ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದೊಳಗೆ ಕೋಣೆ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ದೈತ್ಯ ಗಾತ್ರದ ಮರ, ದೊಡ್ಡದಾದ ಕಾಂಡ, ಕಾಂಡದೊಳಗೆ ಕೋಣೆ, ಆ ಕೋಣೆಯೊಳಗೆ ಪ್ರವೇಶಿಸಲು ಪುಟ್ಟ ದ್ವಾರ. ಇಂತಹ ಅಪರೂಪದ ಮರ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಇದೆ. ಈ ಮರದ ಹೆಸರು ‘ಬವೊಬಾಬ್’ ಇತರೆ ಮರಗಳಿಗೆ ಹೋಲಿಸಿದರೆ ಇದರ ಕಾಂಡ ತುಂಬಾ ದೊಡ್ಡದಾಗಿರುತ್ತದೆ.

ಈ ವರೆಗೆ ಒಂಬತ್ತು ಬವೊಬಾಬ್‌ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಆರು ಮಡಗಾಸ್ಕರ್‌, ಎರಡು ಆಫ್ರಿಕಾ ರಾಷ್ಟ್ರಗಳಲ್ಲಿ ಮತ್ತು ಒಂದು ಆಸ್ಟ್ರೇಲಿಯಾದಲ್ಲಿದೆ.

ಮರ ಬೆಳೆದಂತೆಲ್ಲಾ, ಕಾಂಡ ಉಬ್ಬಿ ಕೋಣೆಯಂತ ಪ್ರದೇಶ ನಿರ್ಮಾಣವಾಗುತ್ತದೆ. ಕೆಲವೊಂದು ಮರಗಳಲ್ಲಾದರೆ ಒಳಗೆ ಹೋಗಲು ದ್ವಾರಗಳೂ ಸಹಜವಾಗಿ ರಚನೆಯಾಗುತ್ತವೆ. ಕೆಲವೊಂದಕ್ಕೆ ಸ್ಥಳೀಯರೇ ಬಾಗಿಲು ನಿರ್ಮಿಸುತ್ತಾರೆ.

ಈ ಕಾಂಡದೊಳಗೆ ಮರ ಹೀರಿಕೊಂಡ ಲೀಟರ್‌ಗಟ್ಟಲೇ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಹೀಗಾಗಿ ಇವಕ್ಕೆ ‘ಬಾಟಲ್ ಟ್ರೀಸ್‌’ ಎಂಬ ಹೆಸರೂ ಇದೆ. ಬೇಸಿಗೆಯಲ್ಲಿ ಈ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಎದುರಾದಾಗ ಈ ಮರದೊಳಗಿನ ನೀರೇ ಆಸರೆ, ಆನೆಯಂತಹ ಪ್ರಾಣಿಗಳೂ ಇಲ್ಲಿಗೆ ಬಂದು ಸೊಂಡಿಲ ಸಹಾಯದಿಂದ ನೀರನ್ನು ಕುಡಿದು ಹೋಗುತ್ತವೆ. ಪಕ್ಷಿಗಳ ದಾಹ ತಣಿಸುವುದಕ್ಕೂ ಈ ನೀರೆ ನೆರವಾಗುತ್ತದೆ.

ಈ ಮರವನ್ನು ಹಲವು ವಿಧಗಳಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾದಲ್ಲಿ 19ನೇ ಶತಮಾನದಲ್ಲಿ ಖೈದಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಾಗ, ರಾತ್ರಿಯಲ್ಲಿ ಈ ಮರಗಳ ಬಳಿಗೆ ಪೊಲೀಸರು ತಂಗುತ್ತಿದ್ದರು. ಕೈದಿಗಳನ್ನು ಮರದ ಕಾಂಡದೊಳಗೆ ಬಂಧಿಸಿ ಇಡುತ್ತಿದ್ದರು. ಹೀಗಾಗಿಯೇ ಮರದ ಕಾಂಡಗಳಿಗೆ ಬಾಗಿಲುಗಳನ್ನು ಇಡಲಾಗಿದೆ ಎಂದು ಹಲವು ಕಥೆಗಳು ಪ್ರಚಾರದಲ್ಲಿವೆ.

ಆಸ್ಟ್ರೇಲಿಯಾ, ಮಡಗಾಸ್ಕರ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ಈ ಮರಗಳನ್ನು ಈವರಗೆ ಜೈಲು, ಅಂಚೆ ಕಚೇರಿ, ವಿನೋದ ಕೇಂದ್ರ ಹೀಗೆ ಹಲವು ವಿಧದಲ್ಲಿ ಬಳಸಿಕೊಳ್ಳಲಾಗಿದೆ.

ಈ ಮರದ ವಿಶಾಲ ಕಾಂಡದಲ್ಲಿ ಮನುಷ್ಯ ಮಲಗುವಷ್ಟು ಪ್ರದೇಶವಿರುತ್ತದೆ. ಕಾಂಡದೊಳಗಿನ ಮೇಲ್ಭಾಗ ಸುಮಾರು ಎರಡು ಅಂತಸ್ತುಗಳಷ್ಟು ಎತ್ತರವಿರುತ್ತದೆ. ಈ ಮರದ ಹಣ್ಣುಗಳ ಮೇಲಿನ ಪೊರೆಯನ್ನು ಅಡುಗೆಯಲ್ಲಿ ಮತ್ತು ಮದ್ಯ ತಯಾರಿಗೆ ಬಳಸುತ್ತಾರೆ.

ಈ ಮರಗಳಿಗೆ ಆಯಸ್ಸು ಹೆಚ್ಚು. ನಮೀಬಿಯಾದಲ್ಲಿನ ಒಂದು ಮರ ಸುಮಾರು 1200 ವರ್ಷ ಜೀವಂತವಾಗಿತ್ತು. ಮೂರು ವರ್ಷಗಳ ಹಿಂದೆ ಮರ ಉರುಳಿಬಿತ್ತು. ಇದಷ್ಟೇ ಅಲ್ಲದೆ, ಸೆನೆಗಲ್‌ನಲ್ಲಿ ಸುಮಾರು 6,000 ವರ್ಷಗಳಷ್ಟು ಹಳೆಯದಾದ ಮರವನ್ನು ಪತ್ತೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT