ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: 20 ಸಾವಿರ ಮರಗಳಿದ್ದ ನೆಡುತೋಪು ನೆಲಸಮ

ಗೋಪಗೊಂಡನಹಳ್ಳಿ: ಸರ್ಕಾರಿ ಜಮೀನು ಕಬಳಿಸುವ ಹುನ್ನಾರ ಆರೋಪ
Last Updated 28 ಜುಲೈ 2021, 6:01 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನ ಗೋಪಗೊಂಡನಹಳ್ಳಿ ಸಮೀಪದಲ್ಲಿರುವ, ಸರ್ಕಾರಕ್ಕೆ ಸೇರಿದ ಗೋಮಾಳದಲ್ಲಿದ್ದ 20 ಸಾವಿರಕ್ಕೂ ಹೆಚ್ಚು ಮರಗಳನ್ನು ಯಂತ್ರಗಳಿಂದ ತುಂಡರಿಸಿ, ಬುಡಗಳಿಗೆ ಬೆಂಕಿಹಚ್ಚಿ ಅಕ್ರಮವಾಗಿ ಭೂಮಿಯನ್ನು ಕಬಳಿಸುವ ಯತ್ನ ನಡೆದಿದ್ದು, ಅರಣ್ಯ ಹಾಗೂ ಕಂದಾಯ ಇಲಾಖೆಯ ಯಾವುದೇ ಅಧಿಕಾರಿಗಳು ಇದುವರೆಗೂ ಸ್ಥಳಕ್ಕೆ ಭೇಟಿ ನೀಡದಿರುವುದು ಅಚ್ಚರಿ ಮೂಡಿಸಿದೆ.

ಗೋಪಗೊಂಡನಹಳ್ಳಿ ಗ್ರಾಮದ ಸಮೀಪವಿರುವ ಕುಳ್ಳೋಬನಹಳ್ಳಿಗೆ ಸೇರಿದ ಸರ್ವೇ ನಂ.2/1 ಹಾಗೂ 2/2ರಲ್ಲಿ ಸುಮಾರು 25 ಎಕರೆ ಸರ್ಕಾರಿ ಗೋಮಾಳದಲ್ಲಿ 20 ವರ್ಷಗಳಿಂದ ಬೆಳೆಸಿದ್ದ ಸಮೃದ್ಧ ನೆಡುತೋಪನ್ನು ಸಂಪೂರ್ಣ ನಾಶ ಮಾಡಲಾಗಿದೆ. ಕಳೆದ ಒಂದು ವಾರದಿಂದ ಕೆಲವು ವ್ಯಕ್ತಿಗಳು ಗುಂಪುಕಟ್ಟಿಕೊಂಡು ಮರ ಕೊಯ್ಯುವ ಯಂತ್ರಗಳಿಂದ ಹಗಲು ರಾತ್ರಿ ಸಾವಿರಾರು ಮರಗಳನ್ನು ತುಂಡರಿಸಿ ಮಾರಣಹೋಮ ನಡೆಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕಳೆದ 18 ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿತ್ತು. ಹೊಂಗೆ, ತುಗ್ಗಲಿ, ಜತ್ರೋಪ, ಬೇವು, ನೀಲಗಿರಿ, ಕಮರ ಮುಂತಾದ ಜಾತಿಯ ಸಾವಿರಾರು ಮರಗಳ ನೆಡುತೋಪು ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತಿತ್ತು. ತರಾತುರಿಯಲ್ಲಿ ರಂಬೆಕೊಂಬೆ ಹಾಗೂ ಕಾಂಡಗಳನ್ನು ಯಂತ್ರದಿಂದ ಕಡಿದು ತುಂಡರಿಸಲಾಗಿದೆ. ಬುಡಗಳಿಗೆ ಬೆಂಕಿ ಹಚ್ಚಿ ಜೆಸಿಬಿ ಯಂತ್ರಗಳಿಂದ ದೊಡ್ಡದಾದ ಬುಡಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಆಸುಪಾಸಿನ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಇದುವರೆಗೆ ಯಾರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬುಳ್ಳನಹಳ್ಳಿ, ಕಸ್ತೂರಿಪುರ, ರಸ್ತೆ ಮಾಚಿಕೆರೆ ಗೋಪಗೊಂಡನಹಳ್ಳಿ, ಮಾಳಮ್ಮನಹಳ್ಳಿ ಮುಂತಾದ ಸಹಸ್ರಾರು ಜಾನುವಾರುಗಳಿಗೆ ಮೇವಿನ ನೆಲೆಯಾಗಿರುವ ಹಾಗೂ ವೈವಿಧ್ಯಮಯ ಮರಗಳ ಮಾರಣಹೋಮ ನಡೆಸಲಾಗಿದೆ. ಭೂಮಿಯನ್ನು ಕಬಳಿಸುವ ಹುನ್ನಾರ ಅಡಗಿದೆ’ ಎಂದು ಬುಳ್ಳನಹಳ್ಳಿ ಗ್ರಾಮದ ಆರ್‌ಟಿಐ ಕಾರ್ಯಕರ್ತ ಹಾಗೂ ವಕೀಲ ಎಸ್. ಹಾಲಪ್ಪ ಆರೋಪಿಸಿದ್ದಾರೆ.

‘ಈ ಬಗ್ಗೆ ದೂರು ನೀಡಲು ಹೋದರೆ ಅರಣ್ಯ ಇಲಾಖೆಯವರು ಗೋಮಾಳ ತಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಾರೆ. ತಹಶೀಲ್ದಾರ್ ಅವರು ಅರಣ್ಯ ಇಲಾಖೆಯವರ ಕಡೆ ಕೈ ತೋರಿಸುತ್ತಾರೆ. ಇಲಾಖೆಗಳ ನಡುವಿನ ಗೊಂದಲದಿಂದ ಅಮೂಲ್ಯ ಮರಗಿಡಗಳ ಮಾರಣಹೋಮ ನಡೆದಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಟ್ಟಿದ್ದು, ನೆಡುತೋಪು ಸಂರಕ್ಷಣೆ ಆ ಇಲಾಖೆಗೆ ಸೇರಿದ್ದು. ಕೂಡಲೇ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ’ ಎಂದು ತಹಶೀಲ್ದಾರ್ ನಾಗವೇಣಿ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ನೆಡುತೋಪು ಜಾಗ ಗೋಮಾಳವಾಗಿರುವುದರಿಂದ ಕಂದಾಯ ಇಲಾಖೆಗೆ ಸೇರಿದೆ. ‘ಮರ ಸಂರಕ್ಷಣಾ ಕಾಯ್ದೆ’ ಅನ್ವಯ ತಹಶೀಲ್ದಾರ್ ಅವರು ಮರ ಕಡಿತಲೆ ಬಗ್ಗೆ ನಮಗೆ ದೂರು ನೀಡಿದರೆ ಮಾತ್ರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಪ್ರಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT