ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳಲ್ಲಿ ಕಳವು: ಇಬ್ಬರ ಸೆರೆ

ಯುವಕನ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಆರೋಪಿಗಳು
Last Updated 24 ಸೆಪ್ಟೆಂಬರ್ 2020, 15:58 IST
ಅಕ್ಷರ ಗಾತ್ರ

ದಾವಣಗೆರೆ: ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಉಪವಿಭಾಗದ ಪೊಲೀಸ್‌ ತಂಡ ಪತ್ತೆ ಹಚ್ಚಿದೆ. ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ.

ಹರಿಹರ ತಾಲ್ಲೂಕು ಮಲೇಬೆನ್ನೂರಿನ ಮನೋಜ್‌ (24), ಹರಿಹರ ಆಶ್ರಯ ಕಾಲೊನಿಯ ಹಾಲೇಶ್‌ (24) ಸಿಕ್ಕಿಬಿದ್ದವರು. ಮಲೇಬೆನ್ನೂರಿನ ವಿಕ್ರಮ್‌ ಅಲಿಯಾಸ್‌ ವಿಕ್ರಮ್‌ ರಾಥೋಡ್‌ ತಲೆಮರೆಸಿಕೊಂಡ ಆರೋಪಿ.

ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೂರು, ಮಲೇಬೆನ್ನೂರು, ಹರಿಹರ ಗ್ರಾಮಾಂತರ, ಬಸವಾಪಟ್ಟಣ, ಹದಡಿ ಹಾಗೂ ಗದಗ ಜಿಲ್ಲೆಯ ಮುಂಡರಗಿ ಠಾಣೆಯ ತಲಾ ಒಂದು ದೇವಸ್ಥಾನಗಳಲ್ಲಿ ಕಳವು ಮಾಡಿರುವುದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ₹ 1 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಯುವಕನ ಸಮಯ ಪ್ರಜ್ಞೆ: ಅಜಯ್‌ ಎಂಬ ಯುವಕನ ಸಮಯಪ್ರಜ್ಞೆಯಿಂದಾಗಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಸೆ.20ರಂದು ಮುಂಜಾನೆ ಶಿರಮಗೊಂಡನಹಳ್ಳಿ ಗ್ರಾಮದ ಉಡಸಲಮ್ಮ ದೇವಸ್ಥಾನದ ಬಾಗಿಲು ಮುರಿಯಲು ಯಾರೋ ಪ‍್ರಯತ್ನಿಸುತ್ತಿದ್ದರು. ದಾವಣಗೆರೆಯಿಂದ ಹದಡಿ ಕಡೆಗೆ ಹೋಗುತ್ತಿದ್ದ ಅಜಯ್‌ ಎಂಬವರು ಇದನ್ನು ಕಂಡು ತನ್ನ ವಾಹನವನ್ನು ನಿಲ್ಲಿಸಿ ಅವರ ಬಗ್ಗೆ ವಿಚಾರಿಸಿದ್ದಾರೆ. ತನ್ನ ಮೊಬೈಲಲ್ಲಿ ಅವರ ಫೋಟೊ ಸೆರೆ ಹಿಡಿದಿದ್ದಾನೆ. ಆಗ ಹೆದರಿದ್ದ ಆರೋಪಿಗಳು ತಮ್ಮ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ಅಜಯ್‌ ಈ ಬಗ್ಗೆ ಮಾಹಿತಿ ನೀಡಿದ್ದರು ಎಂದರು.

ಈ ಕಳವು ಆರೋಪಿಗಳ ಪತ್ತೆಗಾಗಿ ತಂಡ ರಚನೆ ಮಾಡಲಾಗಿತ್ತು. ಆ ಫೋಟೊ ಮತ್ತು ಬೈಕ್‌ ವಿವರದಿಂದಾಗಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಸುಲಭವಾಯಿತು. ಸಾರ್ವಜನಿಕರು ಇದೇ ರೀತಿ ಜಾಗೃತಗೊಂಡರೆ ಪೊಲೀಸರ ತನಿಖೆ ಸುಲಭವಾಗಲಿದೆ ಎಂದು ತಿಳಿಸಿದರು.

ಅಜಯ್‌ಗೆ ಶ್ಲಾಘನೆ ಪತ್ರ ಮತ್ತು ಬಹುಮಾನ ನೀಡಲಾಗುವುದು ಎಂದು ಎಸ್‌ಪಿ ಘೋಷಿಸಿದರು.

ಎಸ್‌ಪಿ ಹನುಮಂತರಾಯ, ಎಎಸ್‌ಪಿ ರಾಜೀವ್ ಎಂ., ಡಿವೈಎಸ್‌ಪಿ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ದಾವಣಗೆರೆ ಗ್ರಾಮಾಂತರ ಇನ್‌ಸ್ಪೆಕ್ಷರ್‌ ಬಿ. ಮಂಜುನಾಥ, ಪಿಎಸ್‌ಐಗಳಾದ ಎಂ. ಪಾಷಾ, ಅಶ್ವಿನ್‌ ಕುಮಾರ್‌, ಎಎಸ್‌ಐ ಜೋವಿತ್‌ರಾಜ್‌, ದೇವೇಂದ್ರನಾಯ್ಕ, ನಾಗರಾಜಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಿಸಿಟಿವಿ ಕ್ಯಾಮೆರಾ ಅಳವಡಿಸಿ: ಎಸ್‌ಪಿ

ಸ್ಮಾರ್ಟ್‌ಸಿಟಿ ಯೋಜನೆಯಡಿ 200 ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದೆ. 500 ಜನ ಬಂದು ಹೋಗುವ, 100 ಜನ ಇರುವ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಕರ್ನಾಟ್ಕ ಪಬ್ಲಿಕ್‌ ಸೇಫ್ಟಿ ಆ್ಯಕ್ಟ್‌ ತಿಳಿಸಿದೆ. ಎಲ್ಲ ವಾಣಿಜ್ಯ ಮಳಿಗೆ, ಅಪಾರ್ಟ್‌ಮೆಂಟ್‌, ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಎಸ್‌ಪಿ ಹನುಮಂತರಾಯ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT