ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಸೋಯಾ ಅವರೆಯತ್ತ ಹರಿಹರ ರೈತರ ಚಿತ್ತ

ಖರ್ಚು ಕಡಿಮೆ; ಲಾಭ ಹೆಚ್ಚು; ಮಣ್ಣಿಗೂ ಶಕ್ತಿ
Last Updated 13 ಜುಲೈ 2022, 2:12 IST
ಅಕ್ಷರ ಗಾತ್ರ

ಹರಿಹರ: ಭತ್ತ, ಮೆಕ್ಕೆಜೋಳದ ಜೊತೆಗೆ ಅಲ್ಪ ಪ್ರಮಾಣದಲ್ಲಿ ತೊಗರಿ, ಹೆಸರು, ಅಲಸಂದಿ ಬೆಳೆಯತ್ತ ಒಲವು ಹೊಂದಿದ್ದ ತಾಲ್ಲೂಕಿನ ರೈತರ ಚಿತ್ತ ಈಗ ಸೋಯಾ ಅವರೆ (ಸೋಯಾ ಬೀನ್ಸ್) ಬೆಳೆಯತ್ತ ಹರಿದಿದೆ.

ಪೂರ್ವ ಏಷ್ಯಾ ಮೂಲದ ಈ ಬೆಳೆಯನ್ನು ದೇಶದ ಉತ್ತರದ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಹೊಸ ಬೆಳೆಯತ್ತ ತಾಲ್ಲೂಕಿನ ರೈತರು ಸುಲಭವಾಗಿ ಹೊರಳುವುದಿಲ್ಲವಾದರೂ ಈ ಬಾರಿ ಸೋಯಾ ಅವರೆಯನ್ನು 150 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ.

ಕೆಲವು ಬೆಳೆ ಮನುಷ್ಯನಿಗೆ ಆಹಾರವಾಗಿ ಮಾತ್ರ ಬಳಕೆಯಾಗುತ್ತವೆ. ಕೆಲವು ಬೆಳೆಗಳನ್ನು ಜಮೀನಿನ ಮಣ್ಣಿನ ಫಲವತ್ತತೆ ಹೆಚ್ಚಿಸಲು ಮಾತ್ರ ಬೆಳೆಯಲಾಗುತ್ತದೆ. ಆದರೆ ಸೋಯಾ ಅವರೆ ಎರಡೂ ಕೆಲಸ ಮಾಡುತ್ತದೆ. ಇದು ಮನುಷ್ಯ ಹಾಗೂ ಪ್ರಾಣಿಗಳಿಗೆ ಆಹಾರವಾಗಿಯೂ ಉಪಯೋಗವಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ.

ಕೃಷಿ ಇಲಾಖೆ ಹಾಗೂ ಕೃಷಿ ಸಂಶೋಧನಾ ಕೇಂದ್ರಗಳ ತಜ್ಞರ ಸಲಹೆಯಿಂದ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. 90ರಿಂದ 100 ದಿನಗಳ ಅವಧಿಯ ಬೆಳೆಯಾದ ಸೋಯಾ ಅವರೆ ರೈತರಿಗೆ ಅಲ್ಪಾವಧಿಯಲ್ಲಿ ಲಾಭ ನೀಡುತ್ತದೆ.

ಕತ್ತಲೆಗೆರೆ ಕೃಷಿ ಸಂಶೋಧನಾ ಕೇಂದ್ರದ ವಿಷಯ ತಜ್ಞರಾದ ಡಾ.ನಾಗರಾಜ ಕುಸಗೂರು ಹೇಳುವಂತೆ, ‘ಒಂದು ಹೆಕ್ಟೇರ್ ಜಮೀನಿಗೆ 30 ಕೆ.ಜಿ. ಬಿತ್ತನೆಬೀಜ ಬೇಕು. ಬಿತ್ತನೆ ಮಾಡುವಾಗ ಬೀಜಕ್ಕೆ ರೈಸೋಬಿಯಮ್ ಎಂಬ ಸೂಕ್ಷ್ಮಾಣುವಿನ ಲೇಪನ ಮಾಡಬೇಕು. ನಂತರ ಪ್ರತಿ ಹೆಕ್ಟರ್‌ಗೆ 10 ಕೆ.ಜಿ. ಜಿಂಕ್ ಸಲ್ಫೇಟ್, 10 ಕೆ.ಜಿ. ಬೋರಾನ್ ಹಾಕಬೇಕು. ಶೇ 80ರಷ್ಟು ಕಾಳು ಬಲಿತಾಗ ಬೆಳೆಯ ಕಟಾವು ಮಾಡಬೇಕು. ಮಳೆಯಾಶ್ರಿತ ಜಮೀನಿನಲ್ಲಿ ಪ್ರತಿ ಹೆಕ್ಟೇರ್‌ಗೆ 16ರಿಂದ 20 ಕ್ವಿಂಟಲ್, ನೀರಾವರಿ ಜಮೀನಿನಲ್ಲಿ 20ರಿಂದ 25 ಹೆಕ್ಟೇರ್ ಇಳುವರಿ ಬರುತ್ತದೆ.

‘ಈ ಮುಂಚೆ ಮೆಕ್ಕೆಜೋಳ ಬೆಳೆಯುತ್ತಿದ್ದೆ. ಕಳೆ ತೆಗೆಯುವುದು, ಕ್ರಿಮಿನಾಶಕ ಸಿಂಪರಣೆಗೆ ಹೆಚ್ಚಿನ ಖರ್ಚು ಬರುತ್ತಿತು. ಕತ್ತಲೆಗೆರೆ ಕೃಷಿ ಸಂಶೋಧನಾ ಕೇಂದ್ರದ ಡಾ.ನಾಗರಾಜ ಕುಸಗೂರು, ವಿಸ್ತರಣಾ ಮುಂದಾಳು ಡಾ.ಮಾರುತೇಶ, ಪರಿಸರ ತಜ್ಞ ಚಂದ್ರು ಪಾಟೀಲ ಅವರ ತಂಡ ಜಮೀನಿಗೆ ಬಂದು ಮಾಹಿತಿ ನೀಡಿದ ನಂತರ ಸೋಯಾ ಅವರೆ ಬೆಳೆಯುತ್ತಿದ್ದೇನೆ. ಉತ್ತಮ ಲಾಭ ಪಡೆಯುತ್ತಿದ್ದೇನೆ’ ಎಂದು ತಾಲ್ಲೂಕಿನ ಹೊಟಗೇನಹಳ್ಳಿ ದಾಸರ ಮಂಜುನಾಥ ತಿಳಿಸಿದರು.

40 ಕ್ವಿಂಟಲ್‌ ವಿತರಣೆ

ಈಗಾಗಲೆ 40 ಕ್ವಿಂಟಲ್ ಸೋಯಾ ಅವರೆ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗಿದೆ. ಇದು ದ್ವಿದಳ ಧಾನ್ಯವಾಗಿದೆ. ಈ ಬೆಳೆಯನ್ನು ಕೊಯ್ಲು ಮಾಡುವಾಗ ಉದುರುವ ಎಲೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಒಮೆಗಾ 3, 6 ಹಾಗೂ ಇತರ ಪ್ರೋಟೀನ್‌ಗಳು ಇರುವುದರಿಂದ ಈ ಧಾನ್ಯಕ್ಕೆ ಬೇಡಿಕೆ ಇದೆ.

–ನಾರನ ಗೌಡ, ಸಹಾಯಕ ಕೃಷಿ ನಿರ್ದೇಶಕ

ಕಡಿಮೆ ಬಂಡವಾಳ, ಹೆಚ್ಚು ಲಾಭ

ಭತ್ತ ಮತ್ತು ಮೆಕ್ಕೆಜೋಳಕ್ಕೆ ಅಧಿಕ ಬಂಡವಾಳ ಹೂಡಿ ಕಡಿಮೆ ಲಾಭ ಪಡೆಯಬಹುದಾಗಿದೆ. ಆದರೆ ಸೋಯಾ ಬೀನ್ಸ್ ಬೆಳೆಯಲ್ಲಿ ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಲಾಗುತ್ತದೆ.

ವಾತಾವರಣದಲ್ಲಿರುವ ಸಾರಜನಕ ಹಿಡಿದಿಟ್ಟು ಬೆಳೆಯುವುದರಿಂದ ಇದರಲ್ಲಿ ಶೇ 38ರಿಂದ 44ರಷ್ಟು ಪ್ರಮಾಣದ ಪ್ರೊಟೀನ್, ಶೇ 18ರಿಂದ 22ರಷ್ಟು ಎಣ್ಣೆ ಅಂಶ ಇರುತ್ತದೆ. ಮನುಷ್ಯರು ಆಹಾರದಲ್ಲಿ ಸೇವಿಸುವ ಜೊತೆಗೆ ಕೋಳಿ, ಮೀನು ಆಹಾರದಲ್ಲೂ ಸೋಯಾ ವ್ಯಾಪಕವಾಗಿ ಬಳಕೆಯಾಗುತ್ತದೆ. ರೈತರು ಈ ಬೆಳೆ ಬೆಳೆದರೆ ಆರ್ಥಿಕವಾಗಿ ಸಬಲರಾಗುತ್ತಾರೆ

– ಡಾ.ನಾಗರಾಜ ಕುಸಗೂರು, ವಿಷಯ ತಜ್ಞರು, ಕತ್ತಲೆಗೆರೆ ಕೃಷಿ ಸಂಶೋಧನಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT