ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸಂದೇಶ ಸಾರಿದ ಕಲಾಮೇಳ

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಕಲಾಮೇಳಕ್ಕೆ ಪ್ರೊ. ಬಸವರಾಜ ಬಣಕಾರ ಚಾಲನೆ
Last Updated 19 ಮೇ 2019, 12:48 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಧಿಯ ಮೇಲೆ ಮದ್ಯದ ಬಾಟಲಿ, ಸಿಗರೇಟ್, ಗುಟ್ಕಾ ಪ್ಯಾಕ್‌ಗಳು.. ಮರದಲ್ಲಿ ತೂಗುತ್ತಿರುವ ಚೇರ್‌ಗಳು.. ಪ್ಲಾಸ್ಟಿಕ್‌ ತ್ಯಾಜ್ಯಗಳು..

–ಇವು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ಕಲಾಮೇಳದಲ್ಲಿ ಕಂಡು ಬಂದ ದೃಶ್ಯಗಳು.

ಕಲಾಮೇಳದಲ್ಲಿ ರಚಿಸಿರುವ ಪ್ರತಿಯೊಂದು ಚಿತ್ರಗಳು ಸಾಮಾಜಿಕ ಸಂದೇಶಗಳನ್ನು ಪ್ರತಿಬಿಂಬಿಸಿದವು. ಸಮಾಧಿಯ ಮೇಲೆ ಇಟ್ಟಿರುವ ಮದ್ಯದ ಬಾಟಲಿ, ಸಿಗರೇಟ್ ಹಾಗೂ ಗುಟ್ಕಾ ಪ್ಯಾಕ್‌ಗಳು ಮನುಷ್ಯನ ಸಾವಿಗೆ ಕಾರಣ ಹೇಗೆ ಕಾರಣವಾಗುತ್ತವೆ ಎಂಬುದನ್ನು ಸಾರಿ ಹೇಳುತ್ತಿದ್ದವು.

‘ಪಬ್ ಜಿ’ ವ್ಯಾಮೋಹಕ್ಕೆ ಒಳಗಾಗಿ ಇಂದು ಹಲವರು ಜೀವ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಇದರ ವ್ಯಾಮೋಹಕ್ಕೆ ಒಳಗಾಗಿ ಹುಚ್ಚರಾಗಿದ್ದಾರೆ. ಇದನ್ನು ನಿಷೇಧಿಸುವ ಮೂಲಕ ವಿದ್ಯಾರ್ಥಿಗಳನ್ನು ರಕ್ಷಿಸಬೇಕು’ ಎಂಬುದು ಕಲಾಕೃತಿ ರಚಿಸಿದ ನಿಖಿತ್ ಅವರ ಅಭಿಪ್ರಾಯ.

ಮರದ ರೆಂಬೆಗಳ ಮೇಲೆ ನೇತು ಹಾಕಿದ್ದ ಚೇರ್‌ಗಳು ಇಂದಿನ ರಾಜಕೀಯ ದೊಂಬರಾಟದ ಪರಿಸ್ಥಿತಿಗೆ ಕೈಗನ್ನಡಿಯಂತಿದ್ದವು. ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ರಚಿಸಿದ ಚಿತ್ರಗಳು ಪ್ಲಾಸ್ಟಿಕ್‌ ಜನರ ಜೀವನವನ್ನು ಹೇಗೆ ಆವರಿಸಿಕೊಂಡಿವೆ ಎಂಬುದನ್ನು ಸಾರಿ ಹೇಳುತ್ತಿತ್ತು.

ಪಾರಂಪರಿಕ, ಜಾನಪದ, ಹಸೆ ಚಿತ್ತಾರ, ನೈಜ ಶೈಲಿಯ ಚಿತ್ರಗಳು, ನವೀನ ಕಲೆ, ಸಮಕಾಲೀನ ಶೈಲಿಯ ಚಿತ್ರಗಳನ್ನು ಕಲಾಮೇಳದಲ್ಲಿ ರಚಿಸಲಾಗಿತ್ತು. ಅಲ್ಲದೇ ಪ್ರತಿಷ್ಠಾಪನಾ ಚಿತ್ರಗಳು(ಇನ್‌ಸ್ಟಾಲೇಷನ್) ಕಲಾಮೇಳದ ಪ್ರಮುಖ ಆಕರ್ಷಣೆಯಾಗಿದ್ದವು.

ಅಕ್ರಲಿಕ್‌, ತೈಲವರ್ಣ, ಜಲವರ್ಣಗಳ, ಪೆನ್ಸಿಲ್‌ ಶೇಡ್‌ಗಳ ಮೂಲಕ ಚಿತ್ರಗಳನ್ನು ರಚಿಸಲಾಗಿತ್ತು. ಪ್ಲಾಸ್ಟಿಕ್ ಕವರ್‌ಗಳು, ನೀರಿನ ಬಾಟೆಲ್, ರದ್ದಿ ಕಾಗದಗಳೇ ಚಿತ್ರ ರಚನೆಯ ವಸ್ತುಗಳಾಗಿದ್ದವು.

ರಾಮಾಯಣ, ಮಹಾಭಾರತದ ಕಥೆಗಳನ್ನು ಆಧರಿಸಿದ ಚಿತ್ರಗಳು, ಭರತನಾಟ್ಯ, ರಾವಣ, ತಾಜ್‌ಮಹಲ್‌, ಮಿಸ್ಟರ್‌ ಬೀನ್‌ನ ಚಿತ್ರಗಳು ಗಮನ ಸೆಳೆದವು.

‘ಅವಕಾಶ ಬಳಸಿಕೊಳ್ಳಿ’

ಹೂವಿನ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ(ಪರೀಕ್ಷಾಂಗ) ಪ್ರೊ. ಬಸವರಾಜ ಬಣಕಾರ ಮಾತನಾಡಿ ‘ಇಂದಿನ ತಂತ್ರಜ್ಞಾನ ಯುಗದಲ್ಲಿ ದೃಶ್ಯಕಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಅವಕಾಶಗಳನ್ನು ಕೈಚೆಲ್ಲಿದರೆ ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದರು.

‘ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಎಂಜಿನಿಯರ್ ಅಥವಾ ವೈದ್ಯರು ಆಗಬೇಕು ಎಂದು ಬಯಸುತ್ತಾರೆ. ಆದರೆ ಕಡಿಮೆ ಅಂಕ ಪಡೆದರೂ ತಮ್ಮೊಳಗಿನ ಭಾವನಾತ್ಮಕ ಕಲೆಯನ್ನು ಪ್ರತಿಬಿಂಬಿಸಲು ದೃಶ್ಯಕಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಚಿತ್ರಕ್ಕೆ ನೂರು ಸಂದೇಶಗಳನ್ನು ನೀಡುವ ಶಕ್ತಿ ಇದೆ’ ಎಂದು ಹೇಳಿದರು.

‘ಮುಂಬೈನ ಜೆ.ಜೆ. ಥಾಮಸ್‌ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳು ನೀಡಿದ ಸಲಹೆಯಿಂದ ಮುಂಬೈ ಇನ್ನಷ್ಟು ಅಭಿವೃದ್ಧಿಯಾಗಲು ಸಹಕಾರಿಯಾಯಿತು. ದಾವಣಗೆರೆ ಈಗಾಗಲೇ ಸ್ಮಾರ್ಟ್‌ಸಿಟಿಯಾಗಿ ಹೊರಹೊಮ್ಮುತ್ತಿದ್ದು, ಇಲ್ಲಿನ ಅಭಿವೃದ್ಧಿ ಕೆಲಸಗಳು ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನಿಮ್ಮದೇ ಆದ ಕೊಡುಗೆ ನೀಡಿ’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ರವೀಂದ್ರ ಎಸ್‌. ಕಮ್ಮಾರ್‌, ಅನ್ವಯಿಕ ಕಲಾ ವಿಭಾಗದ ಪ್ರಾಧ್ಯಾಪಕ ಡಾ.ಜೈರಾಜ್‌ ಚಿಕ್ಕಪಾಟೀಲ್‌, ಬೋಧನಾ ಸಹಾಯಕ ದತ್ತಾತ್ರೇಯ ಎನ್‌.ಭಟ್‌ ಇದ್ದರು.

ಅಂಕಿ ಅಂಶ

120ಪ್ರದರ್ಶನಗೊಂಡ ಕಲಾಕೃತಿಗಳು

150ವಿದ್ಯಾರ್ಥಿಗಳ ಪರಿಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT