ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಹಾಳುಬಿದ್ದ ಮೀನು, ಮಾಂಸ ಮಾರುಕಟ್ಟೆ

ರಸ್ತೆಯ ಬದಿಯಲ್ಲಿಯೇ ಮೀನು, ಮಾಂಸ ಮಾರಾಟ
Last Updated 12 ಜನವರಿ 2021, 3:13 IST
ಅಕ್ಷರ ಗಾತ್ರ

ಬಸವಾಪಟ್ಟಣ: ಹೋಬಳಿ ಕೇಂದ್ರವಾದ ಬಸವಾಪಟ್ಟಣದಲ್ಲಿನ ಮೀನು, ಮಾಂಸ ಮಾರುಕಟ್ಟೆ ಹಾಳುಬಿದ್ದಿದೆ. ಇದರಿಂದ ಮಾರುಕಟ್ಟೆ ಇಲ್ಲದೆ ಜನರು ತೊಂದರೆಪಡುವಂತಾಗಿದೆ.

ಕೆಲ ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಇಲ್ಲಿನ ಗುಡ್ಡದ ಕೆಳಗಿರುವ ಪ್ರದೇಶವನ್ನು ಅಚ್ಚುಕಟ್ಟು ಮಾಡಿಸಿ, ಅದರಲ್ಲಿ ಮಾಂಸ ಮಾರಾಟ ಮಾಡಲು ನಾಲ್ಕು ಮಳಿಗೆಗಳನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಅದರ ಸುತ್ತಲೂ ಶಾಲಾ, ಕಾಲೇಜುಗಳು, ಎರಡು ವಿದ್ಯಾರ್ಥಿ ನಿಲಯಗಳು ಇರುವುದರಿಂದ ಸಾರ್ವಜನಿಕರು ಆಕ್ಷೇಪಿಸಿದರು. ಇದರಿಂದ ಅಲ್ಲಿ ಮಾಂಸ ಮಾರಾಟ ಆರಂಭವಾಗಲಿಲ್ಲ. ಈಗ ಅದು ಹಾಳುಬಿದ್ದಿದೆ.

ಗ್ರಾಮದ ಮುಖ್ಯರಸ್ತೆಯಲ್ಲಿ ಹತ್ತಾರು ಕೋಳಿ ಮಾಂಸದ ಅಂಗಡಿಗಳು, ರಸ್ತೆಯ ಬದಿಯಲ್ಲಿಯೇ ಮೀನು ಮಾರಾಟ, ಪೆಟ್ಟಿಗೆ ಅಂಗಡಿಯಂತಹ ಗೂಡಿನಲ್ಲಿ ಕುರಿ, ಮೇಕೆಯ ಮಾಂಸದ ಮಾರಾಟ ನಡೆಯುತ್ತಿದೆ. ಇದರಿಂದ ಮಾಂಸದ ಮೇಲೆ ದೂಳು ಬರುತ್ತದೆ. ಅಲ್ಲದೇ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುವ ಕಾರಣ ಜನ ಮೂಗು ಮುಚ್ಚಿಕೊಂಡು ಅಲೆಯಬೇಕಿದೆ ಎಂದು ದೂರುತ್ತಾರೆ ಬಸವರಾಜಪ್ಪ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಮಳಿಗೆಗಳು ಬಳಕೆಯಾಗದೇ ಹಾಳಾಗುತ್ತಿವೆ. ವ್ಯಾಪಾರಿಗಳು ಅನಿವಾರ್ಯವಾಗಿ ರಸ್ತೆ ಬದಿ ಮಾಂಸ ಮಾರಾಟ ಮಾಡಬೇಕಿದೆ. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದರೆ ಅನುಕೂಲ ಎನ್ನುತ್ತಾರೆ ಅಮೀರ್‌ಖಾನ್‌.

‘ನಮ್ಮ ಗ್ರಾಮದಲ್ಲಿ ಜನರ ವಸತಿಗಳಿಗೆ ನಿವೇಶನ ಹೊಂದಿಸುವುದು ಕಷ್ಟವಾಗಿದ್ದು, ಮಾಂಸ ಮಾರಾಟದ ಮಳಿಗೆಗಳಿಗೆ ಜನರ ಬಯಸುವ ನಿವೇಶನದಲ್ಲಿ ವ್ಯವಸ್ಥೆ ಮಾಡುವುದು ಕಷ್ಟವಾಗಿದೆ. ಖಾಸಗಿಯವರು ಇದಕ್ಕಾಗಿ ನಿವೇಶನ ಮಾರಾಟ ಮಾಡಲು ಮುಂದೆ ಬಂದರೆ ಅದನ್ನು ಖರೀದಿಸಿ ಹೊಸ ಮಳಿಗೆಗಳನ್ನು ನಿರ್ಮಿಸಬಹುದು’ ಎನ್ನುತ್ತಾರೆ ಪಿಡಿಒ ಅನಿಲ್‌ಕುಮಾರ್‌.

ಹತ್ತಾರು ವರ್ಷಗಳಿಂದ ಮಾಂಸ ಮಾರಾಟಕ್ಕೆ ಉತ್ತಮ ವ್ಯವಸ್ಥೆ ಮಾಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ., ಇದಕ್ಕಾಗಿ ನಿರ್ಮಿಸಿದ ಕಟ್ಟಡಗಳನ್ನು ಉಪಯೋಗಿಸದೇ ಇರುವುದರಿಂದ ಇದಕ್ಕಾಗಿ ಮೀಸಲಿಟ್ಟಿದ್ದ ಹಣ ವ್ಯರ್ಥವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು.

‘ನಮ್ಮ ಗ್ರಾಮದಲ್ಲಿ ರಸ್ತೆ ಬದಿಯಲ್ಲಿನ ಮಾಂಸ ಮಾರಾಟ ನಿಲ್ಲಬೇಕು. ಶುದ್ಧ ಮತ್ತು ತಾಜಾ ಮಾಂಸ ಮೀನು ದೊರೆಯುವಂತೆ ಗ್ರಾಮ ಪಂಚಾಯಿತಿ ಹಾಗೂ ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು’ ಎಂದು ಬಸವರಾಜಪ್ಪ ಒತ್ತಾಯಿಸಿ‌ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT