ಶನಿವಾರ, ಮಾರ್ಚ್ 25, 2023
29 °C

ಸಿಬ್ಬಂದಿ ಕೊರತೆಗೆ ಸೊರಗಿದ ಪಶು ವೈದ್ಯಕೀಯ ಸೇವೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಲಭ್ಯದ ಕೊರತೆಯಿಂದಾಗಿ ಪಶು ವೈದ್ಯಕೀಯ ಸೇವೆ ಸೊರಗುತ್ತಿದೆ. ಜಾನುವಾರಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ರೈತರು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ 2.37 ಲಕ್ಷ ದನಕರುಗಳು, 91 ಸಾವಿರ ಎಮ್ಮೆಗಳು, 2.38 ಲಕ್ಷ ಕುರಿಗಳು ಹಾಗೂ 79 ಸಾವಿರ ಮೇಕೆಗಳಿವೆ. 24.96 ಲಕ್ಷ ಕುಕ್ಕುಟಗಳಿದ್ದು, 12 ಸಾವಿರಕ್ಕೂ ಹೆಚ್ಚು ನಾಯಿಗಳನ್ನು ಸಾಕಲಾಗುತ್ತಿದೆ. ಜಾನುವಾರುಗಳಲ್ಲಿ ಜೀವ ತುಂಬಬೇಕಾದ ಪಶು ಚಿಕಿತ್ಸಾಲಯಗಳು ಸಿಬ್ಬಂದಿ ಇಲ್ಲದೇ ಸೊರಗುತ್ತಿವೆ.

ಭರ್ತಿಯಾಗದ ಹುದ್ದೆಗಳು: ಜಿಲ್ಲಾ ಕೇಂದ್ರದಲ್ಲಿ ಪಾಲಿ ಕ್ಲಿನಿಕ್‌, ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ಪಶು ಆಸ್ಪತ್ರೆ, ಎಂಟು ಹೋಬಳಿ ಮಟ್ಟದ ಪಶು ಆಸ್ಪತ್ರೆ, 75 ಪಶು ಚಿಕಿತ್ಸಾಲಯಗಳು ಹಾಗೂ 65 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 152 ಪಶು ವೈದ್ಯಕೀಯ ಕೇಂದ್ರಗಳಿವೆ. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಮಂಜೂರಾಗಿರುವ ಒಟ್ಟು 614 ಹುದ್ದೆಗಳ ಪೈಕಿ ಕೇವಲು 279 ಹುದ್ದೆಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 335 ಹುದ್ದೆಗಳು ಖಾಲಿ ಇರುವುದರಿಂದ ಜಾನುವಾರಿಗೆ ಚಿಕಿತ್ಸೆ ಕೊಡಲು ವಿಳಂಬವಾಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪಶುಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಸಹಾಯಕರು ಹಾಗೂ ಪ್ರಾಣಿ ಸಹಾಯಕರಾಗಿ ಕಾರ್ಯನಿರ್ವಹಿಸುವ ‘ಡಿ’ ದರ್ಜೆ ನೌಕರರ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವುದು ಪಶು ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಆಗುವಂತೆ ಮಾಡಿದೆ.

ಕೆಲವೆಡೆ ಎರಡು–ಮೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಒಬ್ಬರೇ ನೋಡಿಕೊಳ್ಳಬೇಕಾಗುತ್ತಿದೆ. ರೈತರು ಸಹಾಯವಾಣಿಗೆ ಕರೆ ಮಾಡಿದಾಗ, ಸಿಬ್ಬಂದಿ ಕೊರತೆ ಇರುವ ಕಡೆ ಆಸ್ಪತ್ರೆಗೆ ಬೀಗ ಹಾಕಿ ಹೋಗಬೇಕಾಗುತ್ತಿದೆ. ಇದೇ ವೇಳೆಯಲ್ಲಿ ಬೇರೆ ರೈತರು ಜಾನುವಾರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೆ ವೈದ್ಯರ ದಾರಿ ಕಾಯಬೇಕಾಗುತ್ತಿದೆ.

ಕೆಲ ಬಾರಿ ವೈದ್ಯರು ಒಂದು ಕಡೆ ಕೆಲಸ ಮುಗಿಸಿ ಇನ್ನೊಂದು ಕಡೆಗೆ ಹೋಗುವಷ್ಟರಲ್ಲಿ ರೋಗಪೀಡಿತ, ಅಪಘಾತಕ್ಕೊಳಗಾದ ಜಾನುವಾರು ಸಾವನ್ನಪ್ಪುತ್ತಿವೆ. ಚಿಕಿತ್ಸೆ ನೀಡಲು ವಿಳಂಬವಾಗಿದ್ದರಿಂದಲೇ ಜಾನುವಾರು ಮೃತಪಟ್ಟಿದೆ ಎಂದು ರೈತರು ಪ್ರತಿಭಟನೆ ನಡೆಸುತ್ತಿರುವುದು ವೈದ್ಯರಿಗೂ ತಲೆನೋವಾಗಿ ಪರಿಣಮಿಸಿದೆ.

ಎರಡು–ಮೂರು ಜನ ಮಾಡಬೇಕಾದ ಕೆಲಸವನ್ನು ಒಬ್ಬರೇ ನಿಭಾಯಿಸ
ಬೇಕಾಗಿರುವುದರಿಂದ ಪಶು ವೈದ್ಯರೂ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಕೆಲವೆಡೆ ಪ್ರಾಣಿ ಸಹಾಯಕರು ಇಲ್ಲದಿರುವುದರಿಂದ ಚಿಕಿತ್ಸೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ವೈದ್ಯರೇ ಮಾಡಿಕೊಳ್ಳಬೇಕಾಗುತ್ತಿದೆ. ಜಾನುವಾರು ಹಿಡಿದುಕೊಳ್ಳಲು ಸಹಾಯಕರಿಲ್ಲದ ಕಡೆ ಚಿಕಿತ್ಸೆ ನೀಡುವಾಗ ಏಟು ತಿನ್ನಬೇಕಾದ ಪ್ರಸಂಗವೂ ಎದುರಾಗುತ್ತಿದೆ ಎಂಬುದು ವೈದ್ಯರ ಅಳಲು.

15ರ ನಂತರ ಲಸಿಕಾ ಅಭಿಯಾನ: ‘ನ್ಯಾಮತಿ ಭಾಗದಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿತ್ತು. ಖಾಸಗಿಯಾಗಿ ಲಸಿಕೆಯನ್ನು ಖರೀದಿಸಿ ಜಾನುವಾರಿಗೆ ನೀಡಿದ್ದರಿಂದ ರೋಗ ನಿಯಂತ್ರಣಕ್ಕೆ ಬಂದಿದೆ. ಕೇಂದ್ರ ಸರ್ಕಾರ ಉಚಿತವಾಗಿ ನೀಡುವ ಲಸಿಕೆಯು ನವೆಂಬರ್‌ 15ರ ವೇಳೆಗೆ ಬರುವ ನಿರೀಕ್ಷೆ ಇದೆ. ಲಸಿಕೆ ಬಂದ ಬಳಿಕ ಮೈತ್ರಿ ಕಾರ್ಯಕರ್ತರನ್ನು ಬಳಸಿಕೊಂಡು 30 ದಿನಗಳ ಒಳಗೆ ಜಿಲ್ಲೆಯ ಎಲ್ಲಾ ಜಾನುವಾರಿಗೆ ಲಸಿಕೆ ಹಾಕಲಾಗುವುದು’ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪಶು ಸಂಜೀವಿನಿ: ‘ಪ್ರತಿ ತಾಲ್ಲೂಕಿನಲ್ಲೂ ಸಂಚಾರಿ ಪಶು ಚಿಕಿತ್ಸಾಲಯ ಇದೆ. ಇದರಲ್ಲಿ ನಮ್ಮ ವೈದ್ಯರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಪಶು ಸಂಜೀವಿನಿ ವಾಹನ ಜಿಲ್ಲೆಗೆ ಮಂಜೂರಾಗಿದೆ. ಶಸ್ತ್ರಚಿಕಿತ್ಸೆಯನ್ನೂ ಮಾಡುವ ಸೌಲಭ್ಯವಿರುವ ಈ ವಾಹನ ಬಂದರೆ ತುರ್ತು ಸಂದರ್ಭದಲ್ಲಿ ರೈತರ ಮನೆ ಬಾಗಿಲಿಗೇ ಹೋಗಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಲಿದೆ’ ಎಂದರು.

---

ಜಗಳೂರು: ಬಾಗಿಲು ಮುಚ್ಚಿರುವ ಪಶು ಆಸ್ಪತ್ರೆ

-ಡಿ. ಶ್ರೀನಿವಾಸ್

ಜಗಳೂರು: ವೈದ್ಯರು ಹಾಗೂ ಸಿಬ್ಬಂದಿ ಕೊರತೆ, ಕನಿಷ್ಠ ಮೂಲಸೌಕರ್ಯ ಇಲ್ಲದೆ ತಾಲ್ಲೂಕಿನ ಪಶುವೈದ್ಯಕೀಯ ಇಲಾಖೆ ಅವ್ಯವಸ್ಥೆಯ ಆಗರವಾಗಿದೆ.

ಅತ್ಯಂತ ಹೆಚ್ಚು ಕುರಿ, ಮೇಕೆ ಹಾಗೂ ಜಾನುವಾರುಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಬಹುತೇಕ ಪಶುವೈದ್ಯಕೀಯ ಆಸ್ಪತ್ರೆಗಳು ಬಾಗಿಲು ಮುಚ್ಚಿರುತ್ತವೆ. ಸಕಾಲಕ್ಕೆ ವೈದ್ಯರು ಹಾಗೂ ಚಿಕಿತ್ಸೆ ಲಭ್ಯವಾಗದೆ ಸಾಂಕ್ರಾಮಿಕ ರೋಗಗಳು ಬಂದ ಸಂದರ್ಭದಲ್ಲಿ ಬಡ ರೈತರ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವೀಗೀಡಾಗುತ್ತಿವೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ 8 ಪಶು ಆಸ್ಪತ್ರೆಗಳಿವೆ. 5 ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿವೆ. ಬಿಳಿಚೋಡು, ಪಲ್ಲಾಗಟ್ಟೆ ಹಾಗೂ ದೇವಿಕೆರೆ ಗ್ರಾಮದ ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 5 ಆಸ್ಪತ್ರೆಗಳಲ್ಲಿ ಕಸ ಹೊಡೆಯುವವರೂ ದಿಕ್ಕಿಲ್ಲದೆ ಕಟ್ಟಡ ಪಾಳುಬಿದ್ದಿವೆ.

‘ವೈದ್ಯರು ಹಾಗೂ ಸಿಬ್ಬಂದಿ ಸೇರಿ ಒಟ್ಟು 66 ಸಿಬ್ಬಂದಿ ಪೈಕಿ ಕೇವಲ 22 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೊಕ್ಕೆ, ತೋರಣಗಟ್ಟೆ, ಮಲ್ಲಾಪುರ ಹಾಗೂ ಬಸವನಕೋಟೆ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಕಸ ಹೊಡೆಯುವವರೂ ಇಲ್ಲವಾಗಿದೆ’ ಎಂದು ತಾಲ್ಲೂಕಿನ ಪಶುಸಂಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಬೇಸರ ವ್ಯಕ್ತಪಡಿಸಿದರು.

‘ಸಿಬ್ಬಂದಿ ಕೊರತೆ ನಡುವೆಯೂ ತಾಲ್ಲೂಕಿನ ತೋರಣಗಟ್ಟೆ, ಅಸಗೋಡು, ತಮಲೇಹಳ್ಳಿ, ರಾಜನಹಟ್ಟಿ ಮುಂತಾದ ಗ್ರಾಮಗಳಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಲಾಗಿದೆ. ಅಗತ್ಯ ವೈದ್ಯರ ನೇಮಕಾತಿಯಾದರೆ ಸಮರ್ಪಕವಾಗಿ ಸೇವೆ ನೀಡಲು ಅನುಕೂಲವಾಗಲಿದೆ’ ಎಂದು ಡಾ.ಲಿಂಗರಾಜ್ ತಿಳಿಸಿದರು.

----

ಸಕಾಲಕ್ಕೆ ಸಿಗದ ಚಿಕಿತ್ಸೆ

-ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕಿನಲ್ಲಿ ಮೂರು 3 ಪಶು ಆಸ್ಪತ್ರೆ, 8 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ 22 ಪಶು ಚಿಕಿತ್ಸಾಲಯಗಳಿವೆ. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ರೈತರ ಅಳಲು.

ಹಿರೇಕೋಗಲೂರು, ತ್ಯಾವಣಿಗೆ ಹಾಗೂ ತಾವರೆಕೆರೆ ಗ್ರಾಮದಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳು ಶಿಥಿಲಾವಸ್ಥೆಗೆ ತಲುಪಿವೆ. ಈ ಕೇಂದ್ರಗಳಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಶಿಥಿಲಗೊಂಡಿದ್ದ ಹಳೆಯ ಕಟ್ಟಡವನ್ನು ಬೀಳಿಸಿ, ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ.

ಕಣಿವೆಬಿಳಚಿ, ಬೆಳಲಗೆರೆ, ದಾಗಿನಕಟ್ಟೆ, ಗುಡ್ಡದ ಕೊಮಾರನಹಳ್ಳಿ ಹಾಗೂ ಪಾಂಡೋಮಟ್ಟಿ ಗ್ರಾಮದ ಕೇಂದ್ರಗಳಲ್ಲಿ ವೈದ್ಯರು ಇರುವುದಿಲ್ಲ. ಇಲ್ಲಿದ್ದ ವೈದ್ಯರು ವರ್ಗಾವಣೆಯಾಗಿ ಬೇರೆ ಕಡೆಗೆ ಹೋಗಿರುವುದರಿಂದ ಈ ಗ್ರಾಮಗಳಲ್ಲಿ ವೈದ್ಯರ ಕೊರತೆ ಉಂಟಾಗಿದೆ. ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿ ಇದೆ. ಪ್ರಸ್ತುತ ಈ ಕೇಂದ್ರಗಳಿಗೆ ವಾರದಲ್ಲಿ ಮೂರು ದಿನ ಬೇರೆ ಕಡೆಯಿಂದ ವೈದ್ಯರು ಬಂದು ಪಶುಗಳಿಗೆ ಚಿಕಿತ್ಸೆ ನೀಡಲು ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಪಶುವನ್ನು ಚಿಕಿತ್ಸಾಲಯಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಇಲ್ಲದಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಗುಡ್ಡದ ಕೊಮಾರನಹಳ್ಳಿ ಗ್ರಾಮದ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರಿಲ್ಲದೇ ಆರು ತಿಂಗಳಾಗಿವೆ. ಬಸವಾಪಟ್ಟಣದ ವೈದ್ಯರು ವಾರದಲ್ಲಿ ಮೂರು ದಿನ ಇಲ್ಲಿಗೆ ಬಂದು ಹೋಗುತ್ತಾರೆ. ಈ ಕೇಂದ್ರಕ್ಕೆ ಶಾಶ್ವತವಾಗಿ ವೈದ್ಯರನ್ನು ನೇಮಕ ಮಾಡಿದರೆ ಅನುಕೂಲವಾಗಲಿದೆ ಎಂದು ಜಿ.ಕೆ. ಹಳ್ಳಿ ಗ್ರಾಮದ ರೈತ ರಾಮಪ್ಪ ತಿಳಿಸಿದರು.

--------

ಶಿಥಿಲಗೊಂಡ ಆಸ್ಪತ್ರೆ ಕಟ್ಟಡ

-ಎನ್.ಕೆ. ಆಂಜನೇಯ

ಹೊನ್ನಾಳಿ: ಹೊನ್ನಾಳಿ ತಾಲ್ಲೂಕಿನಲ್ಲಿ 23 ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 12 ಪಶುಚಿಕಿತ್ಸಾಲಯಗಳಿವೆ. ತಾಲ್ಲೂಕಿನ ಸೊರಟೂರು, ಕೂಲಂಬಿ ಹಾಗೂ ಮಾದೇನಹಳ್ಳಿಯ ಪಶು ಆಸ್ಪತ್ರೆ ಕಟ್ಟಡಗಳು ಹಳೆಯದಾಗಿದ್ದು, ಮಳೆಗಾಲದಲ್ಲಿ ಸೋರುತ್ತಿವೆ. ಮಾದೇನಹಳ್ಳಿ ಪಶು ಚಿಕಿತ್ಸಾಲಯದಲ್ಲಿ ಮಳೆ ನೀರು ಕಟ್ಟಡದೊಳಕ್ಕೆ ನುಗ್ಗುತ್ತಿದೆ.

ಹೊನ್ನಾಳಿ ತಾಲ್ಲೂಕಿನ ಬನ್ನಿಕೋಡು, ಘಂಟ್ಯಾಪುರ, ದಿಡಗೂರು, ತರಗನಹಳ್ಳಿ ಹಾಗೂ ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮಗಳಲ್ಲಿ ಪಶು ಚಿಕಿತ್ಸಾಲಯಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ. ಬಾಬುರತ್ನ.

ಲಿಂಗಾಪುರ, ಅರಬಗಟ್ಟೆ ಕೇಂದ್ರಗಳಲ್ಲಿ ಸಿಬ್ಬಂದಿಯೇ ಇಲ್ಲ. ಅವಳಿ ತಾಲ್ಲೂಕಿಗೆ ಮಂಜೂರಾಗಿರುವ 83 ಸಿಬ್ಬಂದಿ ಪೈಕಿ
35 ಕಾಯಂ ಸಿಬ್ಬಂದಿ ಮಾತ್ರ  ಇದ್ದಾರೆ. 30 ಜನರನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗದುಕೊಳ್ಳಲಾಗಿದೆ.
ಚಟ್ನಹಳ್ಳಿ, ಹೊನ್ನಾಳಿ ಮತ್ತು ನ್ಯಾಮತಿ ಆಸ್ಪತ್ರೆಗಳಲ್ಲಿ ‘ಡಿ’ ದರ್ಜೆ ನೌಕರರ ಅವಶ್ಯಕತೆ ತುಂಬಾ ಇದೆ. ದನಕರು,
ಕುರಿ–ಮೇಕೆಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ತೊಂದರೆಯಾಗುತ್ತಿದೆ.

‘ಸಿಬ್ಬಂದಿ ಕೊರತೆಯಿಂದಾಗಿ ದನಕರು, ಕುರಿ–ಮೇಕೆಗಳಿಗೆ ಚಿಕಿತ್ಸೆ ನೀಡುವಾಗ ಕೆಲ ಬಾರಿ ವಿಳಂಬವಾಗುತ್ತಿದೆ.
ಪಶುಗಳಿಗೆ ಗಂಟಲು ಬೇನೆ, ಕುರಿಗಳಿಗೆ ಕರುಳು ಬೇನೆ, ಪಿಪಿಆರ್, ಕೋಳಿಗಳಿಗೆ ಕೊಕ್ಕರೆ ರೋಗ ಕಂಡುಬಂದರೆ ಅವುಗಳಿಗೆ ಸಕಾಲಕ್ಕೆ ಲಸಿಕೆ ಸಿಗುತ್ತಿವೆ. ಆದರೆ, ಕಾಲುಬಾಯಿ ರೋಗಕ್ಕೆ ಲಸಿಕೆ ಇನ್ನೂ ಬಾರದೇ ಇರುವುದರಿಂದ ತಾಲ್ಲೂಕಿನಲ್ಲಿ ರೋಗ ಹರಡುವ ಭೀತಿ ಇದೆ’
ಎನ್ನುತ್ತಾರೆ ಡಾ. ಬಾಬುರತ್ನ.

----

ನೂತನ ಕಟ್ಟಡಕ್ಕೆ ಪ್ರಸ್ತಾವ

-ವಿಶ್ವನಾಥ ಡಿ.

ಹರಪನಹಳ್ಳಿ: ಇಲ್ಲಿಯ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ಸಕಾಲಕ್ಕೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ಪರದಾಡುವಂತಾಗಿದೆ. ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಶಿಥಿಲಗೊಂಡಿದ್ದು, ಹಿಂಬದಿ ಇರುವ ಕೊಠಡಿಯಲ್ಲಿ ಕಚೇರಿ ನಡೆಸಲಾಗುತ್ತಿದೆ. ಜೊತೆಗೆ ವೈದ್ಯರ ಕೊರತೆಯಿಂದ ಒಬ್ಬ ಪಶು ವೈದ್ಯರು ಎರಡು ಆಸ್ಪತ್ರೆಗಳಲ್ಲಿ ಮೂರು ದಿನಗಳಂತೆ ಕೆಲಸ ನಿರ್ವಹಿಸುತ್ತಿದ್ದಾರೆ.

ಬಾಗಳಿ, ಗೋವೆರಹಳ್ಳಿ ಸೇರಿ ನಾಲ್ಕು ಕಡೆಗೆ ಪಶು ವೈದ್ಯರಿಲ್ಲ. ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಕಾಲುಬಾಯಿ ಲಸಿಕೆ ಅಭಿಯಾನ ಆರಂಭಿಸಲಾಗಿದ್ದ, ನ.23ರವರೆಗೆ ನಡೆಯಲಿದೆ. ಈಗ ಅನೇಕ ಜಾನುವಾರುಗಳು ಗುಣಮುಖವಾಗಿದ್ದು,
ಸಾವು ನಿಯಂತ್ರಣಕ್ಕೆ ಬಂದಿದೆ. 50 ಸಾವಿರ ಜಾನುವಾರುಗಳಿಗೆ ಲಸಿಕೆ ಬಂದಿದ್ದು, ಔಷಧಗಳ ಕೊರತೆಯಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ತಾಲ್ಲೂಕಿನಲ್ಲಿ 52 ಸಾವಿರ ದನ–ಕರುಗಳು, 35 ಸಾವಿರ ಎಮ್ಮೆಗಳು, 3.25 ಲಕ್ಷ ಕುರಿ – ಮೇಕೆಗಳಿವೆ. 12 ಪಶು ಆಸ್ಪತ್ರೆ ಹಾಗೂ 13 ಪ್ರಾಥಮಿಕ ಚಿಕಿತ್ಸಾಲಯಗಳಿವೆ.

ತಜ್ಞವೈದ್ಯರ ಕೊರತೆ

ದಾವಣಗೆರೆಯಲ್ಲಿ ಪಾಲಿ ಕ್ಲಿನಿಕ್‌ನ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಸದ್ಯ ಪಕ್ಕದಲ್ಲಿರುವ ಪೌಲ್ಟ್ರಿ ಶೆಡ್‌ನಲ್ಲೇ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾಲಿ ಕ್ಲಿನಿಕ್‌ಗೆ ಮಂಜೂರಾಗಿರುವ ಗೈನಾಕಾಲಜಿ, ಸರ್ಜರಿ ಹಾಗೂ ಮೆಡಿಸಿನ್‌ ವಿಭಾಗಗಳಲ್ಲಿ ತಲಾ ಒಬ್ಬ ತಜ್ಞವೈದ್ಯರ ಹುದ್ದೆ ಖಾಲಿ ಇದೆ. ತಜ್ಞರ ಕೊರತೆ ನಡುವೆಯೇ ಇರುವ ಸಾಮಾನ್ಯ ವೈದ್ಯರೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಮಾರ್ಗಸೂಚಿ ಪ್ರಕಾರ ಪ್ರತಿ ಐದು ವರ್ಷಗಳಿಗೆ ಒಮ್ಮೆ ಶೇ 20ರಷ್ಟು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಆದರೆ, ಅನುದಾನ ಕೊರತೆಯಿಂದಾಗಿ ಇದು ನನೆಗುದಿಗೆ ಬಿದ್ದಿದೆ.

....

ಕೆಳಹಂತದ ತಾಂತ್ರಿಕ ಸಿಬ್ಬಂದಿ ಕೊರತೆ ತೀವ್ರವಾಗಿರುವುದರಿಂದ ಗ್ರಾಮೀಣ ಪ್ರದೇಶಕ್ಕೆ ತೆರಳಿ ಜಾನುವಾರಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ಖಾಲಿ ಹುದ್ದೆ ಭರ್ತಿಯಾದರೆ ಸಕಾಲಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.

ಡಾ. ಚಂದ್ರಶೇಖರ ಸುಂಕದ, ಉಪನಿರ್ದೇಶಕ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

ದನ ಹೀಟ್‌ಗೆ ಬಂದಾಗ ಮೂರು–ನಾಲ್ಕು ಕಿ.ಮೀ. ದೂರದ ಹೊನ್ನಾಳಿ ಆಸ್ಪತ್ರೆಗೆ ಹೊಡೆದುಕೊಂಡು ಬರಬೇಕಾಗಿದೆ. ಗರ್ಭ ಧರಿಸಬೇಕಾದರೆ ಎರಡು–ಮೂರು ಬಾರಿ ಕರೆದುಕೊಂಡು ಬಂದು ಇಂಜೆಕ್ಷನ್‌ ಕೊಡಿಸಬೇಕಾಗುತ್ತಿದೆ. 

ಬಸವರಾಜಪ್ಪ, ರೈತ ದಿಡಗೂರು, ಹೊನ್ನಾಳಿ ತಾಲ್ಲೂಕು

ಕುರಿಗಳಿಗೆ ರೋಗ ಕಾಣಿಸಿಕೊಂಡರೆ ನಾವೇ ಆಸ್ಪತ್ರೆಗೆ ಕರೆದುಕೊಂಡು ಬರುತ್ತೇವೆ. ಸುತ್ತಲಿನ ಗ್ರಾಮೀಣ ಪ್ರದೇಶದವರು ನಾಲ್ಕೈದು ಕಿ.ಮೀ. ದೂರದಿಂದ ದನ–ಕರು, ಕುರಿಗಳನ್ನು ಹೊಡೆದುಕೊಂಡು ಬಂದು ತೋರಿಸಬೇಕಾಗುತ್ತಿದೆ. ಮಂಜಪ್ಪ, ಕುರಿ ಸಾಕಾಣಿಕೆದಾರ, ಹೊನ್ನಾಳಿ

ಹರಪನಹಳ್ಳಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡಕ್ಕೆ ₹ 50 ಲಕ್ಷದ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಡಾ.ಶಿವಕುಮಾರ ಜ್ಯೋತಿ, ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ

ಹರಪನಹಳ್ಳಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡಕ್ಕೆ ₹ 50 ಲಕ್ಷದ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗಿದೆ.

– ಡಾ.ಶಿವಕುಮಾರ ಜ್ಯೋತಿ, ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು