ಬುಧವಾರ, ಮೇ 18, 2022
23 °C
ಕಿಡಿಗೇಡಿಗಳಿಂದ ಭವನದ ಕಿಟಕಿ, ಬಾಗಿಲುಗಳು ನಾಶ

ಅವ್ಯವಸ್ಥೆಯ ಆಗರ ಸ್ತ್ರೀ ಶಕ್ತಿ ಭವನ

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಸ್ತ್ರೀ ಶಕ್ತಿ ಸಂಘದವರ ಬಳಕೆಗಾಗಿ ಪಟ್ಟಣದಲ್ಲಿ ನಿರ್ಮಿಸಿದ್ದ ಸ್ತ್ರೀ ಶಕ್ತಿ ಭವನ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ 2011-12ನೇ ಸಾಲಿನಲ್ಲಿ ಪಟ್ಟಣದ ಸಂತೇ ಮೈದಾನದ ಪಕ್ಕದಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸಮೀಪ ₹ 26 ಲಕ್ಷ ವೆಚ್ಚದಲ್ಲಿ ಸ್ತ್ರೀ ಶಕ್ತಿ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದಿದ್ದರಿಂದ ಭವನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರ ಜಾಗದ ಕೊರತೆಯಿಂದಾಗಿ ಇಲಾಖೆಯ ಕಚೇರಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ನಿರ್ವಹಣೆ ಕೊರತೆಯಿಂದಾಗಿ ಕಟ್ಟಡವು ಹಾಳಾಗುತ್ತಿದೆ.

ಪಟ್ಟಣದ ಕೆಲವು ಕಿಡಿಗೇಡಿಗಳು ಈ ಭವನದ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ. ಹಾಗೆಯೇ ಭವನದ ಸುತ್ತ ಯಥೇಚ್ಛ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಭವನದ ಆವರಣದಲ್ಲಿ ಹಂದಿ ಸತ್ತು ಬಿದ್ದು ದುರ್ವಾಸನೆ ಹರಡಿದೆ. ಈ ಭಾಗದಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾದರೆ ಕಿಡಿಗೇಡಿಗಳ ಗುಂಪು ಇಲ್ಲಿ ಸೇರಿಕೊಂಡು ಮದ್ಯಪಾನ ಮಾಡುತ್ತಾರೆ ಎಂದು ಪುರಸಭೆ ಸದಸ್ಯ ಜಿ. ನಿಂಗಪ್ಪ ದೂರಿದ್ದಾರೆ.

ಭವನವು ಸುಣ್ಣ ಬಣ್ಣವನ್ನು ಕಂಡು 9 ವರ್ಷಗಳಾಗಿವೆ. ಭವನದ ಮುಂದೆ ಇರುವ ಕಬ್ಬಿಣದ ಗೇಟ್ ಅನ್ನೂ ಹಾಳು ಮಾಡಲಾಗಿದೆ. ಹೀಗೇ ಬಿಟ್ಟರೆ ಭವನ ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

‘ಸ್ತ್ರೀ ಶಕ್ತಿ ಒಕ್ಕೂಟದವರು ಭವನದ ನಿರ್ವಹಣೆ ಮಾಡಬೇಕಾಗಿತ್ತು. ಕೊರೊನಾ ಕಾರಣ ಎರಡು ವರ್ಷಗಳಿಂದ ಯಾವ ಸಭೆಯನ್ನೂ ನಡೆಸಿಲ್ಲ. ಕಿಡಿಗೇಡಿಗಳು ಭವನದ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಹಾಗೆಯೇ ಬಾಗಿಲುಗಳನ್ನು ಮುರಿದು ಹಾಕಿದ್ದಾರೆ. ಕಾಂಪೌಂಡ್ ಸಣ್ಣದಾಗಿದ್ದು, ಅದನ್ನು ಹಾರಿ ಬಂದು ಕಿಡಿಗೇಡಿಗಳು ಅವಾಂತರ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೂ ದೂರನ್ನು ನೀಡಲಾಗಿತ್ತು. ಈಗ ಕಾಪೌಂಡ್ ಗೋಡೆಯನ್ನು ಎತ್ತರಗೊಳಿಸಿ, ಭದ್ರವಾದ ಗೇಟ್ ಹಾಕಿ, ದುರಸ್ತಿ ಮಾಡುವ ಸಲುವಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಇಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲಾಗುವುದು’ ಎಂದು ಸಿಡಿಪಿಒ ಸದಾನಂದ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.