ದಾವಣಗೆರೆ: ಆರಂಭವಾಗದ ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ, ಪ್ರತಿಭಟನೆ

7

ದಾವಣಗೆರೆ: ಆರಂಭವಾಗದ ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ, ಪ್ರತಿಭಟನೆ

Published:
Updated:
Deccan Herald

ದಾವಣಗೆರೆ: ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದೇ ರೈತರಿಗೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ರೈತ ಸಂಘಗಳು, ಪ್ರಗತಿಪರ ಸಂಘಟನೆಗಳು, ರೈತ ಹಿತ ಚಿಂತಕರ ಒಕ್ಕೂಟ ಸೋಮವಾರ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರ, ಭತ್ತ, ಮೆಕ್ಕೆಜೋಳ ಸೇರಿದಂತೆ 9 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಈವರೆಗೆ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಖರೀದಿ ಕೇಂದ್ರವಿಲ್ಲದೆ ಬೆಂಬಲ ಬೆಲೆ ರೈತರಿಗೆ ತಲುಪುವುದು ಹೇಗೆ’ ಎಂದು  ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹ 1,750 ಬೆಂಬಲ ಬೆಲೆ ಘೋಷಿಸಿದೆ. ಮೆಕ್ಕೆಜೋಳ ಖಟಾವು ಆರಂಭವಾಗಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ₹ 1 200, ₹ 1 300ಕ್ಕೆ ಖರೀದಿಯಾಗುತ್ತಿದೆ. ಅಧಿಕಾರಿಗಳು ತಮಗೇನು ಗೊತ್ತಿಲ್ಲದಂತೆ ನಾಟಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅ. 2ರಂದು ಕಪ್ಪುಪಟ್ಟಿ ಧರಿಸಿ ಧರಣಿ, 3ರಿಂದ ಹೆದ್ದಾರಿ ತಡೆ ಚಳವಳಿ ಮಾಡಲಾಗುವುದು. ಖರೀದಿ ಕೇಂದ್ರ ಆರಂಭವಾಗುವವರೆಗೆ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್ ಮಾತನಾಡಿ, ‘ಖರೀದಿ ಕೇಂದ್ರಕ್ಕಾಗಿ ರೈತರು ಬೀದಿಗಳಿದು ಹೋರಾಟ ಮಾಡುತ್ತಿರುವುದು ಕೇಂದ್ರ, ರಾಜ್ಯ ಸರ್ಕಾರದ ಹೊಣೆಗೇಡಿತನಕ್ಕೆ ಸಾಕ್ಷಿ. ಅಧಿಸೂಚನೆ ಮೂಲಕ ಬೆಂಬಲ ಬೆಲೆ ಘೋಷಣೆ ಮಾಡುವುದರಿಂದ ಪ್ರಯೋಜನವಿಲ್ಲ. ಅದನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಒತ್ತಾಯಿಸಿದರು.

‘ಖರೀದಿ ಕೇಂದ್ರ ವಿಳಂಬವಾದರೆ ಅಧಿಕಾರಿಗಳೇ ನೇರ ಹೊಣೆಗಾರರು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವುದು ಶಿಕ್ಷಾರ್ಹ ಅಪರಾಧವೆಂಬ ಕಾನೂನು ಜಾರಿಯಾಗಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಎಂ.ಎಸ್.ಕೆ. ಶಾಸ್ತ್ರಿ, ಎಚ್.ಎಂ. ಮಹೇಶ್ವರ ಸ್ವಾ ಮಿ, ಚಿಕ್ಕನಹಳ್ಳಿ ರೇವಣಸಿದ್ದಪ್ಪ ಅವರೂ ಮಾತನಾಡಿದರು.

ಹೆಬ್ಬಾಳು ವಿರಕ್ತಮಠದ ಮಹಾಂತರುದ್ರ ಸ್ವಾಮೀಜಿ, ಶಾಸಕ ಎಸ್.ವಿ. ರಾಮಚಂದ್ರಪ್ಪ, ಕಬ್ಬಳ ಪ್ರಸಾದ್, ಮಲ್ಲೇಶ್ ಹೊಸಳ್ಳಿ, ಶ್ರೀನಿವಾಸ್, ಬೀಡಿ ಕಾರ್ಮಿಕರ ಸಂಘಟನೆ ಕೊಟ್ರೇಶ್, ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಅನಿಸ್ ಪಾಷಾ, ಭೀಮಾನಾಯ್ಕ್ ಅವರೂ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !