ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ: ಸಚಿವ ಕೆ.ಎಸ್‌. ಈಶ್ವರಪ್ಪ

Last Updated 19 ಸೆಪ್ಟೆಂಬರ್ 2021, 5:00 IST
ಅಕ್ಷರ ಗಾತ್ರ

ದಾವಣಗೆರೆ: ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಾಲ್ಕು ತಂಡಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಲು ನಿರ್ಧರಿಸಲಾಗಿದ್ದು, ಭಾನುವಾರ ನಡೆಯುವ ಕಾರ್ಯಕಾರಿಣಿಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪ್ರವಾಸ ಆರಂಭಿಸಲಾಗುವುದು’ ಎಂದು ಹೇಳಿದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯಲು ಪಕ್ಷ ಸಂಘಟಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎನ್ನುವ ಅಪೇಕ್ಷೆ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪೂರ್ಣ ಬಹುಮತ ಸಿಕ್ಕಿಲ್ಲ. ಇಲ್ಲಿ ನಡೆಯು ಕಾರ್ಯಕಾರಣಿ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುತ್ತದೆ.ಪಕ್ಷವನ್ನು ಸಂಘಟಿಸಿ ಮುಂಬರುವ ಚುನಾವಣೆಗಳನ್ನು ಗೆಲ್ಲಲು ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್‌ಕುಮಾರ್ ಕಟೀಲ್ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದುಕೇಂದ್ರದ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ತೀರ್ಮಾನದ ಪ್ರಕಾರ ನಡೆಯುತ್ತದೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ವಿಳಂಬ ಸಂಬಂಧ ಪ್ರತಿಕ್ರಿಯಿಸಿ, ‘ಮೀಸಲಾತಿ ಸಂಬಂಧ 2600ಕ್ಕೂ ಹೆಚ್ಚು ಅರ್ಜಿಗಳು ಚುನಾವಣಾ ಆಯೋಗ ಹಾಗೂ ಕೋರ್ಟ್‌ನಲ್ಲಿ ಇವೆ. ಸರಿಯಾಗಿ ಆಗಬೇಕು ಎನ್ನುವ ದೃಷ್ಟಿಯಿಂದ ಬಿಜೆಪಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆಯೇ ಹೊರತು ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬೆಲೆ ಏರಿಕೆ ಹಾಗೂ ಇಳಿಕೆ ಸ್ವಾಭಾವಿಕ, ಇದು ಹೊಸತಲ್ಲ. ಸ್ವಾತಂತ್ರ್ಯ ಕಾಲದಿಂದಲೂ ಇದೆ. ಚುನಾವಣೆಯಲ್ಲಿ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದರು. ಪಾಲಿಕೆ ಚುನಾವಣೆಯಲ್ಲಿ ಬಹುಮತ ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯಗೆ ಈಗ ಆಸಕ್ತಿ ಬಂದಿದೆ:

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ನಾಸ್ತಿಕರು ಎಂದು ಹೇಳುತ್ತಿದ್ದರು. ಈಗ ದೇವರ ಬಗ್ಗೆ ಆಸಕ್ತಿ ಬಂದಿದೆ.ಯಾರೇ ನಾಸ್ತಿಕರಾದರೂ ದೇವರಿಗೆ ಗೌರವ ಕೊಡಬೇಕು. ಇದಕ್ಕೆ ಸಿದ್ದರಾಮಯ್ಯ ಅವರೇ ಸಾಕ್ಷಿ. ನಾಸ್ತಿಕ ಎಂಬ ಪದ ಹೇಳಿಕೆಗೆ ಅಷ್ಟೇ’ ಎಂದರು.

ಕೇರಳದಲ್ಲಿ ಕಮ್ಯನಿಸ್ಟರು ಎಷ್ಟೇ ಗಟ್ಟಿ ಇದ್ದರೂ ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ಕುಂಕುಮ ಹಚ್ಚಿ ನಾಮಪತ್ರ ಸಲ್ಲಿಸುತ್ತಾರೆ. ಅವರ ಸಿದ್ಧಾಂತಕ್ಕೂ ಆಚರಣೆಗೂ ಒಂದಕ್ಕೊಂದು ಸಂಬಂಧವಿಲ್ಲ. ಇವತ್ತಲ್ಲ, ನಾಳೆ ಯಾರೇ ಆದರೂ ಆಸ್ತಿಕರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT