ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಮತಿಗೆ ಬೇಕು ಸುಸಜ್ಜಿತ ತಾಲ್ಲೂಕು ಕ್ರೀಡಾಂಗಣ

ಕ್ರೀಡಾಪಟುಗಳಿಗೆ ಸಿಗದ ಪ್ರೋತ್ಸಾಹ
Last Updated 1 ಜೂನ್ 2022, 3:54 IST
ಅಕ್ಷರ ಗಾತ್ರ

ನ್ಯಾಮತಿ: ನೂತನ ತಾಲ್ಲೂಕು ಘೋಷಣೆಯಾಗಿ ನಾಲ್ಕು ವರ್ಷಗಳಾದರೂ ತಾಲ್ಲೂಕು ಕಚೇರಿ ಹೊರತುಪಡಿಸಿ ಯಾವುದೇ ಕಚೇರಿಗಳು ಆರಂಭವಾಗಿಲ್ಲ. ತಾಲ್ಲೂಕು ಕೇಂದ್ರಗಳಿಗೆ ಬೇಕಾದ ಸಾಮಾಥ್ಯಸೌಧ, ಬಸ್ ನಿಲ್ದಾಣ, ಸಾರ್ವಜನಿಕರ ಗ್ರಂಥಾಲಯ ಕಟ್ಟಡ, ಕ್ರೀಡಾಂಗಣ ಸೌಲಭ್ಯ ಸಿಗದೆ ಇರುವ ಬಗ್ಗೆ ಸಾರ್ವಜನಿಕರ ಅಸಮಾಧಾನ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಪದವಿ ಕಾಲೇಜು, ಪಿಯು ಕಾಲೇಜುಗಳು, ಕೆಪಿಎಸ್‌ಗಳಿವೆ. ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಕೆಲವು ನಟರ ಸಂಘಟನೆಗಳು, ಕ್ರಿಕೆಟ್‌ ತರಬೇತಿ ನೀಡಲು ರೂರಲ್ ಕ್ರಿಕೆಟ್‌ ಅಕಾಡೆಮಿ ಇವೆ. ಆದರೆ, ಕ್ರೀಡಾಂಗಣ ಇಲ್ಲದಿರುವುದರಿಂದ ಕ್ರೀಡೆಗೆ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸುತ್ತಾರೆ.

ಪಟ್ಟಣದ ಪದವಿ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ ಆವರಣ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣಗಳಲ್ಲಿ ಸದ್ಯಕ್ಕೆ ಕ್ರೀಡಾ ಚಟುವಟಿಕೆ ನಡೆಯುತ್ತಿವೆ. ಶಿಕ್ಷಣ ಇಲಾಖೆ ನಡೆಸುವ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳನ್ನು ಹಾಗೂ ವಿಶ್ವವಿದ್ಯಾಲಯ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲು ಶಾಲಾ–ಕಾಲೇಜುಗಳ ಮುಖ್ಯಸ್ಥರು ಮುಂದಾಗದೇ ಇರುವುದು ತಾಲ್ಲೂಕಿನ ಕ್ರೀಡಾ ಚಟುವಟಿಕೆಗೆ
ಹಿನ್ನಡೆಯಾಗಿದೆ.

ತಾಲ್ಲೂಕು ಮಟ್ಟದಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲು ಕೆಪಿಎಸ್ ಶಾಲೆಯ ಆವರಣದಲ್ಲಿ ಜಾಗವಿದೆ. ಅಲ್ಲಿ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ ಎಂದು ಜಾಲಿ ಸ್ಪೋರ್ಟ್ಸ್‌ ಕ್ಲಬ್, ಪರಿಸರ ಮಿತ್ರ ಕೂಟ ಹಾಗೂ ನಟರ ಹೆಸರಿನ ಸಂಘಟನೆಗಳ ಪದಾಧಿಕಾರಿಗಳು ಆಶಿಸುತ್ತಾರೆ.

‘ಕೆಪಿಎಸ್ ಆವರಣದ ಐದು ಎಕರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಶಾಸಕರು ಅನುದಾನ ನೀಡಿದ್ದು, ನಿರ್ಮಾಣಕ್ಕೆ ಕೆಲವು ತಾಂತ್ರಿಕ ತೊಂದರೆಗಳಿವೆ. ಅವುಗಳನ್ನು ಸರಿಪಡಿಸಿ ಆದಷ್ಟು ಬೇಗನೆ ಕಾಮಗಾರಿ ಆರಂಭಿಸುವಂತೆ ಶಾಸಕರು ಸೂಚಿಸಿದ್ದಾರೆ’ ಎಂದು ತಾಲ್ಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವರ್ಣೇಶಪ್ಪ ತಿಳಿಸಿದರು.

ಕ್ರೀಡಾಂಗಣ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ
ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ 5 ಎಕರೆ ಆವರಣದಲ್ಲಿ ₹ 2 ಕೋಟಿ ವೆಚ್ಚದಲ್ಲಿ 200 ಮೀ ಟ್ರ್ಯಾಕ್‌ ಮತ್ತು ಫೀಲ್ಡ್ ಇವೆಂಟ್ಸ್ ಆಟಗಳ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಪದವಿ ಕಾಲೇಜಿನ ಆವರಣದಲ್ಲಿ 200X200 ಜಾಗದಲ್ಲಿ ಒಳಾಂಗಣ ಶಟಲ್ ಬ್ಯಾಡ್ಮಿಂಟನ್, ಜಿಮ್ ಅಭ್ಯಾಸ ಕ್ರೀಡಾಂಗಣ ನಿರ್ಮಾಣಕ್ಕೆ ₹ 3 ಕೋಟಿ ಅನುದಾನ ನೀಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯಿಂದ ಅನುಮತಿ ಪತ್ರ ಬಂದಿದ್ದು, ಕಾಮಗಾರಿ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಸುಸಜ್ಜಿತವಾದ ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ರೂರಲ್‌ ಕ್ರಿಕೆಟ್‌ ಅಕಾಡೆಮಿ 6 ವರ್ಷಗಳಿಂದ ತರಬೇತಿ ನೀಡುವ ಜೊತೆಗೆ ಸರ್ಕಾರಿ ನೌಕರರಿಗೆ, ಕ್ರೀಡಾಪಟುಗಳಿಗೆ ಕ್ರಿಕೆಟ್‌ ಟೂರ್ನಿ ಏರ್ಪಡಿಸುತ್ತಿದೆ. ಇನ್ನಷ್ಟು ಟೂರ್ನಿಗಳನ್ನು ಆಯೋಜಿಸಲು ಸುಸಜ್ಜಿತ ಕ್ರೀಡಾಂಗಣ ಅವಶ್ಯವಿದೆ.
-ಸಂತೋಷ ಅಪರಂಜಿ, ಕ್ರಿಕೆಟ್‌ ತರಬೇತುದಾರ, ನ್ಯಾಮತಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT