ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಂದೂರು: ಪ್ರಕರಣ ಹಿಂಪಡೆಯಲು ಆಗ್ರಹ

ಸಿಗಂದೂರು ನವರಾತ್ರಿ ಕಾರ್ಯಕ್ರಮದಲ್ಲಿ ಪ್ರಣವಾನಂದ ಸ್ವಾಮೀಜಿ
Last Updated 2 ಅಕ್ಟೋಬರ್ 2022, 5:36 IST
ಅಕ್ಷರ ಗಾತ್ರ

ತುಮರಿ: ಪಾರಂಪರಿಕ ನೆಲೆಗಟ್ಟಿನ, ಸಾಮಾಜಿಕ ಚಿಂತನೆಯುಳ್ಳ ಹಿಂದುಳಿದ ವರ್ಗದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲಿರುವ ಎಲ್ಲ ಪ್ರಕರಣ ಹಿಂಪಡೆದು ಧರ್ಮಾಧಿಕಾರಿಗಳಿಗೆ ಯಥಾಸ್ಥಿತಿ ಧರ್ಮ ಸೇವೆಗೆ ಅವಕಾಶ ನೀಡದಿದ್ದರೆ ಮಂಗಳೂರು ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನವರೆಗೆ 600 ಕಿ.ಮೀ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಘೋಷಿಸಿದರು.

ತಾಲ್ಲೂಕಿನ ಶರಾವತಿ ಕಣಿವೆಯ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ 6ನೇ ದಿನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹಿಂದುಳಿದ ವರ್ಗಗಳ ದೇವಸ್ಥಾನಕ್ಕೆ ಸರ್ಕಾರ ಸಲಹಾ ಸಮಿತಿ ರಚನೆ ಮಾಡಿದೆ. ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಒಂದಿಷ್ಟು ಸುವ್ಯವಸ್ಥೆ ಕೈಗೊಂಡಿದ್ದಕ್ಕೆ ಧರ್ಮಾಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಏರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರ ಹಿಂದೆ ಸ್ಥಳೀಯ ಶಾಸಕರ ಒತ್ತಾಸೆಯಿದೆ. ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರಿ ಪ್ರಾಯೋಜಿತ ತಂತ್ರಗಳ ಮೂಲಕ ಒತ್ತಡ ಹೇರಿ ದೇವಸ್ಥಾನ ಅಸ್ಥಿರ ಗೊಳಿಸುವ ಪ್ರಯತ್ನ ಸಾಗಿದ್ದು ಇದನ್ನು ದೇವಿಯ ಭಕ್ತರು ಸಹಿಸಲು ಸಾಧ್ಯವಿಲ್ಲ’ ಎಂದರು.

ದೇವಸ್ಥಾನಕ್ಕಾಗಿ 600 ಕೀ ಮೀ ಪಾದಯಾತ್ರೆ: ಸಿಗಂದೂರು ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದು, ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆಗೆ ಹಾಗೂ ಸಿಗಂದೂರು ದೇವಸ್ಥಾನಕ್ಕೆ 12 ಎಕರೆ ಪ್ರದೇಶ ಮಂಜೂರಾತಿ ನೀಡಲು ಆಗ್ರಹಿಸಿ ಸಿಗಂದೂರು ಚೌಡೇಶ್ವರಿ ದೇವಿಗೆ ಭಾವಚಿತ್ರದೊಂದಿಗೆ ರಾಜ್ಯದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ಈಡಿಗ ಸಮಾಜದ ಪ್ರಮುಖರ ಬೆಂಬಲದೊಂದಿಗೆ ಶೀಘ್ರದಲ್ಲೇ ಮಂಗಳೂರು–ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನವರೆಗೆ 40 ದಿನಗಳ ಸುಮಾರು 600 ಕಿ.ಮೀ ಪಾದಯಾತ್ರೆ ನಡೆಸಲಾಗುವುದು ಎಂದರು.

ನವರಾತ್ರಿಯ ಆಚರಣೆ ಕೇವಲ ಪೂಜೆ, ಪ್ರವಚನಕ್ಕೆ ಸೀಮಿತವಾಗದೇ ಸಮಾಜದಲ್ಲಿಯ ನ್ಯೂನತೆ, ತಲೆಮಾರುಗಳ ರೈತರ ಪರಿಶ್ರಮದ ಬಗ್ಗೆ ವಿಮರ್ಶೆಯ ಅಗತ್ಯವಿದೆ. ಶರಾವತಿ ಮುಳುಗಡೆ ಸಂತ್ರಸ್ತರು ತಲೆಮಾರುಗಳಿಂದ ತಮ್ಮ ನ್ಯಾಯಕ್ಕಾಗಿ ಹೋರಾಡಿದರು ನ್ಯಾಯ ಸಿಗುತ್ತಿಲ್ಲ. ಇದು ಆಧುನಿಕ ಸರ್ಕಾರದ ವ್ಯವಸ್ಥೆಯೇ ಎಂದು ಪ್ರಶ್ನಿಸಿದರು.

‘ರಾಜ್ಯದ ಬಹುತೇಕ ದೇವಸ್ಥಾನಗಳು ಅನಧಿಕೃತವಾಗಿದ್ದರೂ ಸಿಗಂದೂರು ದೇವಸ್ಥಾನವನ್ನು ಎರೆಡು ವರ್ಷಗಳಿಂದ ಗುರಿ ಮಾಡಲಾಗುತ್ತಿದ್ದು ಹಿಂದುಳಿದ ವರ್ಗದ ದೇವಸ್ಥಾನ ಎಂಬುದೇ ಈ ಷಡ್ಯಂತ್ರಕ್ಕೆ ಕಾರಣವಾಗಿದೆ. ಈ ಮೂಲಕ ಹಿಂದುಳಿದ ವರ್ಗಗಳ ಧಾರ್ಮಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ’ ಎಂದು ಧರ್ಮಾಧಿಕಾರಿ ಎಸ್. ರಾಮಪ್ಪ ತೀವ್ರ ಅಸಮಾಧಾನ
ವ್ಯಕ್ತಪಡಿಸಿದರು.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ದೀಪೋತ್ಸವದಲ್ಲಿ ಆಪಾರ ಪ್ರಮಾಣದ ಭಕ್ತರು ಪಾಲ್ಗೊಂಡಿದ್ದರು.

ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್, ನಾರಾಯಣ ಗುರು ವಿಚಾರ ವೇದಿಕೆ ತಾಲ್ಲೂಕು ಉಪಾಧ್ಯಕ್ಷ ಗಣೇಶ ತುಮರಿ, ಈಡಿಗ ಸಂಘದ ಅಧ್ಯಕ್ಷ ತಿಮ್ಮಪ್ಪ ಕಾಮಗಾರು, ಕುದರೂರು ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಸಸಿಗೊಳ್ಳಿ, ಕಂದಾಯ ಇಲಾಖೆ ನಿವೃತ್ತ ಅಧಿಕಾರಿ ಪರಮೇಶ್ವರಪ್ಪ, ನಾಗರಾಜ ಕೈಸೋಡಿ, ಮುಡುಬ ರಾಘವೇಂದ್ರ, ಸತ್ಯನಾರಾಯಣ ಜಿ.ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT