ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಕೊಳೆಗೇರಿ ಮಂಡಳಿಯಲ್ಲಿ ಸಿಬ್ಬಂದಿ ಕೊರತೆ; ಅಭಿವೃದ್ಧಿ ಕುಂಠಿತ

Published : 2 ಅಕ್ಟೋಬರ್ 2024, 5:42 IST
Last Updated : 2 ಅಕ್ಟೋಬರ್ 2024, 5:42 IST
ಫಾಲೋ ಮಾಡಿ
Comments

ದಾವಣಗೆರೆ: ಕೊಳೆಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಸಿಬ್ಬಂದಿ ಕೊರತೆಯ ಕಾರಣ ಕೊಳೆಗೇರಿಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ.

ಮಂಡಳಿಯ ದಾವಣಗೆರೆ ಉಪವಿಭಾಗ ಕಚೇರಿ ಅಡಿ ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು ಬರುತ್ತವೆ. ಇಲ್ಲಿನ ಕಚೇರಿಯಲ್ಲಿ 2002ರಿಂದ 2023ರವರೆಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸಿದ 20 ಅಧಿಕಾರಿಗಳ ಹೆಸರಿರುವ ಫಲಕ ಹಾಕಲಾಗಿದೆ. ಇದರಲ್ಲಿ ಇಬ್ಬರು ಮಾತ್ರ ನಾಲ್ಕು ವರ್ಷ ಕಾರ್ಯನಿರ್ವಹಿಸಿರುವುದು ಬಿಟ್ಟರೆ ಉಳಿದ ಎಲ್ಲರೂ ಎರಡು, ನಾಲ್ಕು, ಆರು, ವರ್ಷ ಮಾತ್ರವೇ ಇದ್ದ್ದು ಕಂಡುಬರುತ್ತದೆ. ಪ್ರಸ್ತುತ ಕಲಬುರಗಿ ಉಪ ವಿಭಾಗದ ಎಂ.ಎ.ಖಯ್ಯೂಂ ಅವರೇ ಇಲ್ಲಿನ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆ ಖಾಲಿ ಇದೆ. ಸಹಾಯಕ ಎಂಜಿನಿಯರ್‌ ಅವರೊಬ್ಬರೇ ಮೂರೂ ಜಿಲ್ಲೆಗಳನ್ನು ನೋಡಿಕೊಳ್ಳಬೇಕಾದ ಸ್ಥಿತಿ ಇದೆ.

ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯೇ ಹೆಚ್ಚು ಕೊಳೆಗೇರಿಗಳಿವೆ. ಘೋಷಿತ ಕೊಳೆಗೇರಿಗಳಲ್ಲದೇ ಅಘೋಷಿತವಾದವು ಹಲವು ಇವೆ. ಎಲ್ಲೆಡೆ ಮೂಲಸೌಕರ್ಯಗಳ ಕೊರೆತೆ ಸಾಮಾನ್ಯವಾಗಿದೆ. ಉತ್ತರ ವಿಧಾಸಭಾ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಕೊಳೆಗೇರಿಗಳಿವೆ. ಆದರೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಇರುವುದು ಉತ್ತರ ಕ್ಷೇತ್ರದ ಶಾಮನೂರು ಬಳಿ. ಜನರು ಸಮಸ್ಯೆ ಹೇಳಿಕೊಳ್ಳಲು ದೂರದ ಪ್ರದೇಶಗಳಿಂದ ಬಸ್‌, ಆಟೊಗೆ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಕಚೇರಿಗೆ ಹೋದರೂ ಅಧಿಕಾರಿಗಳು ಸಿಗುವುದು ದುರ್ಲಭವಾಗಿದೆ.

‘ನಮ್ಮ ಸಮಸ್ಯೆ ಪರಿಹಾರ ಸಂಬಂಧ ಶಾಮನೂರು ಬಳಿ ಇರುವ ಕಚೇರಿಗೆ ಬಂದು ಹೋಗಲು ಕನಿಷ್ಠ ಅರ್ಧ ದಿನ ಹಿಡಿಯುತ್ತದೆ. ಆ ದಿನ ಕೂಲಿ ಕೆಲಸಕ್ಕೂ ಹೋಗಲಾಗುವುದಿಲ್ಲ. ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬಂದರೂ ಅಧಿಕಾರಿಗಳೇ ಸಿಗುವುದಿಲ್ಲ. ಕೊಳೆಗೇರಿ ಮಂಡಳಿಯ ಯಾವೊಬ್ಬ ಅಧಿಕಾರಿಯೂ ಒಂದು ದಿನವೂ ನಮ್ಮ ಏರಿಯಾಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಯಾರ ಬಳಿ ನಮ್ಮ ಕಷ್ಟ ತೋಡಿಕೊಳ್ಳಬೇಕು’ ಎಂದು ಮಹಾವೀರ ನಗರದ ಫರೀದಾ ಬಾನು ಪ್ರಶ್ನಿಸಿದರು.

‘ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿಯನ್ನು ಹಳೇ ದಾವಣಗೆರೆಯಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಿದಲ್ಲಿ ನಮ್ಮ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುತ್ತದೆ. ಅಧಿಕಾರಿಗಳೂ ನಮ್ಮ ಕೊಳೆಗೇರಿಗಳಿಗೆ ಭೇಟಿ ನೀಡಲು ಮನಸ್ಸು ಮಾಡುತ್ತಾರೆ. ಇಲ್ಲದಿದ್ದರೆ ಸಭೆಗೆ ಅಂಕಿಅಂಶ ನೀಡುವ ಕೆಲಸವಷ್ಟೇ ಮಾಡುತ್ತಾರೆ. ಕೊಳೆಗೇರಿಗಳು ಅಭಿವೃದ್ಧಿ ಕಾಣಬೇಕಿದ್ದಲ್ಲಿ ಕಚೇರಿಯನ್ನು ಸ್ಥಳಾಂತರಿಸಲು ಸಂಬಂಧಪಟ್ಟವರು ಗಮನಹರಿಸಬೇಕು. ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಬೀಡಿ ಕಾರ್ಮಿಕರ ಲೇ ಔಟ್‌ನ ಚಾಂದ್‌ ಬಿ ಮನವಿ ಮಾಡಿದರು.

₹ 1.6 ಕೋಟಿ ಅನುದಾನದಲ್ಲಿ ರಸ್ತೆ ಚರಂಡಿ

2018ರಿಂದ ಇಲ್ಲಿವರೆಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ದಾವಣಗೆರೆ ಉಪವಿಭಾಗ ಕಚೇರಿಗೆ ₹ 1.6 ಕೋಟಿ ಬಿಡುಗಡೆಯಾಗಿದೆ. ವಿನೋಬನಗರ ಅಂಬೇಡ್ಕರ್‌ನಗರ ಮಂಡಕ್ಕಿ ಭಟ್ಟಿ ಹಳೇ ಚಿಕ್ಕನಹಳ್ಳಿ ಶಿವಾನಗರಗಳಲ್ಲಿ ರಸ್ತೆ ಚರಂಡಿ ನಿರ್ಮಾಣಕ್ಕೆ ಅನುದಾನವನ್ನು ಬಳಸಲಾಗಿದೆ ಎಂದು ಸಹಾಯಕ ಎಂಜಿನಿಯರ್‌ ಎಸ್‌.ನಿಶಾಂತ್‌ ಮಾಹಿತಿ ನೀಡಿದ್ದಾರೆ.

ವಾರ್ಡ್‌ ಸಮಿತಿ ರಚನೆಯಾಗಲಿ

ಸಂವಿಧಾನದ 73ನೇ ತಿದ್ದುಪಡಿ ಗ್ರಾಮಾಡಳಿತದಲ್ಲಿ ಗ್ರಾಮೀಣ ಪ್ರದೇಶದ ಜನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುತ್ತದೆ. ಅಂತೆಯೇ 74ನೇ ತಿದ್ದುಪಡಿಯು ನಗರವಾಸಿಗಳು ತಮ್ಮ ಹಕ್ಕು ಮತ್ತು ಮೂಲಸೌಕರ್ಯಗಳನ್ನು ಪಡೆಯಲು ಮತ್ತು ನಗರಪಾಲಿಕೆ ಆಡಳಿತದ ಸುಧಾರಣೆಯಲ್ಲಿ ಜನರ ಭಾಗವಹಿಸುವಿಕೆ ಕುರಿತು ಒತ್ತಿ ಹೇಳಿದೆ. 3 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ವಾರ್ಡ್‌ ಸಮಿತಿ ರಚಿಸುವಂತೆ 1994ರಲ್ಲಿಯೇ ಆದೇಶವಾಗಿದ್ದರೂ ದಾವಣಗೆರೆಯಲ್ಲಿ ಇದುವರೆಗೆ ಎಲ್ಲಿಯೂ ಸಮಿತಿ ರಚಿಸಿಲ್ಲ. ನಿಯಮಾನುಸಾರ ಪ್ರತಿ ವಾರ್ಡ್‌ ಸದಸ್ಯರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಬೇಕು. ಸ್ಥಳೀಯ ಆಡಳಿತದ ಅಧಿಕಾರಿ ಸೇರಿ ವಾರ್ಡ್‌ನ ನಾಗರಿಕರು ಸಂಘ–ಸಂಸ್ಥೆಯ ಮುಖಂಡರನ್ನು ಸಮಿತಿ ಹೊಂದಿರಬೇಕು. ತಿಂಗಳಿಗೊಮ್ಮೆ ಸಭೆ ನಡೆಸಿ ಕಂದಾಯ ಸಂಗ್ರಹ ರಸ್ತೆ ಕುಡಿಯುವ ನೀರು ಒಳಚರಂಡಿ ಚರಂಡಿ ಶೌಚಾಲಯ ಶಾಲೆ ಆಸ್ಪತ್ರೆಗಳ ಅಭಿವೃದ್ಧಿ ಕೊಳೆಗೇರಿ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನ ಮತ್ತು ಅದರ ಬಳಕೆ ಹಾಗೂ ವಿವಿಧ ಯೋಜನೆಗಳಿಗೆ ಪಲಾನುಭವಿಗಳ ಆಯ್ಕೆ ಕುರಿತು ತಿಂಗಳಿಗೊಮ್ಮೆ ಸಭೆ ನಡೆಸಿ ಚರ್ಚೆ ನಡೆಸಬೇಕು. ಕಾನೂನಿನ ಪಾಲನೆಯಾಗದ ಕಾರಣ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆಯೇ ಇಲ್ಲವಾಗಿದೆ. ಈ ಬಗ್ಗೆ ಜನರಲ್ಲೂ ಜಾಗೃತಿ ಕೊರತೆಯ ಕಾರಣ ಅಧಿಕಾರಿಗಳನ್ನು ಪ್ರಶ್ನಿಸುತ್ತಿಲ್ಲ. ವಾರ್ಡ್‌ ಸಮಿತಿ ರಚನೆಯಾದಲ್ಲಿ ಮಾತ್ರವೇ ಪಾರದರ್ಶಕ ಆಡಳಿತ ಕೊಳೆಗೇರಿಗಳ ಸಮರ್ಪಕವಾದ ಅಭಿವೃದ್ಧಿ ಸಾಧ್ಯ. ಪಾಲಿಕೆ ಆಯುಕ್ತರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಕೊಳೆಗೇರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಬೇಕು. ಎಂ.ಕರಿಬಸಪ್ಪ ಸ್ಲಂ ಜನರ ಸಂಘಟನೆ ಕರ್ನಾಟಕ ಜಿಲ್ಲಾ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT