ದುಶ್ಚಟ ನಿವಾರಣೆಗೆ ರಸ್ತೆಗಿಳಿದ ವಿದ್ಯಾರ್ಥಿಗಳು

7
ಬಾರ್‌ ಬೇಡ ನೀರು ಕೊಡಿ, ಗುಟ್ಕಾ ಬೇಡ ಶಿಕ್ಷಣ ನೀಡಿ: ಮಕ್ಕಳ ಆಗ್ರಹ

ದುಶ್ಚಟ ನಿವಾರಣೆಗೆ ರಸ್ತೆಗಿಳಿದ ವಿದ್ಯಾರ್ಥಿಗಳು

Published:
Updated:
Deccan Herald

ದಾವಣಗೆರೆ: ‘ಗುಟ್ಕಾ ತಿಂದೋನ್‌ ಗೊಟಕ್‌ ಅಂದ; ಸಾರಾಯಿ ಕುಡಿದೋನ್‌ ಸತ್ತೋದ. ನಮಗೆ ಬಾರ್‌ ಬೇಡ ನೀರು ಕೊಡಿ. ಗುಟ್ಕಾ ಬೇಡ ಶಿಕ್ಷಣ ಬೇಕು...’

–ಹೀಗೆ ನಗರದ ಜಯದೇವ ವೃತ್ತದಲ್ಲಿ ಶನಿವಾರ ಘೋಷಣೆ ಕೂಗಿದ್ದು ವಿದ್ಯಾರ್ಥಿಗಳು. ಡಿಡಿಟಿ (ಡ್ರಿಂಕ್ಸ್‌, ಡ್ರಕ್ಸ್‌, ಟೊಬ್ಯಾಕೊ) ಮುಕ್ತ ದಾವಣಗೆರೆ ನಿರ್ಮಾಣಕ್ಕಾಗಿ ಕರುಣಾ ಜೀವಕಲ್ಯಾಣ ಟ್ರಸ್ಟ್‌ ಆಯೋಜಿಸಿದ್ದ ಜಾಥಾದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳು ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.

‘ಮಕ್ಕಳಿಗೆ ಆಟ, ಪಾಠಗಳನ್ನು ಕಲಿಸಿ, ನಿಮ್ಮ ದುಶ್ಚಟಗಳನ್ನಲ್ಲ’. ‘ಗುಟ್ಕಾ, ಮದ್ಯ ಬೇಡವೇ ಬೇಡ. ಅನ್ನ ನೀರು ಬೇಕೇ ಬೇಕು’. ‘ಬೀಡಿ ಬಿಡಿ; ಆರೋಗ್ಯದ ಹಾದಿ ಹಿಡಿ’ ಎಂದು ಮಕ್ಕಳು ಘೋಷಣೆ ಕೂಗಿದರು.

ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ‘ಅಕ್ಟೋಬರ್ 2ರವರೆಗೆ ಜಿಲ್ಲೆಯ 2,500 ಶಾಲೆಗಳಲ್ಲಿ ಜಾಗೃತಿ ಶಿಬಿರ ಆಯೋಜಿಸಲಾಗುವುದು. ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಗುವುದು. ಮಹಿಳೆಯರು, ಮಠಾಧೀಶರು ಮತ್ತು ಮಾಧ್ಯಮಗಳು ಕೂಡ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು.

ದಾವಣಗೆರೆಯನ್ನು ‘ಡಿಡಿಟಿ’ ಮುಕ್ತಗೊಳಿಸಲು ಮೂರು ಹಂತಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮಕ್ಕಳಿಗೆ ದುಶ್ಚಟಗಳ ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗುವುದು. ಮಕ್ಕಳ ಮೂಲಕ ಅವರ ಪಾಲಕರಲ್ಲಿ ಅರಿವು ಮೂಡಿಸಲಾಗುವುದು. ಪೋಷಕರು ದುಶ್ಚಟಗಳನ್ನು ಮಾಡದಂತೆ ಮಕ್ಕಳ ಮೂಲಕವೇ ತಡೆ ಒಡ್ಡಲಾಗುವುದು. ಎರಡನೇ ಹಂತದಲ್ಲಿ ಮಠಾಧೀಶರ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳೆಯರಲ್ಲಿ ಅರಿವು ಮೂಡಿಸಲಾಗುವುದು. ಮೂರನೇ ಹಂತದಲ್ಲಿ ಹಳ್ಳಿಗಳಿಗೆ ತೆರಳಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ‘ಗುಟ್ಕಾ ಸೇವನೆ ಫ್ಯಾಷನ್‌ ಎಂದು ಭಾವಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳೂ ದುಶ್ಚಟಗಳಿಗೆ ದಾಸರಾಗುತ್ತಿದ್ದರೆ, ಯುವಕರು ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ, ತಕ್ಷಣ ಎಚ್ಚೆತ್ತುಕೊಂಡು ದುಶ್ಚಟಗಳ ನಿವಾರಣೆಗೆ ಶ್ರಮಿಸಬೇಕು. ಶಾಲಾ–ಕಾಲೇಜು ಪಠ್ಯಗಳ ಮೂಲಕವೂ ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ಮಕ್ಕಳು, ದುಶ್ಚಟಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಯರಗುಂಟೆ ಪರಮೇಶ್ವರ ಸ್ವಾಮೀಜಿ, ಶಿರಮಗೊಂಡನಹಳ್ಳಿ ಶಿವಾನಂದ ಗುರೂಜಿ, ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್‌.ವಿ. ವಾಮದೇವಪ್ಪ, ಪ್ರೀತಿ ರವಿಕುಮಾರ್, ವೀಣಾ, ಆವರಗೆರೆ ಚಂದ್ರು ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !