ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕಡೆ ಸ್ಕೈವಾಕ್, ವಾಕಿಂಗ್ ಪಾಥ್

₹2.84 ಕೋಟಿ ಉಳಿತಾಯ ಬಜೆಟ್ ಮಂಡಿಸಿದ ಮೇಯರ್ ಬಿ.ಜಿ. ಅಜಯಕುಮಾರ್
Last Updated 28 ಮಾರ್ಚ್ 2020, 14:39 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ವಾಹನ ದಟ್ಟಣೆ ತೀವ್ರವಾಗಿದ್ದು, ಪಾದಚಾರಿಗಳು ರಸ್ತೆಗಳನ್ನು ದಾಟಲು ಪರದಾಡುತ್ತಿದ್ದಾರೆ. ಇದನ್ನು ತಪ್ಪಿಸಲು ನಗರದ ಎರಡು ಕಡೆ ಸ್ಕೈ ವಾಕ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪಾಲಿಕೆ ಮೇಯರ್ ತಿಳಿಸಿದರು.

ಲಾಕ್ ಡೌನ್ ನಡುವೆಯೂ ಪಾಲಿಕೆ ಮೇಯರ್ ಬಿ.ಜಿ. ಅಜಯಕುಮಾರ್‌ ಮಹಾನಗರಪಾಲಿಕೆಯ 2020–21ನೇ ಸಾಲಿನಲ್ಲಿ ₹2.84 ಕೋಟಿ ಉಳಿತಾಯ ಬಜೆಟ್‌ ಅನ್ನು ಮಂಡಿಸಿದರು.

ಜನನಿಬಿಡ ಪ್ರದೇಶವಾದ್ದರಿಂದ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಪಾಲಿಕೆ ಕಚೇರಿ, ರೈಲ್ವೆ ನಿಲ್ದಾಣದ ಮುಂಭಾಗ ಹಾಗೂ ರೇಣುಕ ಮಂದಿರದ ಮುಂಭಾಗ ₹1 ಕೋಟಿ ವೆಚ್ಚದಲ್ಲಿ ಮುಂದಿನ ವರ್ಷ ಸ್ಕೈವಾಕ್‌ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಕ್ರೀಡೆಗೆ ಉತ್ತೇಜನ, ಸ್ಮಶಾನ ಅಭಿವೃದ್ದಿಗೆ ಕ್ರಮ. ಮಹಿಳಾ ವ್ಯಾಯಾಮ ಶಾಲೆ ಪ್ರಾರಂಭ ಹಾಗೂ ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಮಹಾನಗರ ಪಾಲಿಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ₹ 50 ಲಕ್ಷ ವೆಚ್ಚದಲ್ಲಿ ಪ್ರತ್ಯೇಕವಾಗಿ ಮಹಿಳಾ ವ್ಯಾಯಾಮ ಶಾಲೆ ಸ್ಥಾಪಿಸಲಾಗುವುದು. ಈ ವ್ಯಾಯಾಮ ಶಾಲೆಯು ಮಹಿಳೆಯರ ದೈಹಿಕ ದಾರ್ಢ್ಯತೆಗೆ ಹಾಗೂ ಆರೋಗ್ಯಕ್ಕೆ ಅತ್ಯಾಧುನಿಕ ಪರಿಕರಗಳನ್ನು ಹೊಂದಿರುತ್ತದೆ ಎಂದರು.

ಮಹಾನಗರ ಪಾಲಿಕೆ ಆವರಣದಲ್ಲಿ ವಿಶ್ವಗುರು ಬಸವಣ್ಣ ಹಾಗೂ ಅರುಣ ಟಾಕೀಸ್ ಬಳಿ ಸರ್ಕಲ್‌ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ₹50 ಲಕ್ಷ ಒದಗಿಸುವುದಾಗಿ ತಿಳಿಸಿದರು. ಅಲ್ಲದೇ ಪಾಲಿಕೆ ಸದಸ್ಯರ ಒತ್ತಾಯದ ಮೇರೆಗೆ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದರು.

ಆರ್ಥಿಕ ವರ್ಷದ ಕೊನೆಯಾದ್ದರಿಂದ ಸಂಬಳ, ಸಾರಿಗೆ ಹಾಗೂ ಆಡಳಿತಾತ್ಮಕ ಖರ್ಚು–ವೆಚ್ಚದ ನಿಭಾಯಿಸುವ ನಿಟ್ಟಿನಲ್ಲಿ ತರಾತುರಿ ನಡುವೆಯೇ ಅಜಯ್‌ಕುಮಾರ್ ಬಜೆಟ್ ಮಂಡಿಸಿದರು. ಸದಸ್ಯ ದೇವರಮನಿ ಶಿವಕುಮಾರ್ ಸೂಚಕರಾದರೆ. ಮತ್ತೊಬ್ಬ ಸದಸ್ಯ ಚಮನ್‌ಸಾಬ್ ಬಜೆಟ್‌ ಅನ್ನು ಅನುಮೋದಿಸಿದರು.

‘ಇವನಾರವ ಇವನಾರವ, ಇವನಾರವನೆಂದಿನಿಸದಿರಯ್ಯ ಇವ ನಮ್ಮವ, ಇವ ನಮ್ಮವನೆಂದೆಸಯ್ಯ ಕೂಡಲಸಂಗಮದೇವ’ ಎಂಬ ಬಸವಣ್ಣನವರ ಸಾಲುಗಳನ್ನು ಹೇಳಿದ ಅಜಯ್‌ಕುಮಾರ್ ‘ದೀನದಲಿತರ ಶ್ರೇಯೋಭಿವೃದ್ಧಿ, ಯುವ ಸಮುದಾಯದ ಕೌಶಲ ವರ್ಧನೆ, ಮಹಿಳೆಯರ ಸಬಲೀಕರಣಗಳಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಹೇಳಿದರು.

ಹಳೆಯ ಯೋಜನೆಗಳಾದ ‘ಜಲಸಿರಿ’ ಅಮೃತ್‌ ಯೋಜನೆಗಳು ಮುಂದುವರೆಯಲಿದ್ದು, ನಗರದ ಮೂಲ ಸೌಕರ್ಯ ಅಭಿವೃದ್ಧಿ ಅಭಿವೃದ್ಧಿಪಡಿಸುವ ’ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ’ ವಿವಿಧ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ ಎಂದು ಹೇಳಿದರು.

‘ಆಸ್ತಿ ತೆರಿಗೆ, ನೀರಿನ ಕಂದಾಯ ಸಂಗ್ರಹಣೆಯಲ್ಲಿ ಗಣನೀಯ ಪ್ರಗತಿ ಸಾಧಿಸುವುದರ ಜೊತೆಗೆ ವ್ಯಾಪಾರ ಪರವಾನಗಿ, ಕಟ್ಟಡ ಪರವಾನಗಿ ನೀಡಿಕೆ ಪ್ರಕ್ರಿಯೆಗಳು ಈಗಾಗಲೇ ಗಣಕೀಕರಣಗೊಂಡಿದ್ದು, ಇನ್ನೂ ಉತ್ತಮ ಸೇವೆ ನೀಡಲು ಕ್ರಮ ವಹಿಸಲಾಗುವುದು. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೆ.ಆರ್.ಮಾರುಕಟ್ಟೆ ಸಂಕೀರ್ಣದ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರಿಂದಲೂ ಹೆಚ್ಚಿನ ಆದಾಯ ಕ್ರೋಡೀಕರಣ ನಿರೀಕ್ಷೆ ಇದೆ’ ಎಂದು ಆದಾಯದ ಮೂಲವನ್ನು ಬಿಚ್ಚಿಟ್ಟರು.

45 ವಾರ್ಡ್‌ಗಳಲ್ಲೂ ಮಾರುಕಟ್ಟೆ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ 45 ವಾರ್ಡ್‌ಗಳಲ್ಲೂ ಮಾರುಕಟ್ಟೆ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಮೇಯರ್ ಬಿ.ಜಿ. ಅಜಯ ಕುಮಾರ್ ಹೇಳಿದರು.

ಬಜೆಟ್‌ ನಂತರ ನಡೆದ ಚರ್ಚೆಯಲ್ಲಿ ಅವರು ಮಾತನಾಡಿ, ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ನಲ್ಲೂ 4 ಹಣ್ಣು ಹಾಗೂ ನಾಲ್ಕು ತರಕಾರಿ ಗಾಡಿ ಕಳುಹಿಸುವ ಸಂಬಂಧ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಜೊತೆ ಚರ್ಚಿಸುವುದಾಗಿ ತಿಳಿಸಿದರು.

‘ಕುಡಿಯುವ ನೀರು, ಆರೋಗ್ಯ,ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಂಬರ್‌ಗಳನ್ನು ಪಡೆದು ನಿಮ್ಮ ಕೆಲಸಗಳನ್ನು ನೀವೆ ಮಾಡಿಕೊಳ್ಳಬೇಕು. ಮಾಡದೇ ಇದ್ದರೆ ನನಗೆ ಹೇಳಿ, ನಾನು ಬಗೆಹರಿಸುತ್ತೇನೆ. ಪ್ರತಿಯೊಬ್ಬರೂ ಮೇಯರ್ ಅಂದುಕೊಂಡು ಕೆಲಸ ಮಾಡಿ’ ಎಂದರು.

ಬಡವರು, ನಿರ್ಗತಿಕರಿಗೆ ಊಟ

‘ಬಡವರು, ನಿರ್ಗತಿಕರಿಗೆ ಊಟ ನೀಡಲು ಜೈನ್ ಸಂಘದವರು, ಲಯನ್ಸ್, ಟ್ರಾನ್ಸ್‌ಪೋರ್ಟ್ ಸಂಘದವರು ಮುಂದೆ ಬಂದಿದ್ದಾರೆ. ದಾವಣಗೆರೆಲ್ಲಿ 8 ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ದವಸ ಧಾನ್ಯಗಳು ಇರುವ 500 ಬ್ಯಾಗ್ ಇಟ್ಟಿದ್ದು, ಎಲ್ಲಿ ಅಗತ್ಯವಿದೆಯೊ ಹೇಳಿದರೆ ಕಳುಹಿಸುತ್ತೇನೆ’ ಎಂದರು.

ಜನರಿಗೆ ಮಾಸ್ಕ್ ನೀಡುವ ಸಂಬಂಧ ಜಿ‌ಲ್ಲಾಧಿಕಾರಿ ಜೊತೆ ಚರ್ಚಿಸಿದ್ದು, ಮೈಸೂರಿನಿಂದ ಮಾಸ್ಕ್ ತರಿಸುವುದಾಗಿ ಅವರು ಹೇಳಿದ್ದಾರೆ. ಮಾಸ್ಕ್‌ಗಳು ಬಂದ ನಂತರ ಪ್ರತಿ ಸದಸ್ಯರಿಗೂ ಇಂತಿಷ್ಟು ಮಾಸ್ಕ್‌ಗಳನ್ನು ವಿತರಿಸುವ ಪ್ರಯತ್ನ ಮಾಡುತ್ತೇನೆ. ಸ್ಯಾನಿಟೈಸರ್ ಸಿಗುತ್ತಿಲ್ಲ. ಹೊಸದಾಗಿ ಬಂದ ನಂತರ ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಹೊಸದಾಗಿ ಬರುವ ಆಟೋಗಳಿಗೆ ಔಷಧ ಸಿಂಪಡಿಸಲು 4 ಸ್ಪ್ರೇ ಮಿಷನ್‌ಗಳು ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT