ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಶಿಕ್ಷಕರೊಬ್ಬರ ತಲೆಗೆ ಕಸದ ಬುಟ್ಟಿ ಹಾಕಿದ ಪುಂಡ ವಿದ್ಯಾರ್ಥಿಗಳು

ಚನ್ನಗಿರಿ ತಾಲ್ಲೂಕಿನ ನಲ್ಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಘಟನೆ
Last Updated 10 ಡಿಸೆಂಬರ್ 2021, 11:43 IST
ಅಕ್ಷರ ಗಾತ್ರ

ಚನ್ನಗಿರಿ (ದಾವಣಗೆರೆ ಜಿಲ್ಲೆ): ತಾಲ್ಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್‌ ವಿಭಾಗದಲ್ಲಿ ತರಗತಿ ನಡೆಯುತ್ತಿದ್ದಾಗಲೇ ಐವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರೊಬ್ಬರ ತಲೆ ಮೇಲೆ ಕಸದ ಬುಟ್ಟಿಯನ್ನು ಟೋಪಿಯಂತೆ ಹಾಕಿ ಗೇಲಿ ಮಾಡಿ ಪುಂಡಾಟಿಕೆ ಮೆರೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಡಿಸೆಂಬರ್‌ 3ರಂದು ಹಿಂದಿ ಶಿಕ್ಷಕ ಪ್ರಕಾಶ್‌ ಬೋಗೆರ್‌ ಅವರು ಪಾಠ ಮಾಡುತ್ತಿದ್ದ ವೇಳೆ ಐವರು ವಿದ್ಯಾರ್ಥಿಗಳು ಖಾಲಿ ಕಸದ ಬುಟ್ಟಿಯನ್ನು ತಂದು ತಲೆಯ ಮೇಲೆ ಟೋಪಿಯಂತೆ ಹಾಕಿ ಗೇಲಿ ಮಾಡಿದ್ದಾರೆ. ಇದರ ನಡುವೆಯೇ ಶಿಕ್ಷಕರು ಪಾಠ ಮಾಡಲು ಮುಂದಾದಾಗ ವಿದ್ಯಾರ್ಥಿಗಳು ಮತ್ತೆ ಬಂದು ಕಸದ ಬುಟ್ಟಿಯನ್ನು ತಲೆಗೆ ಮುಚ್ಚಿದ್ದಾರೆ. ಬಳಿಕ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನಿಗೆ ತಟ್ಟಿ ವಾಪಸ್ಸಾಗಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಕಿಡಿಗೇಡಿ ವಿದ್ಯಾರ್ಥಿಗಳು ಪುಂಡಾಟಿಕೆ ಮೆರೆಯುತ್ತಿರುವುದನ್ನು ಇನ್ನೊಬ್ಬ ವಿದ್ಯಾರ್ಥಿ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ. ಗುರುವಾರ ರಾತ್ರಿ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ವಿದ್ಯಾರ್ಥಿಗಳು ಮತ್ತೆ ತಮಗೆ ತೊಂದರೆ ಕೊಟ್ಟರೆ ಎಂಬ ಕಾರಣಕ್ಕೆ ಸೌಮ್ಯ ಸ್ವಭಾವದ ಶಿಕ್ಷಕರಾಗಿದ್ದ ಪ್ರಕಾಶ್‌ ಅವರು ಈ ಬಗ್ಗೆ ದೂರು ನೀಡಲು ಮುಂದಾಗಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿದ್ದರಿಂದ ಇದೀಗ ಘಟನೆ ಬೆಳಕಿಗೆ ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಚನ್ನಗಿರಿ ಶಾಸಕ ಮಾಡಾಳ ವಿರೂಪಾಕ್ಷಪ್ಪ, ಡಿಡಿಪಿಐ ಜಿ.ಆರ್. ತಿಪ್ಪೇಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಗ್ರಾಮಸ್ಥರು ಸಹ ಈ ಸಂದರ್ಭದಲ್ಲಿ ಬಂದು ಚರ್ಚಿಸಿದ್ದಾರೆ. ಬಳಿಕ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ‘ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾನೂನು ಕ್ರಮ ಕೈಗೊಳ್ಳುವುದು ಬೇಡ. ಶಿಕ್ಷಕರು ಪೊಲೀಸ್‌ ಠಾಣೆಗೆ ದೂರು ನೀಡಲಿ. ವಿದ್ಯಾರ್ಥಿಗಳನ್ನು ಕರೆಸಿ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಿ’ ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಶಾಸಕರು ಹಾಗೂ ಶಿಕ್ಷಕರೂ ಸಹಮತ ವ್ಯಕ್ತಪಡಿಸಿದರು.

ಸಿಪಿಐ ಮಧು, ಅಕ್ಷರ ದಾಸೋಹ ನಿರ್ದೇಶಕ ಕೆ.ಟಿ. ನಿಂಗಪ್ಪ, ಗ್ರಾಮದ ಮುಖಂಡರಾದ ರುದ್ರೇಗೌಡ ಸೇರಿ ಹಲವರು ಹಾಜರಿದ್ದರು.

‘ಡಿಸೆಂಬರ್‌ 3ರಂದು ಪಾಠ ಮಾಡುತ್ತಿದ್ದಾಗ ಐವರು ವಿದ್ಯಾರ್ಥಿಗಳು ನನಗೆ ಕಿರುಕುಳ ನೀಡಿದರು. ಅಂದು ಬಹಳ ನೋವಾಯಿತು. ಮತ್ತೆ ಹೀಗೆಯೇ ತೊಂದರೆ ಕೊಟ್ಟರೆ ಎಂಬ ಕಾರಣಕ್ಕೆ ಯಾರಿಗೂ ಹೇಳಿರಲಿಲ್ಲ. ಇಂಥ ಘಟನೆ ಮತ್ತೆ ನಡೆಯಬಾರದು. ಯಾವುದೇ ಶಿಕ್ಷಕರಿಗೂ ಇಂತಹ ಪರಿಸ್ಥಿತಿ ಬರದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಶಿಕ್ಷಕ ಪ್ರಕಾಶ್‌ ಬೋಗೆರ್‌ ಪ್ರತಿಕ್ರಿಯಿಸಿದರು.

ಕ್ರಮ ಕೈಗೊಳ್ಳುವ ಎಚ್ಚರಿಕೆ: ‘ಘಟನೆಯ ಬಗ್ಗೆ ಡಿಡಿಪಿಐ ಅವರಿಂದ ವರದಿ ತರಿಸಿಕೊಳ್ಳಲಾಗುವುದು. ಈ ಪ್ರಕರಣದಲ್ಲಿ ವಿದ್ಯಾರ್ಥಿಗಳಿಂದ ತಪ್ಪಾಗಿದೆಯೋ ಅಥವಾ ಶಿಕ್ಷಕರಿಂದ ಲೋಪವಾಗಿದೆಯೋ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ದಾವಣಗೆರೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT