ಶನಿವಾರ, ಮಾರ್ಚ್ 25, 2023
29 °C
ಅಸಂಘಟಿತ ವಲಯದ ಎಲ್ಲ ವರ್ಗಗಳಿಂದ 27,000 ಅರ್ಜಿ ಸಲ್ಲಿಕೆ

350 ಅಕ್ಕಸಾಲಿಗರಿಗೆ ಉದ್ಯೋಗ ದೃಢೀಕರಣ ಪತ್ರ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಕಾಲದ ಸಂಕಷ್ಟ ಪರಿಹಾರವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಅಕ್ಕಸಾಲಿಗರಿಗೂ ಈ ಬಾರಿ ಸಹಾಯ ಲಭಿಸಲಿದೆ. ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ 350 ಅಕ್ಕಸಾಲಿಗರು ಉದ್ಯೋಗ ದೃಢೀಕರಣ ಪತ್ರ ಪಡೆದಿದ್ದು, ಪರಿಹಾರ ಧನ ಪಡೆಯಲು ಅರ್ಹರೆನಿಸಿದ್ದಾರೆ.

ಕೋವಿಡ್‌ ಆರಂಭವಾದಾಗಿನಿಂದ ಚಿನ್ನ–ಬೆಳ್ಳಿ ಖರೀದಿ ಕುಸಿತವಾಗಿರುವುದರಿಂದ ಅಕ್ಕಸಾಲಿಗರಿಗೆ ಕೆಲಸ ಕಡಿಮೆಯಾಗಿ ಆದಾಯ ಇಲ್ಲದಂತಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸವಿಲ್ಲದೇ ಸಾಲದ ಶೂಲಕ್ಕೆ ಸಿಲುಕಿರುವ ಇವರಿಗೆ ಪರಿಹಾರ ಒದಗಿಸಬೇಕೆಂದು ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೋವಿಡ್‌ ಮೊದಲ ಅಲೆಯಲ್ಲಿ ಯಾವುದೇ ಸಹಾಯ ಸಿಕ್ಕಿರಲಿಲ್ಲ. 2ನೇ ಅಲೆಯ ಸಂದರ್ಭದಲ್ಲಿ ಅಸಂಘಟಿತ ವಲಯದ ಬಿಪಿಎಲ್‌ ಕಾರ್ಡ್‌ದಾರರಿಗೆ ₹ 2,000 ಪರಿಹಾರಧನ ಘೋಷಣೆಯಾಗಿದೆ. ಹೀಗಾಗಿ ಸಂಘವು ಇಲ್ಲಿಯವರೆಗೆ 350 ಬಿಪಿಎಲ್‌ ಕುಟುಂಬದವರಿಗೆ ಉಚಿತವಾಗಿ ಉದ್ಯೋಗ ದೃಢೀಕರಣ ಪತ್ರ ಮಾಡಿಸಿಕೊಟ್ಟಿದೆ.

‘ನಗರದಲ್ಲಿ ಅಂದಾಜು 1,000 ಚಿನ್ನ–ಬೆಳ್ಳಿ ಕೆಲಸಗಾರರು ಇದ್ದಾರೆ. ಜಿಲ್ಲಾ ವ್ಯಾಪ್ತಿಯೂ ಸೇರಿದರೆ 2,000 ಮಂದಿ ಇರಬಹುದು. ಇವರಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದವರು 600–800 ಮಂದಿ. ಅವರಲ್ಲಿ ಇಲ್ಲಿಯವರೆಗೆ 350 ಮಂದಿಯಷ್ಟೇ ಸಂಘದ ಬಳಿ ಬಂದು ಉದ್ಯೋಗ ದೃಢೀಕರಣ ಪತ್ರ ಮಾಡಿಸಿಕೊಂಡಿದ್ದಾರೆ. ಜುಲೈ 31ರವರೆಗೆ ಸಮಯವಿದ್ದು ಉಳಿದವರೂ ಸಂಘವನ್ನು ಸಂಪರ್ಕಿಸಿ ಈ ಸೌಲಭ್ಯ ಪಡೆಯಬಹುದು. ನೋಂದಣಿ ಮಾಡಿಸಿಕೊಂಡರೆ ಸರ್ಕಾರದಿಂದ ಸ್ಮಾರ್ಟ್‌ ಕಾರ್ಡ್‌ ಬರಲಿದೆ. ನಂತರ ಸರ್ಕಾರದ ಯಾವುದೇ ಸೌಲಭ್ಯ ಘೋಷಣೆಯಾದರೂ ಸುಲಭವಾಗಿ ಪಡೆಯಬಹುದು. ಹೀಗಾಗಿ ಸಮುದಾಯದವರು ನಿರ್ಲಕ್ಷ್ಯ ಮಾಡದೇ ತಕ್ಷಣ ಉದ್ಯೋಗ ದೃಢೀಕರಣ ಪತ್ರ ಪಡೆಯಬೇಕು’ ಎಂದು ಸಂಘದ ಅಧ್ಯಕ್ಷ ಜಗನ್ನಾಥ್‌ ವೆರ್ಣೇಕರ್‌ ಮನವಿ ಮಾಡಿದ್ದಾರೆ.

‘ಬ್ರ್ಯಾಂಡೆಡ್‌ ಚಿನ್ನ–ಬೆಳ್ಳಿ ಅಂಗಡಿಗಳ ಸಂಖ್ಯೆ ಹೆಚ್ಚಳವಾದ ನಂತರ ಪಾರಂಪರಿಕ ಅಕ್ಕಸಾಲಿಗರ ಉದ್ಯೋಗಕ್ಕೆ ಕುತ್ತು ಬಂದಿದೆ. ಅವರಿಗೆ ಬೇರೆ ಕೆಲಸಗಳೂ ಗೊತ್ತಿಲ್ಲ. ಈಗ ಘೋಷಿಸಿರುವ ₹ 2,000 ಪರಿಹಾರ ಯಾತಕ್ಕೂ ಸಾಲದು. ಪರಿಹಾರಧನದ ಮೊತ್ತ ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ವಲಯದವರ ನೋಂದಣಿಯಾಗಿರುವುದು ತುಂಬಾ ಕಡಿಮೆ. 11 ವರ್ಗಗಳು ಸೇರಿ 6,000–7,000ದಷ್ಟು ನೋಂದಣಿಯಷ್ಟೇ ಇವೆ. ಈಗ ಕೋವಿಡ್ ಸಂಕಷ್ಟ ಪರಿಹಾರಧನ ಘೋಷಣೆಯಾದ ನಂತರ ಎಲ್ಲರೂ ನೇರವಾಗಿ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಉದ್ಯೋಗ ನೋಂದಣಿ ದೃಢೀಕರಣ ಪತ್ರ ಮಾಡಿಸಿಕೊಂಡವರು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಹಾಕಬಹುದು. ಜುಲೈ 31ರವರೆಗೆ ಸಮಯವಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಅಸಂಘಟಿತ ವಲಯದ ಎಲ್ಲ ವರ್ಗಗಳಿಂದ 27,000 ಅರ್ಜಿಗಳು ಬಂದಿವೆ. ಅಕ್ಕಸಾಲಿಗರ ಸಂಘದ 150ರಷ್ಟು ಉದ್ಯೋಗ ದೃಢೀಕರಣ ಪತ್ರಗಳನ್ನು ನಮ್ಮ ಇಲಾಖೆಯ ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್‌ ತಿಳಿಸಿದ್ದಾರೆ.

ಕೋಟ್‌...

ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರಧನ ಹೆಚ್ಚಿಸಬೇಕೆಂದು ಇನ್ನೂ ಯಾರಿಂದಲೂ ಮನವಿ ಬಂದಿಲ್ಲ. ಬಂದರೆ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ.
– ಇಬ್ರಾಹಿಂ ಸಾಬ್‌, ಜಿಲ್ಲಾ ಕಾರ್ಮಿಕ ಅಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.