ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಗರಿಗೆ ಐಸಿಟಿ ‘ಸುರಕ್ಷಾ ಕವಚ’

‘ದಾವಣಗೆರೆ ಸ್ಮಾರ್ಟ್‌ ಸಿಟಿ’ ಅಡಿ ಕೈಗೊಂಡ ನಾಗರಿಕ ಸ್ನೇಹಿ ಯೋಜನೆ
Last Updated 1 ಜುಲೈ 2022, 2:25 IST
ಅಕ್ಷರ ಗಾತ್ರ

ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸಿದವರ ಮನೆ ಬಾಗಿಲಿಗೇ ದಂಡದ ನೋಟಿಸ್‌ ಬರಲಿದೆ. ಆಯಕಟ್ಟಿನ ಜಾಗದಲ್ಲಿ ಗುಂಪು ಸೇರಿ ಗಲಾಟೆ ಮಾಡಿದರೆ ಪೊಲೀಸರು ತಕ್ಷಣವೇ ಆರೋಪಿಗಳ ಗುರುತು ಪತ್ತೆ ಮಾಡಿ, ಬಂಧನಕ್ಕೆ ಬಲೆ ಬೀಸಲಿದ್ದಾರೆ. ನಗರ ಸಾರಿಗೆ ಬಸ್‌ಗಳು ಹಾಗೂ ಕಸ ಸಂಗ್ರಹದಮಹಾನಗರ ಪಾಲಿಕೆಯ ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸದೇ ನಾಗರಿಕರಿಗೆ ಸಕಾಲದಲ್ಲಿ ಸೇವೆ ಒದಗಿಸದಿದ್ದರೆ ಕ್ಷಣ ಮಾತ್ರದಲ್ಲೇ ನಿಯಂತ್ರಣ ಕೊಠಡಿಗೆ ಸಂದೇಶ ಬರಲಿದೆ...

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ದಾವಣಗೆರೆ ಸ್ಮಾರ್ಟ್‌ ಸಿಟಿ’ಯಡಿ ಅನುಷ್ಠಾನಗೊಳಿಸಿರುವ ಇನ್‌ಫರ್ಮೇಷನ್‌ ಆ್ಯಂಡ್‌ ಕಮ್ಯುನಿಕೇಷನ್‌ ಟೆಕ್ನಾಲಜಿ (ಐಸಿಟಿ) ಯೋಜನೆಯು ದೇವನಗರಿಗೆ ‘ಸುರಕ್ಷಾ ಕವಚ’ವನ್ನು ತೊಡಿಸಿದೆ. ಜೊತೆಗೆ ಹಲವು ಸೌಲಭ್ಯಗಳನ್ನು ನಾಗರಿಕರ ಬೆರಳ ತುದಿಯಲ್ಲೇ ಕಲ್ಪಿಸುವ ಮೂಲಕ ಅವರ ಜೀವನವನ್ನು ಇನ್ನಷ್ಟು ಸುಲಲಿತಗೊಳಿಸುತ್ತಿದೆ.

‘ಪ್ಯಾನ್‌ ಸಿಟಿ’ ವಿಭಾಗದಡಿ ಒಟ್ಟು ₹ 74.84 ಕೋಟಿ ವೆಚ್ಚದಲ್ಲಿ ‘ಸ್ಮಾರ್ಟ್‌ ಸಿಟಿ’ಯು ಕೈಗೆತ್ತಿಕೊಂಡಿದ್ದ ‘ಐಸಿಟಿ ಯೋಜನೆ’ ಕಾರ್ಯಾರಂಭ ಮಾಡಿದೆ. ಈ ಯೋಜನೆಯಡಿ ನಗರ ಕಣ್ಗಾವಲು ವ್ಯವಸ್ಥೆ (ಸಿ.ಎಸ್‌.ಎಸ್‌.), ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್ಮೆಂಟ್‌ ಸಿಸ್ಟಮ್‌ (ಐ.ಟಿ.ಎಂ.ಎಸ್‌), ಇಂಟಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌, ಅಡಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌ (ಎ.ಟಿ.ಸಿ.ಎಸ್‌.), ಇ–ಲರ್ನಿಂಗ್‌... ಹೀಗೆ ಹಲವು ನಾಗರಿಕ ಸ್ನೇಹಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಐಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಈ ಎಲ್ಲಾ ವ್ಯವಸ್ಥೆಗಳನ್ನೂ ಸ್ಮಾರ್ಟ್‌ ಸಿಟಿ ಕಚೇರಿಯಲ್ಲಿ ಸ್ಥಾಪಿಸಿರುವ ‘ಸಮಗ್ರ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ’ (ಐ.ಸಿ.ಸಿ.ಸಿ)ದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಜೊತೆಗೆ ಪಕ್ಕದಲ್ಲೇ ‘ಪೊಲೀಸ್‌ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ’ (ಪಿ.ಸಿ.ಸಿ.ಸಿ)ವನ್ನೂ ತೆರೆಯಲಾಗಿದ್ದು, ಸಿ.ಎಸ್‌.ಎಸ್‌, ಐ.ಟಿ.ಎಂ.ಎಸ್‌, ಎ.ಟಿ.ಸಿ.ಎಸ್‌ ವ್ಯವಸ್ಥೆಗಳನ್ನು ನಿರ್ವಹಣೆ ಮಾಡಲಾಗುತ್ತಿದೆ.

ನಾಗರಿಕರ ಸುರಕ್ಷತೆಗಾಗಿ ಕಣ್ಗಾವಲು:

ನಾಗರಿಕರ ಸುರಕ್ಷತೆಗಾಗಿನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಜನರ ಸಂಚಾರದ ಮೇಲೆ ನಿಗಾ ವಹಿಸಲು ‘ನಗರ ಕಣ್ಗಾವಲು ವ್ಯವಸ್ಥೆ’ (ಸಿ.ಎಸ್‌.ಎಸ್‌.)ಯನ್ನು ಜಾರಿಗೊಳಿಸಲಾಗಿದೆ. ನಗರದ 109 ಸ್ಥಳಗಳಲ್ಲಿ ಒಟ್ಟು 210 ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲಾಗಿದೆ. ಅಪರಾಧ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು, ಅಪರಾಧ ತಡೆಗಟ್ಟಲು, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪೊಲೀಸರಿಗೆಈ ವ್ಯವಸ್ಥೆಯಿಂದ ಸಹಕಾರಿಯಾಗಿದೆ. ‘ಸ್ಮಾರ್ಟ್‌ ಸಿಟಿ’ಯಿಂದ ಪೊಲೀಸ್‌ ಇಲಾಖೆಗೆ ಕೊಡುಗೆಯಾಗಿ ನೀಡಿರುವ ಮೂರು ಮೊಬೈಲ್‌ ಸರ್ವೆಲೆನ್ಸ್‌ ವಾಹನಗಳೂ ನಗರದಲ್ಲಿ ಗಸ್ತು ತಿರುಗುತ್ತಿರುತ್ತದೆ. ಅಪರಾಧ ನಡೆದ ಬಗ್ಗೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್‌ ಸಿಬ್ಬಂದಿ ಮುಂದಾಗಲಿದ್ದಾರೆ.

ಸಂಚಾರ ನಿಯಮ ಪಾಲನೆಗೆ ಐಟಿಎಂಎಸ್‌:

ನಗರದಲ್ಲಿ ವಾಹನಗಳ ಸಂಚಾರ ಸುಗಮವಾಗಿರಲು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲುಕಂಪ್ಯೂಟರ್‌ ಹಾಗೂ ಸಂವಹನ ತಂತ್ರಜ್ಞಾನ ಆಧರಿತ ಐಟಿಎಂಎಸ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನು ಪೊಲೀಸ್‌ ಇಲಾಖೆಯು ನಿಯಂತ್ರಣ ಕೊಠಡಿ ಮೂಲಕ ನಿರ್ವಹಣೆ ಮಾಡಲಿದೆ.

ನಗರವನ್ನು ಪ್ರವೇಶಿಸುವ ಬಾಡಾ ಕ್ರಾಸ್‌, ಶಾಮನೂರು ರಸ್ತೆ, ಮಾಗಾನಹಳ್ಳಿ ರಸ್ತೆ ಹಾಗೂಆಂಜನೇಯ ಕಾಟನ್‌ ಮಿಲ್‌ ರಸ್ತೆಯಲ್ಲಿ ‘ಆಟೊಮೇಟೆಡ್‌ ನಂಬರ್‌ ಪ್ಲೇಟ್‌ ರೆಕಗ್ನಿಷನ್‌’ (ಎ.ಎನ್‌.ಪಿ.ಆರ್‌) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಲ್ಲಿ ಅಳವಡಿಸಿರುವ ಕ್ಯಾಮೆರಾ ಮೂಲಕ ಸಂಚರಿಸುವ ಪ್ರತಿಯೊಂದು ವಾಹನದ ನಂಬರ್‌ ಪ್ಲೇಟ್‌ನ ಫೋಟೊ ಅನ್ನು ಸೆರೆಹಿಡಿಯಬಹುದಾಗಿದೆ. ಕಳವಾಗಿರುವ ವಾಹನಗಳ ಹಾಗೂ ಅಪರಾಧ ಚಟುವಟಿಕೆಗೆ ಬಳಸಿದ ವಾಹನಗಳ ಪತ್ತೆಗೆ ಈ ವ್ಯವಸ್ಥೆಯಿಂದ ಇನ್ನು ಅನುಕೂಲವಾಗಲಿದೆ.

ನಗರದ 6 ಕಡೆಗೆ ‘ಸ್ಪೀಡ್‌ ವೈಲೇಷನ್‌ ಡಿಟೆಕ್ಷನ್‌’ (ಸಿ.ವಿ.ಡಿ) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಸಂಚರಿಸಿದರೆ ಆ ವಾಹನದ ಮಾಹಿತಿಯು ನಿಯಂತ್ರಣ ಕೊಠಡಿಗೆ ಬರಲಿದೆ. ಒಂದು ಕಡೆ ರೆಡ್‌ ಲೈಟ್‌ ವೈಲೇಷನ್‌ ಡಿಟೆಕ್ಷನ್‌ (ಆರ್‌.ಎಲ್‌.ವಿ.ಡಿ) ಉಪಕರಣವನ್ನು ಳವಡಿಸಲಾಗಿದ್ದು, ಸಿಗ್ನಲ್‌ಗಳಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಮಾಹಿತಿಯನ್ನು ಇದು ರವಾನಿಸುತ್ತದೆ.

ಸಿ.ವಿ.ಡಿ ಹಾಗೂ ಆರ್‌.ಎಲ್‌.ವಿ.ಡಿ.ಯು ನಿಯಮ ಉಲ್ಲಂಘಿಸುವ ವಾಹನಗಳ ಮಾಹಿತಿಯನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತಿದೆ. ಪೊಲೀಸ್‌ ಸಿಬ್ಬಂದಿ ಇದನ್ನು ಮತ್ತೊಮ್ಮೆ ಪರಿಶೀಲಿಸಿ, ನಿಯಮ ಉಲ್ಲಂಘಿಸಿರುವ ವಾಹನ ಮಾಲೀಕರಿಗೆ ಅದರ ಫೋಟೊ ಸಮೇತ ದಂಡದ ನೋಟಿಸ್‌ ಅನ್ನು ಮನೆಗೆ ಕಳುಹಿಸಿಕೊಡುತ್ತಿದ್ದಾರೆ.

ಎರಡನೇ ಹಂತದಲ್ಲಿ ನಗರದಾದ್ಯಂತ 150 ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ನಗರದ ಇನ್ನೂ 13 ಕಡೆ ಎ.ಎನ್‌.ಪಿ.ಆರ್‌. ಹಾಗೂ 4 ಕಡೆ ಎಸ್‌.ವಿ.ಡಿ ವ್ಯವಸ್ಥೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ‘ಸ್ಮಾರ್ಟ್‌ ಸಿಟಿ’ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಗಮ ಸಂಚಾರ ವ್ಯವಸ್ಥೆ: ನಗರದ 23 ಸ್ಥಳಗಳಲ್ಲಿ ಅಡಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌ (ಎ.ಟಿ.ಸಿ.ಎಸ್‌) ಅಳವಡಿಸಿಕೊಳ್ಳಲಾಗಿದೆ. ರೆಡಾರ್‌ ಆಧರಿತ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವ್ಯವಸ್ಥೆಯು ಸಿಗ್ನಲ್‌ಗಳಲ್ಲಿವಾಹನಗಳ ದಟ್ಟಣೆಯ ಲೆಕ್ಕಾಚಾರದಲ್ಲಿ ನಿಲುಗಡೆ, ಸಂಚರಿಸುವ ಸಮಯವನ್ನು ನಿಗದಿಗೊಳಿಸುತ್ತಿದೆ. ಹಸಿರು ನಿಶಾನೆ ತೋರಿಸುತ್ತಿದ್ದರೂ ಆ ಮಾರ್ಗದಲ್ಲಿ ವಾಹನ ಇಲ್ಲದಿದ್ದಾಗ ತಕ್ಷಣವೇ ಕೆಂಪು ದೀಪ ಹೊತ್ತಿಕೊಳ್ಳಲಿದ್ದು, ಮುಂದಿನ ಸರದಿಯ ಮಾರ್ಗದ ವಾಹನಗಳಿಗೆ ಸಂಚರಿಸಲು ಅನುವು ಮಾಡಿಕೊಡಲಿದೆ. ಇದರಿಂದಾಗಿ ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆ ತಗ್ಗಲಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುತ್ತಿದೆ.

ನಗರದ 20 ಸ್ಥಳಗಳಲ್ಲಿ ಪಬ್ಲಿಕ್‌ ಅಡ್ರೆಸ್‌ ಸಿಸ್ಟಮ್‌ (ಪಿ.ಎ.ಎಸ್‌) ಅಳವಡಿಸಲಾಗಿದ್ದು, 40 ಧ್ವನಿವರ್ಧಕಗಳನ್ನು ಹಾಕಲಾಗಿದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ, ಆಂಬುಲೆನ್ಸ್‌ ಬರುತ್ತಿದ್ದರೆ, ನಿಷೇಧಾಜ್ಞೆಯ ನಡುವೆಯೂ ಗುಂಪು ಸೇರಿದರೆ ಪೊಲೀಸ್‌ ಸಿಬ್ಬಂದಿ ನಿಯಂತ್ರಣ ಕೇಂದ್ರದಿಂದ ನಿರ್ದೇಶನಗಳನ್ನು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ನೀಡುತ್ತಾರೆ.

ನಗರದ ಐದು ಕಡೆಗೆ ವೇರಿಯಲ್‌ ಮೆಸೇಜಿಂಗ್‌ ಸೈನ್‌ ಬೋರ್ಡ್‌ ಅಳವಡಿಸಲಾಗಿದೆ. ಹವಾಮಾನದ ಸ್ಥಿತಿ, ಮಾಲಿನ್ಯ ಪ್ರಮಾಣ, ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ, ಸಂಚಾರ ಸುರಕ್ಷತಾ ಸಂದೇಶಗಳು... ಹೀಗೆ ಹಲವು ಮಾಹಿತಿಗಳು ಈ ಬೋರ್ಡ್‌ಗಳಲ್ಲಿ ಗೋಚರಿಸಲಿವೆ.

ಬಸ್‌ ಪ್ರಯಾಣಿಕರ ಸಂಚಾರ ಸುಗಮ

ಕೆಎಸ್‌ಆರ್‌ಟಿಸಿಯ ನಗರ ಸಾರಿಗೆಯ56 ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಅವುಗಳ ಚಲನವಲನದ ಬಗ್ಗೆ ಕ್ಷಣಕ್ಷಣದ ಮಾಹಿತಿ ಐಸಿಸಿಸಿಗೆ ಲಭಿಸುತ್ತದೆ. ಪೂರ್ವ ನಿಗದಿತ ಮಾರ್ಗದಲ್ಲಿಯೇ ಬಸ್‌ ಸಂಚರಿಸುತ್ತಿದೆಯೇ ಎಂಬ ಬಗ್ಗೆ ನಿಗಾ ವಹಿಸಲಾಗುತ್ತದೆ.

ನಗರದ ಬಸ್‌ ತಂಗುದಾಣಗಳಲ್ಲಿ ಪ್ಯಾಸೆಂಜರ್‌ ಇನ್‌ಫರ್ಮೇಷನ್‌ ಸಿಸ್ಟಮ್‌ (ಪಿ.ಐ.ಎಸ್‌) ಅಳವಡಿಸಲಾಗಿದ್ದು, ಎಷ್ಟು ಗಂಟೆಗೆ ಯಾವ ಮಾರ್ಗದ ಬಸ್‌ ಇಲ್ಲಿಗೆ ಬರಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿಯು ಡಿಜಿಟಲ್‌ ಫಲಕದಲ್ಲಿ ಬಿತ್ತರಗೊಳ್ಳಲಿದೆ. ಇದರಿಂದಾಗಿ ಪ್ರಯಾಣಿಕರು ಬಸ್‌ಗಾಗಿ ಹೆಚ್ಚಿನ ಸಮಯ ಅನಗತ್ಯ ಕಾಯುವುದು ತಪ್ಪಲಿದೆ. ಬಸ್‌ ಬರುವುದು ವಿಳಂಬವಾಗಲಿದೆ ಎಂದಾದರೆ, ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ‘ಸ್ಮಾರ್ಟ್‌ ಸಿಟಿ’ಯ ಐಸಿಟಿ ಮ್ಯಾನೇಜರ್‌ ನಿಖಿಲ್‌ ಆರ್‌. ತೋಟದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಸ ಸಂಗ್ರಹ ವಾಹನಗಳ ಮೇಲೆ ನಿಗಾ: ಪಾಲಿಕೆಯ 140 ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಅವುಗಳ ಚಲನವಲಯಗಳ ಮಾಹಿತಿಯೂ ನಿಯಂತ್ರಣ ಕೇಂದ್ರಕ್ಕೆ ಲಭಿಸುತ್ತಿದೆ. ಪೂರ್ವ ನಿಗದಿತ ಮಾರ್ಗದಲ್ಲಿ ಕಸದ ವಾಹನ ತೆರಳದೇ ಇದ್ದರೆ ಮಾರ್ಗ ಉಲ್ಲಂಘನೆಯ ಸಂದೇಶ ನಿಯಂತ್ರಣ ಕೇಂದ್ರಕ್ಕೆ ಬರಲಿದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಕಸದ ವಾಹನಗಳು ದಿನವೂ ತಪ್ಪದೇ ನಿಗದಿತ ಬಡಾವಣೆಗೆ ತೆರಳಲಿವೆ ಎಂದು ಹೇಳಿದರು.

17 ಆಂಬುಲೆನ್ಸ್‌ ಹಾಗೂ 20 ಅಗ್ನಿಶಾಮಕ ವಾಹನಗಳಿಗೂ ಜಿಪಿಎಸ್‌ ಅಳವಡಿಸಲಾಗಿದ್ದು, ಅವುಗಳ ಚಲವಲನಗಳ ಮಾಹಿತಿಯೂ ನಿಯಂತ್ರಣ ಕೇಂದ್ರಕ್ಕೆ ಲಭ್ಯವಾಗುತ್ತಿದೆ.

ಒಂದು ನಗರ, ಒಂದು ಪೋರ್ಟಲ್‌

ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಬೆರಳ ತುದಿಯಲ್ಲೇ ನೀಡಲು ಐಸಿಟಿ ಯೋಜನೆಯಡಿ ‘ಒಂದು ನಗರ, ಒಂದು ಪೋರ್ಟಲ್‌’ ವ್ಯವಸ್ಥೆಯನ್ನು ಮಾಡಲಾಗಿದೆ. https://dvg.karnatakasmartcity.in ವೆಬ್‌ಸೈಟ್‌ ಹಾಗೂ ಮೊಬೈಲ್‌ ಆ್ಯಪ್‌ (Dvg Smartcity One App) ಅಭಿವೃದ್ಧಿಗೊಳಿಸಲಾಗಿದೆ. ಇದರ ಮೂಲಕ ನಾಗರಿಕರು ಪೊಲೀಸ್‌, ಕಂದಾಯ, ಅಗ್ನಿಶಾಮಕ, ಆರ್‌ಟಿಒ, ಆರೋಗ್ಯ ಇಲಾಖೆ ಹಾಗೂ ಬೆಸ್ಕಾಂನಿಂದ ಹಲವು ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ನಗರದ ಐದು ಕಡೆಗೆ ‘ಪರಿಸರ ಸೆನ್ಸ್‌’ ಉಪಕರಣವನ್ನು ಅಳವಡಿಸಲಾಗಿದ್ದು, ಹವಾಮಾನದ ಸ್ಥಿತಿಗತಿ, ಗಾಳಿಯ ಗುಣಮಟ್ಟ ಸೇರಿ ಪರಿಸರ ಸಂಬಂಧಿಸಿದ 12 ಬಗೆಯ ಮಾಹಿತಿಗಳು ಲಭಿಸುತ್ತಿವೆ. ಈ ಮಾಹಿತಿಯನ್ನು ಪೋರ್ಟಲ್‌ ಮೂಲಕ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

ಈ ವೆಬ್‌ಸೈಟ್‌ ಅಥವಾ ಆ್ಯಪ್‌ ಮೂಲಕ ಹಲವು ಬಗೆಯ ಬಿಲ್‌ಗಳನ್ನೂ ಪಾವತಿಸಬಹುದು. ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆಯನ್ನೂ ಕಟ್ಟಬಹುದಾಗಿದೆ. ನಾಗರಿಕರು ಸಮಸ್ಯೆಗಳ ಬಗ್ಗೆ ದೂರುಗಳನ್ನು ದಾಖಲಿಸಬಹುದು. ನಾಗರಿಕರು ನೀಡುವ ದೂರುಗಳನ್ನು ಐಸಿಸಿಸಿಯ ಸಿಬ್ಬಂದಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಿದ್ದಾರೆ. ಸಮಸ್ಯೆ ಪರಿಹರಿಸಿದ ಬಳಿಕ ಈ ಬಗ್ಗೆ ದೂರುದಾರರ ಮೊಬೈಲ್‌ಗೆ ಸಂದೇಶ ಬರಲಿದೆ. ಜೊತೆಗೆ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯ ಕೇಂದ್ರ (ದೂರವಾಣಿ: 18004256020)ವನ್ನೂ ತೆರೆಯಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಸೇವೆಯನ್ನು ಒದಗಿಸಲಿದ್ದು, ನಾಗರಿಕರು ಇಲ್ಲಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಐಸಿಟಿ ಮ್ಯಾನೇಜರ್‌ ನಿಖಿಲ್‌ ತಿಳಿಸಿದರು.

ನಾಗರಿಕರ ಸುರಕ್ಷತೆಗೆ ಒತ್ತು

‘ಪೊಲೀಸ್ ಇಲಾಖೆಯ ಬೇಡಿಕೆಯಂತೆ ನಾಗರಿಕರ ಸುರಕ್ಷತೆಗಾಗಿ ನಗರ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ಸಾರ್ವಜನಿಕ ಆಸ್ತಿ ರಕ್ಷಣೆ, ಕಾನೂನು ಸುವ್ಯವಸ್ಥೆ ಪಾಲನೆ ಮಾಡಲು ಇದರಿಂದ ಅನುಕೂಲವಾಗಲಿದೆ. ಸಾರ್ವಜನಿಕರು ಕಾನೂನು ಉಲ್ಲಂಘಿಸದೇ ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕು’ ಎಂದು ‘ಸ್ಮಾರ್ಟ್‌ ಸಿಟಿ’ಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮನವಿ ಮಾಡಿದರು.

‘ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಪಾಲಿಕೆಯ ಕಸ ಸಂಗ್ರಹ ವಾಹನಗಳ ಮೇಲೆ ನಿಗಾ ವಹಿಸುವುದರಿಂದ ನಾಗರಿಕರಿಗೆ ಸಕಾಲಕ್ಕೆ ಸೇವೆ ಸಿಗಲಿದೆ. ಒಂದೇ ಪೋರ್ಟಲ್‌ನಲ್ಲಿ ಬಗೆಯ ನಾಗರಿಕ ಸೌಲಭ್ಯಗಳು ಲಭ್ಯವಾಗಲಿರುವುದರಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ’ ಎಂದು ಹೇಳಿದರು.

ಅಪರಾಧ ಪ್ರಕರಣ ಭೇದಿಸಲು ಅನುಕೂಲ

‘ಸ್ಮಾರ್ಟ್‌ ಸಿಟಿ’ಯ ಸಹಯೋಗದಲ್ಲಿ ಆರಂಭಿಸಿರುವ ಪೊಲೀಸ್‌ ಆಜ್ಞೆಮತ್ತು ನಿಯಂತ್ರಣ ಕೇಂದ್ರದಿಂದ ಕಳ್ಳತನ ಸೇರಿ ಕೆಲವು ಅಪರಾಧ ಪ್ರಕರಣಗಳನ್ನು ಭೇದಿಸಲು ಅನುಕೂಲವಾಗಲಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ಈಚೆಗೆ ನಾಲ್ಕು ಅಪರಾಧ ಪ್ರಕರಣಗಳನ್ನು ಭೇದಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಗರದ ಪ್ರಮುಖ ವೃತ್ತಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಸಂಚಾರ ನಿಯಮ ಉಲ್ಲಂಘಿಸುತ್ತಿರುವವರನ್ನು ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಿ, ಅವರ ಮನೆಗೇ ದಂಡದ ನೋಟಿಸ್‌ ಕಳುಹಿಸಿಕೊಡುತ್ತಿದ್ದೇವೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಸಿಗ್ನಲ್‌ಗಳನ್ನು ಅಳವಡಿಸಿರುವುದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ತಗ್ಗಿಸಲು ಅನುಕೂಲವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT