ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಮುಷ್ಕರ

ಜನಸಾಮಾನ್ಯರ ಹಣ ಲೂಟಿ ಮಾಡಲು ಷಡ್ಯಂತ್ರ: ಪ್ರತಿಭಟನಕಾರರ ಆರೋಪ
Last Updated 16 ಮಾರ್ಚ್ 2021, 4:35 IST
ಅಕ್ಷರ ಗಾತ್ರ

ದಾವಣಗೆರೆ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ (ಯುಎಫ್‌ಬಿಯು) ಸೋಮವಾರ ಮಂಡಿಪೇಟೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಮುಂಭಾಗ ಪ್ರತಿಭಟನ ಮತಪ್ರದರ್ಶನ ನಡೆಯಿತು. ಮುಷ್ಕರ ಮಾರ್ಚ್‌ 16ರಂದು ಮುಂದುವರಿಯಲಿದೆ.

ಐಡಿಬಿಐ ಬ್ಯಾಂಕ್‌ ಹಾಗೂ ಸಾರ್ವಜನಿಕ ವಲಯದ 2 ಬ್ಯಾಂಕ್‌ಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿ ಸರ್ಕಾರಿ ಬಂಡವಾಳ ಹಿಂತೆಗೆತ, ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ಶೇ 74ರಷ್ಟು ವಿದೇಶಿ ಬಂಡವಾಳ ಹೂಡಿಕೆ‌ಗೆ ಅವಕಾಶ, ಸಾರ್ವಜನಿಕ ಕ್ಷೇತ್ರಗಳ ಮಾರಾಟ ಮುಂತಾದ ವಿಚಾರಗಳನ್ನು ಫೆಬ್ರುವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಮಂಡಿಸಿದ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಜನಸಾಮಾನ್ಯರ ₹ 147 ಲಕ್ಷ ಕೋಟಿ ಠವಣಿ ಹಣ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿದೆ. ಅವುಗಳನ್ನು ಲೂಟಿ ಮಾಡುವುದಕ್ಕಾಗಿಯೇ ಖಾಸಗಿ ಬಂಡವಾಳಶಾಹಿಗಳಿಗೆ ಒಪ್ಪಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ದೇಶದ 6.38 ಲಕ್ಷ ಹಳ್ಳಿಗಳಲ್ಲಿ 35 ಸಾವಿರ ಹಳ್ಳಿಗಳಿಗೆ ಅಷ್ಟೇ ಬ್ಯಾಂಕ್‌ ತಲುಪಿದೆ. ಉಳಿದೆ ಬ್ಯಾಂಕ್‌ ಶಾಖೆಗಳು ಇನ್ನೂ ಬಂದಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬಲಪಡಿಸಬೇಕಿತ್ತು. ಆದರೆ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಈ ಕ್ರಮದಿಂದ ಜನಸಾಮಾನ್ಯರ ಠೇವಣಿ ಹಣದ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ. ಉದ್ಯೋಗವಕಾಶಕ್ಕೆ ಕತ್ತರಿ ಬೀಳುತ್ತದೆ. ಮೀಸಲಾತಿಯಂಥ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ತೊಂದರೆಯಾಗುತ್ತದೆ. ವಿಲೀನ ಹೆಸರಲ್ಲಿ ಬ್ಯಾಂಕ್‌ ಶಾಖೆಗಳನ್ನು ಮುಚ್ಚುವ ಕ್ರಮವು ಜನ ಸಾಮಾನ್ಯರನ್ನು ಬ್ಯಾಂಕಿಂಗ್‌ ಸೇವೆಯಿಂದ ಹೊರಗಿಡುವ ಪ್ರಯತ್ನವಾಗಿದೆ. ಇದು ಜನವಿರೋಧಿ ಮತ್ತು ದೇಶ ವಿರೋಧಿ ಕೃತ್ಯ ಎಂದು ಆರೋಪಿಸಿದರು.

ಬ್ಯಾಂಕ್ ಬಲಗೊಳಿಸಲು, ಸಾಲ ವಸೂಲಾತಿಗೆ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. 11ನೇ ದ್ವಿಪಕ್ಷೀಯ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು. ಬ್ಯಾಂಕ್‌ ರಾಷ್ಟ್ರೀಕರಣಕ್ಕಿಂತ ಮೊದಲು 550 ಖಾಸಗಿ ಬ್ಯಾಂಕ್‌ಗಳು, ಬಳಿಕ 38 ಖಾಸಗಿ ಬ್ಯಾಂಕ್‌ಗಳು ಮುಳಿಗಿವೆ. ಇದು ಪಾಠವಾಗಬೇಕು ಎಂದು ತಿಳಿಸಿದರು.

ಯುಎಫ್‌ಬಿಯು ಜಿಲ್ಲಾ ಸಂಚಾಲಕ ಕೆ.ಎನ್‌. ಗಿರಿರಾಜ್‌, ಸಹ ಸಂಚಾಲಕ ಕೆ. ವಿಶ್ವನಾಥ ಬಿಲ್ಲವ, ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಬಿ. ಆನಂದಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ಎಚ್‌.ಜಿ. ಸುರೇಶ್‌, ಎಚ್‌.ಎಸ್‌. ತಿಪ್ಪೇಸ್ವಾಮಿ, ಕೆ. ಶಶಿಶೇಖರ್‌, ಎಂ.ಎಸ್‌. ವಾಗೀಶ್‌, ಎಂ.ಪಿ. ಕಿರಣ ಕುಮಾರ್‌, ನಾಗವೇಣಿ ನರೇಂದ್ರಕುಮಾರ್‌, ಡಿ.ಎ. ಸಾಕಮ್ಮ, ಶ್ವೇತಾ ಬಿ.ಎನ್‌., ದೀಪಾ ಅವರೂ ಇದ್ದರು.

ಗ್ರಾಮೀಣ ಬ್ಯಾಂಕ್‌ ನೌಕರರ ಮತ್ತು ಅಧಿಕಾರಿಗಳ ಸಂಘದ ಕೆ.ಎಚ್‌. ದಪ್ಪೇರ್‌, ನಾಗರಾಜ್‌ ಎಸ್‌., ಟಿ. ಸುಭಾಶ್ಚಂದ್ರ, ನಾಗೇಶ್ವರಿ ಆರ್‌. ನಾಯರಿ, ಎ.ವಿರೂಪಾಕ್ಷಯ್ಯ, ಮೊಹಮ್ಮದ್‌ ರಫಿ, ಬ್ಯಾಂಕ್‌ ನಿವೃತ್ತರ ಒಕ್ಕೂಟದ ವಿ. ನಂಜುಂಡೇಶ್ವರ, ಅಜಿತ್‌ ಕುಮಾರ್‌, ಎಚ್‌. ಸುಗೀರಪ್ಪ, ಜಿ.ಬಿ. ಶಿವಕುಮಾರ್‌, ಜೆ.ಒ. ಮಹೇಶ್ವರಪ್ಪ, ಗುರುರಾಜ್‌ ಭಾಗವತ ವರೂ ಬೆಂಬಲಿಸಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT