ಶುಕ್ರವಾರ, ಫೆಬ್ರವರಿ 28, 2020
19 °C
ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಉದ್ಯೋಗ ಸೃಷ್ಟಿಗೆ ಸಣ್ಣ ಕೈಗಾರಿಕೆ ಅಗತ್ಯ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಣ್ಣ ಕೈಗಾರಿಕೆಗಳ ಮೂಲಕ ಜನರಿಗೆ ಉದ್ಯೋಗ ಸಿಗಬೇಕು. ಹಾಗಾಗಿ ಸಣ್ಣ ಕೈಗಾರಿಕೆ ಆರಂಭಿಸುವವರಿಗೆ ಯಾವುದೇ ಕೊಕ್ಕೆ ಹಾಕದೇ, ಅಡ್ಡಗಾಲಿಡದೇ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಮತ್ತು ಕೈಗಾರಿಕಾ ಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಣಾಡಿದರು.

ಸಣ್ಣ ಕೈಗಾರಿಕೆ ಸ್ಥಾಪಿಸುವವರಿಗೆ ಅಗತ್ಯ ಇರುವ ನಿರಾಕ್ಷೇಪಣಾ ಪತ್ರವನ್ನು ವಿವಿಧ ಸಂಸ್ಥೆಗಳು, ಇಲಾಖೆಗಳು ಯಾವುದೇ ರೀತಿಯಲ್ಲಿ ತೊಂದರೆ ನೀಡದೇ ಒದಗಿಸಬೇಕು ಎಂದು ಸಲಹೆ ನೀಡಿದರು.

ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿ ಬೊಂದಾಡೆ ಇಂಡಸ್ಟ್ರೀಸ್‌ನವರು ಕಳೆದ ಏಪ್ರಿಲ್‌ ಒಳಗೆ ಕೈಗಾರಿಕೆ ಆರಂಭಿಸಬೇಕಿತ್ತು. ಅವರು ಇನ್ನೊಂದು ವರ್ಷ ಅವಕಾಶ ಕೋರಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಬಿ.ಕೆ. ಮಂಜುನಾಥ್ ತಿಳಿಸಿದರು. ನಿಯಮಾನುಸಾರ ದಂಡ ಕಟ್ಟಿಕೊಂಡು ಕಾಲಾವಕಾಶ ನೀಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಸರ್ಕಾರದ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಣ್ಣ ಕೈಗಾರಿಕೆ ಸ್ಥಾಪಿಸಲು ಸಿ ಮತ್ತು ಡಿ ಮಾದರಿ ಮಳಿಗೆಗಳನ್ನು ಅರ್ಹರಿಗೆ ನೀಡಲು ಅನುಮೋದನೆ ನೀಡಿದರು. ದೊಡ್ಡಬಾತಿ, ಬೆಂಕಿಕೆರೆ, ಕಾರಿಗನೂರು, ಶಾಮನೂರುಗಳಲ್ಲಿ ಹೊಸ ಸಣ್ಣ ಕೈಗಾರಿಕೆ ಸ್ಥಾಪಿಸಲು ಅನುಮತಿ ನೀಡಿದರು.

ಅಡಿಕೆ ಸಂಸ್ಕರಣಾ ಘಟಕವನ್ನು ಸಬ್ಸಿಡಿಗಾಗಿ ಆರಂಭಿಸುತ್ತಿದ್ದಾರೆ. ಇದರಲ್ಲಿ ಗೋಲ್‌ಮಾಲ್‌ ನಡೆಯುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕನ್ನಡಿಗರಿಗೆ ಉದ್ಯೋಗ: ಡಾ.ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಶೇ 60ರಷ್ಟು ಉದ್ಯೋಗ ನೀಡಬೇಕು. ಜಿಲ್ಲೆಯಲ್ಲಿ ಈ ನಿಯಮಕ್ಕೆ ತೊಂದರೆಯಾಗಿಲ್ಲ. ಎಲ್ಲರೂ ಕನ್ನಡಿಗರೇ ಇದ್ದಾರೆ ಎಂದು ಬಿ.ಕೆ. ಮಂಜುನಾಥ್ ಮಾಹಿತಿ ನೀಡಿದರು.

‘ಪಿಎಂಇಜಿಪಿ  ಮತ್ತು ಸಿಎಂಇಜಿಪಿ ಯೋಜನೆಯಡಿ ಗುರಿ ಸಾಧನೆಗೆ ಫಲಾನುಭವಿಗಳು ಸಕಾಲದಲ್ಲಿ ಅಗತ್ಯ ದಾಖಲೆ ಕೊಡದೇ ಇರುವುದು ಅಡ್ಡಿಯಾಗಿದೆ. ನಾವೇ ಬೆಂಬತ್ತಿ ದಾಖಲೆ ತರಿಸಿಕೊಳ್ಳಬೇಕಾಗಿದೆ. ಹಾಗಾಗಿ ಗುರಿ ಸಾಧಿಸಲು ಆಗಿಲ್ಲ. ಶೀಘ್ರದಲ್ಲಿ ಯೋಜನಾ ವೆಚ್ಚ ಮಂಜೂರು ಮಾಡಿ ಗುರಿ ಸಾಧಿಸಲಾಗುವುದು’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶೃತ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಒಳಚರಂಡಿ ಮತ್ತು ಬೀದಿ ದೀಪ ವ್ಯವಸ್ಥೆ ಹದಗೆಟ್ಟಿದ್ದು, ಪಾಲಿಕೆ ವತಿಯಿಂದ ದುರಸ್ತಿ ಮತ್ತು ಇತರೆ ಮೂಲಭೂತ ಸೌಕರ್ಯ ಮಾಡಿಕೊಡಬೇಕೆಂದು ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕೆಎಸ್‌ಎಸ್‌ಐಡಿಸಿ ಅಭಿವೃದ್ಧಿಪಡಿಸಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಮಳೆ ಬಂದಾಗ ಮಳೆ ನೀರು ಕೈಗಾರಿಕೆಗಳಿಗೆ ನುಗ್ಗುತ್ತಿದೆ. ಚರಂಡಿ ಕ್ಲಿಯರ್ ಇಲ್ಲ, ರಸ್ತೆ ಪಕ್ಕ ಸ್ಲಾಬ್ ಹಾಕಿದರೆ ಅನುಕೂಲ ಆಗುತ್ತದೆ. ಹಾಗೂ ಬೀದಿ ದೀಪ ವ್ಯವಸ್ಥೆ ಇಲ್ಲವೆಂದು ಹಲವಾರು ಬಾರಿ ಹರಿಹರ ನಗರಸಭೆಗೆ ತಿಳಿಸಿದರೂ ಕ್ರಮ ವಹಿಸುತ್ತಿಲ್ಲ ಎಂದು ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹನುಮಂತರಾವ್ ದೂರಿದರು.

ವಿವಿಧ ಸಣ್ಣ ಕೈಗಾರಿಕೆಗಳ ಲೀಸ್ ಕಮ್ ಸೇಲ್‌ಡೀಡ್ ಅವಧಿ ಮುಗಿಯುತ್ತಾ ಬಂದಿದ್ದು, ಕೆಐಎಡಿಬಿಯವರು ಮುಂದುವರಿಕೆ ಪತ್ರವನ್ನು ಮಾತ್ರ ನೀಡುತ್ತಿದ್ದಾರೆ. ಇದರಿಂದ ಬ್ಯಾಂಕ್ ಸಾಲ ಪಡೆಯುವುದು ಕಷ್ಟವಾಗಲಿದೆ. ಸಮಸ್ಯೆ ಆಗದಂತೆ ಪೂರಕ ವ್ಯವಸ್ಥೆ ಮಾಡಿಕೊಡಬೇಕು ಎಂದು ದಾವಣಗೆರೆ ಸ್ಟೀಲ್‌ ಫ್ಯಾಬ್ರಿಕೇಟರ್ಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಎಚ್‌.ಎಂ. ಉಮೇಶ್ ಮನವಿ ಮಾಡಿದರು.

ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಕಾಸಿಯಾ ಪರಿಷತ್ ಸದಸ್ಯ ಶೇಷಾಚಲ, ಕೈಗಾರಿಕಾ ಸಂಸ್ಥೆಯ ಸಹಾಯಕ ನಿರ್ದೇಶಕ ಮನ್ಸೂರ್, ಸುಖ್ದೇವ್ ಅವರೂ ಇದ್ದರು.

ವಿದೇಶ ಪ್ರವಾಸದ ಬೇಡಿಕೆ

ಸಣ್ಣ ಕೈಗಾರಿಕೆ ಸ್ಥಾಪಿಸಬೇಕಿದ್ದರೆ ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆ, ಲೋಕೋಪಯೋಗಿ ಸಹಿತ ಹಲವು ಇಲಾಖೆಗಳ ನಿರಾಕ್ಷೇಪಣಾ ಪತ್ರ ಬೇಕು. ಅಂತಿಮ ಹಂತದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ನೀಡಬೇಕು. ಅಂತಿಮ ಹಂತದಲ್ಲಿಯೇ ಸಮಸ್ಯೆಗಳಾಗುತ್ತಿವೆ. ಹಿಂದೆ ಬೆಳ್ಳೂಡಿಯಲ್ಲಿ ಎನ್‌ಒಸಿ ನೀಡಲು ಅಲ್ಲಿನ ಪಂಚಾಯಿತಿ ಸದಸ್ಯರೊಬ್ಬರು ವಿದೇಶ ಪ್ರವಾಸಕ್ಕೆ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಜಿಲ್ಲಾ ಸಣ್ಣ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಆರೋಪಿಸಿದರು.

‘ಅಂಥ ಪ್ರಕರಣಗಳು ನಡೆದಾಗ ನನ್ನ ಗಮನಕ್ಕೆ ತನ್ನಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶೌಚಾಲಯ ನಿರ್ಮಿಸಿಕೊಡಿ

‘ಶಾಲೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಒಂದು ಘಟಕಕ್ಕೆ ₹8 ಲಕ್ಷ ಎಂದಾಗ ಬಹಳ ಹೆಚ್ಚಾಯಿತು ಎಂದು ಕೆಲವರು ಆಕ್ಷೇಪಿಸಿದ್ದಾರೆ. ಒಂದು ಘಟಕ ಅಂದರೆ ಒಂದು ಶೌಚಾಲಯ ಅಲ್ಲ. ಅದರಲ್ಲಿ ಎರಡು ಶೌಚಾಲಯ, ಮೂರು ಮೂತ್ರಿಗಳು ಇರುತ್ತವೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು