ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೈಚಳಕ: ಲೆಕ್ಕಕ್ಕುಂಟು, ಊಟಕ್ಕಿಲ್ಲ!

ಪಾಲಿಕೆ ಬಳಿಯ ಇಂದಿರಾ ಕ್ಯಾಂಟೀನ್‌ ಮೇಲೆ ತಹಶೀಲ್ದಾರ್, ಮೇಯರ್‌ ದಾಳಿ
Last Updated 30 ಮೇ 2021, 3:54 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಬೆಳಿಗ್ಗೆ 9 ಗಂಟೆಗೆ ಉಪಾಹಾರಕ್ಕಾಗಿ ಹೋದರೆ ಉಪಾಹಾರ ಇಲ್ಲ. ಮಧ್ಯಾಹ್ನ 1.30ಕ್ಕೆ ಊಟಕ್ಕೆ ಹೋದರೆ ಊಟವೂ ಇಲ್ಲ. ಸುಮಾರು 450 ಮಂದಿ ತಿಂದಿದ್ದಾರೆ ಎಂಬ ಲೆಕ್ಕ ಮಾತ್ರ ಪುಸ್ತಕದಲ್ಲಿತ್ತು. ಇದರ ಮಾಹಿತಿ ಪಡೆದ ತಹಶೀಲ್ದಾರ್‌, ಮೇಯರ್‌, ಆರೋಗ್ಯ ಅಧಿಕಾರಿಗಳು ದಾಳಿ ಮಾಡಿ ಲೆಡ್ಜರ್‌, ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.

‘ಬಡಾವಣೆ ಪೊಲೀಸ್‌ ಠಾಣೆಗೆ ಶಿವಮೊಗ್ಗದಿಂದ ನಾಲ್ಕೈದು ಜನ ಶನಿವಾರ ಬಂದಿದ್ದರು. ಅವರು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಹೊತ್ತು ಇಂದಿರಾ ಕ್ಯಾಂಟೀನ್‌ಗೆ ಹೋದರೂ ಏನೂ ಸಿಕ್ಕಿರಲಿಲ್ಲ. ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ದರು. ನಾನು ಹೋಗಿ ಲೆಡ್ಜರ್‌ ನೋಡಿದರೆ ಬೆಳಿಗ್ಗೆ 450, ಮಧ್ಯಾಹ್ನ 432 ಮಂದಿ ಆಹಾರ ಸೇವಿಸಿರುವ ಲೆಕ್ಕ ಇದೆ. ಸಿಸಿಟಿವಿ ಕ್ಯಾಮೆರಾ ವಶಪಡಿಸಿಕೊಂಡು ಪಾಲಿಕೆಯ ಸುಪರ್ದಿಗೆ ನೀಡಿದ್ದೇನೆ. ಅವರು ತನಿಖೆ ನಡೆಸಲಿದ್ದಾರೆ’ ಎಂದು ತಹಶೀಲ್ದಾರ್‌ ಗಿರೀಶ್‌ ತಿಳಿಸಿದರು.

‘ಸಿಸಿಟಿವಿ ಕ್ಯಾಮೆರಾದ ಫೂಟೇಜ್‌ ನೋಡಿದಾಗ ಸುಮಾರು 50 ಮಂದಿ ಬಂದಿದ್ದಾರೆ. ಉಳಿದವುಗಳು ಸುಳ್ಳು ಲೆಕ್ಕ ಎಂಬುದು ಕಂಡುಬಂದಿದೆ. ಆಯುಕ್ತರು ಆ ಸಮಯದಲ್ಲಿ ಸಭೆಯಲ್ಲಿದ್ದರು. ಅವರಿಗೆ ದೂರು ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ಮಾಹಿತಿ ನೀಡಿದರು.

‘ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುವ ಆಹಾರವೂ ರುಚಿ ಇಲ್ಲ. ಬಂದ ಎಲ್ಲರಿಗೆ ಆಹಾರವೂ ಸಿಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಹಾವೀರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT