ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಹೆಚ್ಚಾದರೆ ದೇಶದ ಅಭಿವೃದ್ಧಿಗೆ ವೇಗ: ಸಂಸದ ಜಿ.ಎಂ. ಸಿದ್ದೇಶ್ವರ

Last Updated 26 ಸೆಪ್ಟೆಂಬರ್ 2021, 4:11 IST
ಅಕ್ಷರ ಗಾತ್ರ

ದಾವಣಗೆರೆ: ದೇಶದ ಉತ್ಪನ್ನಗಳು ರಫ್ತಾಗುವುದು ಹೆಚ್ಚಾದರೆ ದೇಶದ ಆದಾಯ ಹೆಚ್ಚಾಗುತ್ತದೆ. ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸ ವದ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಬೆಂಗಳೂರು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಆಶ್ರಯದಲ್ಲಿ ನಗರದ ಹೋಟೆಲ್ ಓಶನ್ ಪಾರ್ಕ್‌ ಸಭಾಂಗಣದಲ್ಲಿ ಶನಿವಾರ ನಡೆದ ‘ವಾಣಿಜ್ಯ ಸಪ್ತಾಹ -ರಫ್ತುದಾರರ ಸಮಾವೇಶ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಉತ್ಪಾದನೆಗಳನ್ನು ರಫ್ತು ಮಾಡುವ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಮಾಡಲು ಜಮೀನಿನ ಅವಶ್ಯವಿದೆ. ಜಾಗದ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿ ಭೂಮಿ ಸಿಕ್ಕ ನಂತರ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡಲಾಗುವುದು. ವಿದ್ಯುತ್, ಸಾರಿಗೆ ಸಂಪರ್ಕ, ಸೇರಿ ಉದ್ಯಮ ಸೃಷ್ಟಿಗೆ ಬೇಕಾದ ಮೂಲ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಜಿಲ್ಲೆಯನ್ನು ರಫ್ತುದಾರರ ಹಬ್‌ ಮಾಡಲಾಗುವುದು. ವನ್‌ ಡಿಸ್ಟ್ರಿಕ್ಟ್‌ ವನ್‌ ಪ್ರೋಡಕ್ಟ್‌ ಎಂಬ ಸಂದೇಶದಂತೆ ಜಿಲ್ಲೆಯಿಂದ ಸಿರಿಧಾನ್ಯಗಳ ರಫ್ತಿಗೆ ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ಬೇರೆ ಬೆಳೆಗಳ 25 ಸಾವಿರ ಹೆಕ್ಟೇರ್‌ ಭೂಮಿ ಅಡಿಕೆ ಬೆಳೆಗೆ ಪರಿವರ್ತನೆಗೊಂಡಿದೆ. ಅಡಿಕೆ ಯಿಂದಲೂ ಬೇರೆ ಬೇರೆ ಉತ್ಪನ್ನ ತಯಾರಿಸಲು ಸಾಧ್ಯ’ ಎಂದು ಹೇಳಿದರು.

ರಫ್ತಿಗೆ ಕಂಟೈನರ್‌ಗಳ ಏಕಸ್ವಾಮ್ಯದಿಂದ ತೊಂದರೆಯಾಗಿದೆ. ಅದನ್ನು ಸರಿಪಡಿಸಿಕೊಡಲು ರಫ್ತುದಾರರು ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ತುಮಕೂರು, ಚಿತ್ರದುರ್ಗ, ದಾವಣಗೆರೆಯವರೆಗೆ ಪಿ.ಬಿ.ರಸ್ತೆಗೆ ಸಮನಾಂತರವಾಗಿ ರೈಲ್ವೆ ಲೈನ್ ಆಗುತ್ತಿದ್ದು, ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೂ ಭೂಮಿಯನ್ನು ಹಸ್ತಾಂತರ ಮಾಡುವುದು ಬಾಕಿ ಉಳಿದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್, ‘ಜಿಲ್ಲೆಯಿಂದ ರಫ್ತು ಆಗುತ್ತಿರುವ ಉತ್ಪನ್ನಗಳ ಗುಣಮುಟ್ಟದಲ್ಲಿ ಮೊಸ ಆಗದಂತೆ ನೋಡಿಕೊಳ್ಳಬೇಕು. ಮಾಲೀಕರು ಮೋಜಿ ಮಸ್ತಿ ಮಾಡಿಕೊಂಡು ಕಾಲಹರಣ ಮಾಡದೇ ಉತ್ಪನ್ನಗಳ ಕುರಿತು ಹೆಚ್ಚಿನ ಗಮನಹರಿಸಬೇಕು. ಒಂದು ಕಾಲದಲ್ಲಿ ರಫ್ತಾಗುತ್ತಿದ್ದ ಕಾಟನ್ ಮಿಲ್, ಶೇಂಗಾ ಎಣ್ಣೆ ಮಿಲ್‌ಗಳು ಆಮೇಲೆ ದಿವಾಳಿಯಾದವು. ಈಗ ರಫ್ತು ಮಾಡುವ ಉತ್ಪನ್ನಗಳ ಉದ್ದಿಮೆದಾರರು ಮೊದಲು ಕಾರ್ಮಿಕ ಇಲಾಖೆಗೆ ಬಂದು ನೋಡಿ ಇಲ್ಲಿನ ಇತಿಹಾಸ ಕಂಡು ಹಿಂಜರಿಯುತ್ತಿದ್ದಾರೆ’ ಎಂದು ಸಮಸ್ಯೆ ವಿವರಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಎಚ್.ಎಸ್. ಜಯಪ್ರಕಾಶ್ ನಾರಾಯಣ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಫ್ತು ಕೈಗಾರಿಕೋದ್ಯಮಿಗಳಾದ ಎಂ.ಆರ್. ಸತ್ಯನಾರಾಯಣ, ಜಿ. ಗಿರೀಶ್, ಕರಿಬಸಪ್ಪ, ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಫ್ತು ಕೈಪಿಡಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮೇಯರ್‌ ಎಸ್.ಟಿ. ವೀರೇಶ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್, ಜನರಲ್ ಆಫ್ ಫಾರೀನ್ ಟ್ರೇಡ್ ಉಪ ಮಹಾನಿರ್ದೇಶಕ ಅಕ್ಷಯ್ ಎಸ್.ಸಿ., ಜವಳಿ ಪಾರ್ಕ್ ಅಧ್ಯಕ್ಷ ವೃಷಭೇಂದ್ರಪ್ಪ ಪಾಲ್ಗೊಂಡಿದ್ದರು.

‘ವಿಮಾನ ನಿಲ್ದಾಣಕ್ಕಾಗಿ ಶ್ರಮ’

‘ವಿಮಾನ ನಿಲ್ದಾಣದ ಕುರಿತು ಅನೇಕ ಜನರ ಬೇಡಿಕೆಯಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಆದರೂ ವಿಮಾನ ನಿಲ್ದಾಣ ಮಾಡಲಾಗಲಿಲ್ಲ ಎಂಬ ಬೇಸರವಿದೆ. ರವೀಂದ್ರನಾಥ್ ಅವರು 1300 ಎಕರೆ ಜಮೀನು ಗುರುತಿಸಿ ಸ್ವಾಧೀನಕ್ಕೆ ಕ್ರಮ ಕೈಗೊಂಡಿದ್ದರು. ಆದರೆ ಪ್ರತಿಭಟನೆ ಮಾಡಿ ಸ್ವಾಧೀನ ಆಗದಂತೆ ಕೆಲವರು ನೋಡಿಕೊಂಡರು. ಅದರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನೆಲ್ಲ ಮೀರಿ ನಿಂತು ಮಾಡಬೇಕಿದೆ. ನನ್ನ ಅವಧಿ ಮುಗಿಯುವುದರೊಳಗಾಗಿ ವಿಮಾನ ನಿಲ್ದಾಣ ಮಾಡುತ್ತೇನೆ’ ಎಂದು ಸಿದ್ದೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT