ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್‌ ಅಂಕ ನೀಡಿ: ವಿದ್ಯಾರ್ಥಿನಿ ಒತ್ತಾಯ

Last Updated 26 ಜುಲೈ 2021, 3:36 IST
ಅಕ್ಷರ ಗಾತ್ರ

ದಾವಣಗೆರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಒಂದು ಪ್ರಶ್ನೆಯ ಉತ್ತರ ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಆ ಪ್ರಶ್ನೆಗೆ ಅನುಗ್ರಹ ಅಂಕ (ಗ್ರೇಸ್‌ ಮಾರ್ಕ್‌) ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಒತ್ತಾಯಿಸಿ ಶಿಕ್ಷಣ ಸಚಿವರಿಗೆ ವಿಡಿಯೊ ಕಳುಹಿಸಿದ್ದಾಳೆ.

ದಾವಣಗೆರೆ ಸೇಂಟ್‌ ಪಾಲ್‌ ಕಾನ್ವೆಂಟ್‌ ವಿದ್ಯಾರ್ಥಿನಿ, ವಿದ್ಯಾನಗರದ ಅಶೋಕ ಭಟ್‌ ಮತ್ತು ಅನಿತಾ ದಂಪತಿಯ ಮಗಳು ಬನಶ್ರೀ ಎ.ಭಟ್‌ ಈ ರೀತಿ ವಿಡಿಯೊ ಕಳುಹಿಸಿದವಳು.

ಜುಲೈ 22ರಂದು ಕನ್ನಡ ಪರೀಕ್ಷೆ ನಡೆದಿತ್ತು. ಅದರಲ್ಲಿ 19ನೇ ಪ್ರಶ್ನೆಗೆ ನೀಡಿರುವ ಆಯ್ಕೆಗಳೇ ಗೊಂದಲ ಉಂಟು ಮಾಡಿವೆ. ‘ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆಗಳನ್ನು ಕೊಂದವರು ಯಾರು?’ ಎಂದು ಪ್ರಶ್ನೆ ಇದೆ. ಅದಕ್ಕೆ ‘ರಾಮ’, ‘ಭೀಮ’, ‘ಹನುಮ’, ‘ಚಡಗ’ ಎಂಬ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಆದರೆ ಈ ನಾಲ್ಕರಲ್ಲಿ ಸರಿ ಉತ್ತರ ಇಲ್ಲ. ಬಾಲ ಎನ್ನುವುದು ಸರಿಯಾದ ಉತ್ತರ ಎಂಬುದನ್ನು ವಿದ್ಯಾರ್ಥಿನಿ ತಿಳಿಸಿದ್ದಾಳೆ.

‘ಬಾಲನು ಮಾಡಿದ ಕಸರತ್ತ... ಕುದುರೆಯ ಕಡಿದ ಹತ್ತಿಪ್ಪತ್ತ..’ ಎಂದು ಪಠ್ಯ ಪುಸ್ತಕದಲ್ಲಿ ಇದೆ. ಚಂದನದಲ್ಲಿ ಪ್ರಸಾರ ಮಾಡಿದ ಪಾಠದಲ್ಲಿಯೂ ಅದನ್ನೇ ಹೇಳಲಾಗಿದೆ. ಆದರೆ ಪರೀಕ್ಷೆಯಲ್ಲಿ ಮಾತ್ರ ಬಾಲನ ಹೆಸರು ನೀಡದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ ಎಂಬುದು ಬನಶ್ರೀಯ ಅಭಿಪ್ರಾಯ.

‘ಕನ್ನಡದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. 19ನೇ ಪ್ರಶ್ನೆಯೊಂದನ್ನು ಬಿಟ್ಟರೆ ಮತ್ತೆಲ್ಲವೂ ಸರಿಯಾಗಿವೆ. 19ನೇ ಪ್ರಶ್ನೆಗೆ ತಪ್ಪು ಹಾಕಿದರೆ ನಮ್ಮದಲ್ಲದ ಕಾರಣಕ್ಕೆ ಅಂಕ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಆ ಪ್ರಶ್ನೆಗೆ ಗ್ರೇಸ್‌ ಅಂಕ ನೀಡಬೇಕು ಎಂದು ಬನಶ್ರೀ ‘ಪ್ರಜಾವಾಣಿ’ಗೆ ತಿಳಿಸಿದ್ದಾಳೆ.

‘ಈ ಬಗ್ಗೆ ಎಸ್ಸೆಸ್ಸೆಲ್ಸಿ ಬೋರ್ಡ್‌ಗೂ ಮೈಲ್‌ ಮಾಡಿದ್ದೇನೆ. ಶಿಕ್ಷಣ ಸಚಿವರಿಗೆ ಮೈಲ್‌ ಮೂಲಕವೂ ತಿಳಿಸಿದ್ದೇನೆ. ಈ ಪರೀಕ್ಷೆ ಬರೆದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶ್ನೆಗೆ ಅನುಗ್ರಹ ಅಂಕ ನೀಡಬೇಕು’ ಎಂದು ಒತ್ತಾಯಿಸಿದ್ದಾಳೆ.

***

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯ 19ನೇ ಪ್ರಶ್ನೆ ಉಂಟು ಮಾಡಿರುವ ಗೊಂದಲದ ಬಗ್ಗೆ ಶಿಕ್ಷಣ ಇಲಾಖೆಗೆ ಅರಿವಿದೆ. ಅನುಗ್ರಹ ಅಂಕ ನೀಡಲು ಮೇಲಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
-ಸಿ.ಆರ್‌.ಪರಮೇಶ್ವರಪ್ಪ, ಡಿಡಿಪಿಐ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT