ಆವಿಷ್ಕಾರವೇ ಸಮಸ್ಯೆಗಳಿಗೆ ಪರಿಹಾರ

ಸೋಮವಾರ, ಜೂನ್ 24, 2019
24 °C
ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಪದವೀಧರ ದಿನ

ಆವಿಷ್ಕಾರವೇ ಸಮಸ್ಯೆಗಳಿಗೆ ಪರಿಹಾರ

Published:
Updated:
Prajavani

ದಾವಣಗೆರೆ: ಆವಿಷ್ಕಾರವೇ ವಿಶ್ವದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಆವಿಷ್ಕಾರಗಳು ನಡೆಯದೇ ಹೋದರೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಇಂಟರ್ ನ್ಯಾಷನಲ್‌ ಪ್ರೊಡಕ್ಟ್‌ ಫ್ಲಾಟ್‌ಫಾರ್ಮ್‌ ಜಿಇ ಟ್ರಾನ್ಸ್‌ಫೋರ್ಟ್‌ನ ಗ್ಲೋಬಲ್‌ ಲೀಡರ್‌ ವಾಗೀಶ್ ಪಾಟೀಲ್ ಹೇಳಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭ  ಹಾಗೂ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹೆಚ್ಚು ಮೌಲ್ಯಗಳನ್ನು ಸೃಷ್ಟಿಸುವ ಆವಿಷ್ಕಾರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆವಿಷ್ಕಾರ ಗುಣ ರಕ್ತದಲ್ಲಿಯೇ ಬೆಳೆಯಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆವಿಷ್ಕಾರ ಉತ್ತಮ ಮಾರ್ಗ ಎಂದು ಹೇಳಿದರು.

ಎಂಜಿನಿಯರ್‌ಗಳು ಸಮಕಾಲೀನ ಸಮಸ್ಯೆಗಳನ್ನು ಅರಿತು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ತಾವು ಕಲಿತ ಪುಸ್ತಕ ಜ್ಞಾನವನ್ನು ಪರಿಪೂರ್ಣಗೊಳಿಸಬೇಕು. ಎಂಜಿನಿಯರ್‌ಗಳಿಗೆ ಮೂಲಭೂತವಾಗಿ ಬೇಕಾಗಿರುವ ಕೌಶಲ, ವಿಶ್ಲೇಷಣಾತ್ಮಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಪಂಚದಲ್ಲಿ ವೈವಿಧ್ಯಮಯ ತಂತ್ರಜ್ಞಾನಗಳು ನಮ್ಮ ಮುಂದೆ ಇದ್ದು, ‌‌‌‌ಅವು ಬಹಳಷ್ಟು ಬೌದ್ಧಿಕ ಜ್ಞಾನವನ್ನು ಬಯಸುತ್ತವೆ. ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕು. ಇಂದಿನ ದಿನಗಳಲ್ಲಿ ಐಒಟಿ ತಂತ್ರಜ್ಞಾನವು ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಭವಿಷ್ಯ ರೂಪಿಸಿಕೊಳ್ಳಲು ಇದು ಸಹಕಾರಿ ಎಂದು ಹೇಳಿದರು.

ಅಡಿಟೀವ್ ಮ್ಯಾನುಫ್ಯಾಕ್ಚರ್‌ ಹಾಗೂ 3ಡಿ ಮುದ್ರಣ ಗಮನಾರ್ಹ ಬೆಳವಣಿಗೆ ಕಂಡಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕನಸುಗಳಿಗೆ ಭದ್ರಬುನಾದಿಯನ್ನು ಹಾಕಬಲ್ಲದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ 30 ಸಾವಿರ ಸ್ಟಾರ್ಟ್ ಅಪ್ ಕಂಪನಿಗಳು ಆರಂಭವಾಗಿದ್ದು, ಶೇ 10ರಷ್ಟು ಮಂದಿ ಸ್ಟ್ರಾರ್ಟ್ ಅಪ್ ಕಂಪೆನಿಗಳಿಂದ ಉದ್ಯಮಿಗಳಾಗಿ ಯಶಸ್ಸುಗಳಿಸಿದ್ದಾರೆ. ವಿಶ್ವ, ರಾಷ್ಟ್ರ, ಸಮಾಜದ ನಿರ್ಮಾಣಕ್ಕೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ವಿಟಿಯು ಮಾಜಿ ರಿಜಿಸ್ಟ್ರಾರ್‌ ಡಾ. ಎಚ್‌.ಸುಧಾಕರ್‌ ನಾಯಕ್, ‘ನೀವು ಪಡೆಯುವ ಅಂಕಗಳು, ಗ್ರೇಡ್‌ಗಳು, ರ‍್ಯಾಂಕ್‌ಗಳು ಜೀವನ ರೂಪಿಸುವುದಿಲ್ಲ. ಬದಲಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯವನ್ನು ನಿರ್ಧರಿಸಲಿವೆ. ನಿಮ್ಮ ನಿರ್ಧಾರ ಸ್ಪಷ್ಟವಾಗಿರಬೇಕು’ ಎಂದು ಸಲಹೆ ನೀಡಿದರು.

ಬಿಯಟ್‌ ಪ್ರಾಂಶುಪಾಲ ಡಾ. ಎಂ.ಸಿ. ನಟರಾಜ ಸ್ವಾಗತಿಸಿದರು ಹಾಗೂ ಡೀನ್‌ಗಳು ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !