂದ ದೂರವಾಗಿದ್ದರು. ಕಾರ್ಯಕರ್ತರು ಒತ್ತಾಯಿಸಿದರೂ ಕ್ಷೇತ್ರದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಅರಿತು ಮಲ್ಲಿಕಾರ್ಜುನ ಸ್ಪರ್ಧಿಸಲು ಹಿಂದೇಟು ಹಾಕಿದ್ದರು.

ಶಾಮನೂರು ಶಿವಶಂಕರಪ್ಪ ತಮಗೆ ನೀಡಿದ ಟಿಕೆಟ್‌ ನಿರಾಕರಿಸಿದ ಬಳಿಕ ಕೆಪಿಸಿಸಿ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ಗೆ ಟಿಕೆಟ್‌ ನೀಡಲು ಮುಂದಾಗಿತ್ತು. ಆದರೆ, ಅಧಿಕಾರ ತಮ್ಮ ಕೈಯಲ್ಲೇ ಇರಬೇಕು ಎಂಬ ಲೆಕ್ಕಾಚಾರಕ್ಕೆ ಮಲ್ಲಿಕಾರ್ಜುನ ಅವರು ತಮ್ಮ ‘ಶಿಷ್ಯ’ ಮಂಜಪ್ಪ ಅವರಿಗೆ ಟಿಕೆಟ್‌ ಕೊಡಿಸಿದ್ದರು. ಚುನಾವಣಾ ಉಸ್ತುವಾರಿಯಾಗಿದ್ದ ಮಲ್ಲಿಕಾರ್ಜುನ ಅವರು ತಮ್ಮ ‘ಶಿಷ್ಯ’ನಿಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗದೇ ಇರುವ ಮೂಲಕ ಪರೋಕ್ಷವಾಗಿ ತಮ್ಮ ಸಾಂಪ್ರದಾಯಿಕ ರಾಜಕೀಯ ವೈರಿ ಸಿದ್ದೇಶ್ವರ ಎದುರು ಮತ್ತೊಮ್ಮೆ ಸೋತಂತಾಗಿದೆ.

ಸಿದ್ದೇಶ್ವರ ಗೆಲುವು ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದೇ 29ರಂದು ನಡೆಯಲಿರುವ ಹರಿಹರ ನಗರಸಭೆ ಹಾಗೂ ಹರಪನಹಳ್ಳಿ ಪುರಸಭೆ ಚುನಾವಣೆಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸುವಲ್ಲಿ ಈ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ. ಶೀಘ್ರದಲ್ಲೇ ನಡೆಯಲಿರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲೂ ಅಧಿಕಾರದ ಗದ್ದುಗೆಯನ್ನು ಬಿಜೆಪಿ ಏರಲು ಇದು ನಾಂದಿ ಹಾಡಬಹುದು ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ.

ಒಂದೇ ಬಾರಿಗೆ ಎರಡು ದಾಖಲೆ

ಕುರುಬ ಸಮಾಜದ ಮುಖಂಡರಾಗಿದ್ದ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ 1984, 1989, 1991ರಲ್ಲಿ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಸಿದ್ದೇಶ್ವರ ಅವರು 2004, 2009 ಹಾಗೂ 2014ರಲ್ಲಿ ಗೆಲ್ಲುವ ಮೂಲಕ ಚನ್ನಯ್ಯ ಒಡೆಯರ್‌ ಸಾಧನೆಯನ್ನು ಸರಿಗಟ್ಟಿದ್ದರು. ಈ ಬಾರಿಯೂ ಗೆಲ್ಲುವ ಮೂಲಕ ಸತತವಾಗಿ ನಾಲ್ಕು ಬಾರಿಗೆ ಗೆದ್ದ ಏಕೈಕ ಅಭ್ಯರ್ಥಿ ಎಂಬ ದಾಖಲೆಯ ಮುಕುಟವನ್ನು ಏರಿಸಿಕೊಂಡರು.

ಈ ಹಿಂದೆ ನಡೆದ 11 ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಟಿ.ವಿ. ಚಂದ್ರಶೇಖರಪ್ಪ 1980ರಲ್ಲಿ 1,40,996 ಮತಗಳ ಅಂತರದಿಂದ ಗೆದ್ದಿರುವುದೇ ಅತಿ ಹೆಚ್ಚಿನ ಅಂತರದ ಗೆಲುವಾಗಿತ್ತು. ಈ ಬಾರಿ ಸಿದ್ದೇಶ್ವರ ಅವರು 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದೂ ಈಗ ದಾಖಲೆಯ ಪಟ್ಟಿಗೆ ಸೇರಿದೆ.

ಬಿಜೆಪಿ ಗೆಲುವಿಗೆ ಕಾರಣ

* ಪುಲ್ವಾಮಾ ದಾಳಿಯ ಬಳಿಕ ಕ್ಷೇತ್ರದಲ್ಲಿ ಎದ್ದಿದ್ದ ಮೋದಿ ಅಲೆ

* ಲಿಂಗಾಯತ ಮತಗಳ ದ್ರುವೀಕರಣ

* ಸಿದ್ದೇಶ್ವರ ಹಳ್ಳಿ–ಹಳ್ಳಿಗಳಿಗೂ ಹೋಗಿ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದು

* ಎಂಟು ಕ್ಷೇತ್ರಗಳ ಪೈಕಿ ಆರು ಶಾಸಕರು ಬಿಜೆಪಿಯವರೇ ಆಗಿರುವುದು

* ಮೂರು ತಿಂಗಳ ಮೊದಲಿನಿಂದಲೇ ಬಿಜೆಪಿ ವ್ಯವಸ್ಥಿತವಾಗಿ ಪ್ರಚಾರ ನಡೆಸಿರುವುದು

* ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಯಲ್ಲಿನ ಗೊಂದಲ

* ದಾವಣಗೆರೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ಬಗ್ಗೆ ಕಾಂಗ್ರೆಸ್‌ ನಾಯಕರ ತಾತ್ಸಾರ; ಸ್ಥಳೀಯ ನಾಯಕರ ನಿರುತ್ಸಾಹ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !