ಬುಧವಾರ, ಆಗಸ್ಟ್ 17, 2022
23 °C
ಆಸ್ಪತ್ರೆ, ಸಾರ್ವಜನಿಕರಿಗಲ್ಲದೇ ಹೆದ್ದಾರಿಯಲ್ಲಿಯೂ ಆಹಾರ ನೀಡುತ್ತಿರುವ ಕಟಾವು ಯಂತ್ರ ಮಾಲೀಕರು

ಆಹಾರ ವಿತರಣೆಗೆ ಪ್ರೇರಣೆಯಾದ ಕೇರಳದಲ್ಲಿ ಸಿಕ್ಕ ಅನ್ನ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯೋಗೀಶ್‌ ಆವರಗೊಳ್ಳ ಕಳೆದ ಏಪ್ರಿಲ್‌ನಲ್ಲಿ ಕೇರಳದಿಂದ ಭತ್ತ ಕಟಾವು ಯಂತ್ರ ತರುವ ಸಮಯದಲ್ಲಿ ಅಲ್ಲಿ ಲಾಕ್‌ಡೌನ್‌ ಆಯಿತು. ಎಲ್ಲಿಯೂ ಹೋಟೆಲ್‌ಗಳಿಲ್ಲ. ಆಹಾರವಿಲ್ಲ. ಹಸಿವಿನಲ್ಲಿಯೇ ಬರುತ್ತಿದ್ದಾಗ, ಹೆದ್ದಾರಿಯಲ್ಲಿ ಯಾರೋ ಲಾರಿ ನಿಲ್ಲಿಸಿ ಅನ್ನದ ಪ್ಯಾಕೆಟ್‌ ವಿತರಿಸಿದರು. ಅದನ್ನು ತಿಂದು ಹಸಿವು ನೀಗಿಸಿಕೊಂಡರು. ಇದೇ ಪ್ರೇರಣೆಯಲ್ಲಿ ದಾವಣಗೆರೆಯಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟಾವ್‌ ಯಂತ್ರ ಮಾಲೀಕರೆಲ್ಲ ಸೇರಿ ಬರುವ, ಹೋಗುವ ವಾಹನಗಳ ಚಾಲಕರು, ಕ್ಲೀನರ್‌ಗಳಿಗೆ ನಿತ್ಯ ಆಹಾರ ವಿತರಣೆ ಮಾಡುತ್ತಿದ್ದಾರೆ.

ಇದಲ್ಲದೇ ಹಳೇ ಆಸ್ಪತ್ರೆ, ಚಿಗಟೇರಿ ಆಸ್ಪತ್ರೆ, ಚೆಕ್‌ಪೋಸ್ಟ್‌ಗಳಲ್ಲಿ ಇರುವ ಪೊಲೀಸರಿಗೆ ಆಹಾರ ನೀಡುತ್ತಿದ್ದಾರೆ. ಇದಲ್ಲದೇ ಹಮಾಲರು, ಗ್ಯಾಸ್‌ ಏಜೆನ್ಸಿಯವರು, ಮಿಲ್‌ನವರು, ಆಟೋ ಚಾಲಕರು ಎಲ್ಲ ಅಡುಗೆ ನಡೆಯುವ ಸ್ಥಳಕ್ಕೇ ಬಂದು ಆಹಾರ ತೆಗೆದುಕೊಳ್ಳುತ್ತಿದ್ದಾರೆ.

‘ಯೋಗೀಶ್‌ ಒಂದು ದಿನ ಬಂದು ನಾವೂ ವಾಹನ ಚಾಲಕರಿಗೆ ಆಹಾರ ವಿತರಣೆ ಮಾಡಿದರೆ ಹೇಗೆ ಎಂದು ಸಲಹೆ ನೀಡಿದರು. ಕಟಾವು ಯಂತ್ರ ಮಾಲೀಕರ ಒಂದು ವಾಟ್ಸ್‌ಆ್ಯಪ್‌ ಗುಂಪು ಇದೆ. ಒಂದಿನ ಸಂಜೆ 7.30ರ ಹೊತ್ತಿಗೆ ಮೆಸೇಜ್‌ ಹಾಕಿದೆ. 8.30ರ ಹೊತ್ತಿಗೇ ₹ 1 ಲಕ್ಷಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿತ್ತು. ಮರುದಿನವೇ ಲೋಕಿಕೆರೆ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್‌ ಏರಿಯದಲ್ಲಿ ಸಿದ್ದೇಶ್ವರ ಆಗ್ರೋದಲ್ಲಿ ಊಟ ತಯಾರಿ ಆರಂಭಿಸಿದೆವು. ಮೊದಲ ದಿನವೇ ವಾಹನ ಚಾಲಕ, ಕ್ಲೀನರ್‌ಗಳು ಸೇರಿ 3 ಸಾವಿರ ಊಟ, ನೀರಿನ ಬಾಟಲ್‌ ವಿತರಣೆ ಮಾಡಿದೆವು’ ಎಂದು ದಾವಣಗೆರೆ ಹಾರ್ವೆಸ್ಟರ್‌ ಓನರ್ಸ್‌ ಅಸೋಸಿಯೇಶನ್‌ನ ಚಂದ್ರಶೇಖರ್‌ ತುರ್ಚಘಟ್ಟ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಗೀಶ್‌, ನಾನು ಅಲ್ಲದೇ ರಮೇಶ್‌ ಬಾಬು, ಶ್ಯಾಗಲೆ ಶಾಂತಕುಮಾರ್‌, ಸುನಿಲ್‌ ಬೆಳವನೂರು, ಅಭಿಜಿತ್‌ ಬೆಳವನೂರು, ಸಚಿನ್‌, ಪ್ರದೀಪ್‌, ಲೋಹಿತ್‌, ಯತಿರಾಜ್‌, ಶ್ರೀಧರ್‌, ಅರುಣ್‌, ನವೀನ್‌ ಸಹಿತ ಅನೇಕರು ಮುತುವರ್ಜಿ ವಹಿಸಿದ್ದಾರೆ. ಕೆಲವು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾವು ಒಯ್ದ ಊಟ ಸಾಕಾಗದೇ ಮತ್ತೆ ತಯಾರಿಸಿ ನೀಡಿದ್ದಿದೆ. ಸಂಜೆ ಹೊತ್ತಿಗೂ ಕೊಟ್ಟಿದ್ದೆವು. ಈಗ ಕೆಲವು ಜಿಲ್ಲೆಗಳಲ್ಲಿ ಅನ್‌ಲಾಕ್‌ ಆಗಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಷ್ಟೊಂದು ಬೇಡಿಕೆ ಇಲ್ಲ. ಆದರೆ ಈಗ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಸಂಖ್ಯೆ ಜಾಸ್ತಿಯಾಗಿದೆ. ಅಲ್ಲದೇ ಆಹಾರಕ್ಕಾಗಿ ಪರದಾಡುವ ಬಡವರಿಗೆ, ಟೆಂಟ್‌ನಲ್ಲಿರುವವರಿಗೆ ಆಹಾರ ನೀಡುತ್ತಿದ್ದೇವೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು