ಚಿತ್ರದುರ್ಗ ಜಿಲ್ಲೆಗೆ ಜಗಳೂರು ಮರುಸೇರ್ಪಡೆ ಹೋರಾಟಕ್ಕೆ ವೇದಿಕೆ ಸಜ್ಜು

7

 ಚಿತ್ರದುರ್ಗ ಜಿಲ್ಲೆಗೆ ಜಗಳೂರು ಮರುಸೇರ್ಪಡೆ ಹೋರಾಟಕ್ಕೆ ವೇದಿಕೆ ಸಜ್ಜು

Published:
Updated:
Deccan Herald

ಜಗಳೂರು: ಮುಂದುವರೆದ ದಾವಣಗೆರೆ ಜಿಲ್ಲೆಯಲ್ಲಿರುವ ಬರಪೀಡಿತ ಜಗಳೂರು ತಾಲ್ಲೂಕಿಗೆ ಸರ್ಕಾರದ ಎಲ್ಲ ಯೋಜನೆಗಳಲ್ಲಿ ತೀವ್ರ ತಾರತಮ್ಯ ಆಗುತ್ತಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರುಸೇರ್ಪಡೆ ಮಾಡಬೇಕು ಎಂದು ಪಟ್ಟಣದಲ್ಲಿ ಶನಿವಾರ ನಡೆದ ನಾಗರಿಕರ ಪೂರ್ವಬಾವಿ ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ 20 ವರ್ಷಗಳ ಹಿಂದೆ ಜಗಳೂರು ತಾಲ್ಲೂಕು ಸೇರ್ಪಡೆಯಾದರೂ ಇದುವರೆಗೆ ಶಾಶ್ವತ ಅಭಿವೃದ್ಧಿ ಯೋಜನೆಗಳು ಜಾರಿಯಾಗಿಲ್ಲ. ಅಡಿಕೆ ಹಾಗೂ ಭತ್ತದ ನಾಡು ಎನಿಸಿರುವ ದಾವಣಗೆರೆ ಹಾಗೂ ಶಾಶ್ವತ ಬರಪೀಡಿತ ಪ್ರದೇಶವಾದ ಜಗಳೂರು ತಾಲ್ಲೂಕಿಗೆ ಭೌಗೋಳಿಕವಾಗಿ ಅಜಗಜಾಂತರ ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ತಾಲ್ಲೂಕನ್ನು ಮರುಸೇರ್ಪಡೆಗೆ ಆಗ್ರಹಿಸಿ ಬೃಹತ್‌ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ ಮಾತನಾಡಿ, ‘ಅಭಿವೃದ್ಧಿಯಿಂದ ವಂಚಿತವಾಗಿರುವ ಜಗಳೂರು ತಾಲ್ಲೂಕಿನ ಅಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಚಿತ್ರದುರ್ಗಕ್ಕೆ ಮರು ಸೇರ್ಪಡೆ ಆಗಲೇಬೇಕು. ಈ ಬಗ್ಗೆ ಪಕ್ಷಭೇದವಿಲ್ಲದೆ ಹೋರಾಟ ಕೈಗೊಳ್ಳಬೇಕು’ ಎಂದರು.

‘ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಸದಸ್ಯ ಅಸಗೋಡು ಕೊಟ್ರೇಶ್, ಆರ್ಥಿಕವಾಗಿ ಮುಂದುವರೆದಿರುವ ಹಾಗೂ ನೀರಾವರಿ ಪ್ರದೇಶದ ಹೊಂದಿರುವ ಜಿಲ್ಲೆಯಲ್ಲಿರುವ ಕಾರಣ ಜಗಳೂರಿಗೆ ಸರ್ಕಾರದ ಅನುದಾನ ಸಮರ್ಪಕವಾಗಿ ಸಿಗುತ್ತಿಲ್ಲ. ಹಿಂದುಳಿದ ಚಿತ್ರದುರ್ಗಕ್ಕೆ ಮರುಸೇರ್ಪಡೆಯಾದಲ್ಲಿ ಮಾತ್ರ ದೊಡ್ಡ ಪ್ರಮಾಣದ ಅನುದಾನ ಹಾಗೂ ಸರ್ಕಾರದ ಪರಿಹಾರ ಯೋಜನೆಗಳು ನಮಗೆ ಸಿಗಲಿವೆ’ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಎನ್‌.ಎಸ್‌. ರಾಜು, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ. ಲಕ್ಷ್ಮಣ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ದಲಿತ ಮುಖಂಡ ಜಿ.ಎಚ್‌. ಶಂಬುಲಿಂಗಪ್ಪ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಮಹಾಲಿಂಗಪ್ಪ, ನೀರಾವರಿ ಹೋರಾಟ ಸಮಿತಿಯ ಲಿಂಗರಾಜ್, ನಾಗಲಿಂಗಪ್ಪ ಇದ್ದರು.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !