ಭಾನುವಾರ, ಸೆಪ್ಟೆಂಬರ್ 26, 2021
27 °C
ಗಣ್ಯರ ಮೆಚ್ಚುಗೆಗೆ ಪಾತ್ರವಾದ ಬಿಐಇಟಿಯಲ್ಲಿ ಪ್ರದರ್ಶನಗೊಂಡ 60 ಪ್ರೋಜೆಕ್ಟರ್‌ಗಳು

ದಾವಣಗೆರೆ: ನವೀನ ಆವಿಷ್ಕಾರಗಳ ಪ್ರದರ್ಶಿಸಿದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕುರುಡು ಮತ್ತು ಕಿವುಡು ಸಮಸ್ಯೆ ಇರುವವರಿಗೆ ಕಂಪಿಸುವ ಕೋಲು, ಟ್ರಾಫಿಕ್ ಸಿಗ್ನಲ್ ಪೂರ್ವ ತುರ್ತು ವಾಹನಗಳು, ಡ್ರೈ ರನ್ನಿಂಗ್ ವ್ಯಾನ್ ಟೈಪ್‍ ವ್ಯಾಕ್ಯೂಲ್ ಪಂಪ್‍, ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್‍ಕಿನ್‍, ಖಿನ್ನತೆ ಪರಿಹರಿಸುವ ಯಂತ್ರ, ಚರಂಡಿ ನೀರನ್ನು ಗೊಬ್ಬರವಾಗಿಸುವ ಯಂತ್ರ..

ಬಿಐಇಟಿ ಸಂಸ್ಥೆಯ ಬಿಐಇಟಿ ಆವರಣದ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ‘ಟೆಕ್ನೋವೇಷನ್-21’ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ನವೀನ ಆವಿಷ್ಕಾರಗಳು ಇವು.

ಹುಣಸೆ ಹಣ್ಣಿನ ಬೀಜಗಳನ್ನು ಉಪಯುಕ್ತ ಉತ್ಪನ್ನಗಳಾಗಿ ಮೌಲ್ಯವರ್ಧನೆಯೊಂದಿಗೆ ಬಳಸುವ ಯೋಜನೆ, ಸ್ವಯಂ ಚಾಲಿತ ಪಡಿತರ ವಿತರಕ ಯಂತ್ರ, ರೋಬೊಟ್‌ ಮೂಲಕ ಸೀಗಡಿ ಮೀನುಗಾರಿಕೆ ಹೀಗೆ ಒಟ್ಟು 60 ಆವಿಷ್ಕಾರಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ವಿವರ ನೀಡಿದರು. ಅತಿಥಿಗಳು, ತಜ್ಞರು ಅವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ವಿದ್ಯಾರ್ಥಿಗಳ ಕಣ್ಣಲ್ಲಿ ಸಂಭ್ರಮದ ಹೊಳಪು ಸೂಸಿತು.

ಉನ್ನತ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕ ಡಾ. ಭಾಗ್ಯವಾನ ಮುದಿಗೌಡ್ರ, ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಎಸ್.ಹೊಳಿ ಟೆಕ್ನೋವೇಷನ್‍ಗೆ ಚಾಲನೆ ನೀಡಿದರು.

ಬಿಐಇಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಬಿ.ಅರವಿಂದ, ‘ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ನಾಲ್ಕು ವರ್ಷದ ಶಿಕ್ಷಣದಲ್ಲಿ ಅನೇಕ ವಿಷಯ ಅಧ್ಯಯನ ಮಾಡುತ್ತಾರೆ. ಅಂತಿಮವಾಗಿ ಈ ಎಲ್ಲಾ ವಿಷಯಗಳ ಜ್ಞಾನವನ್ನು ವಿವಿಧ ಯೋಜನೆಗಳನ್ನು ರೂಪಿಸಿ ನವೀನ ಆವಿಷ್ಕಾರಗಳಿಗೆ ಕಾರಣರಾಗಿದ್ದಾರೆ. ಬಿಐಇಟಿ ಅಂತಿಮ ವರ್ಷದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕೊರೊನಾ ಸಂಕಷ್ಟದ ನಡುವೆಯೂ ಅನೇಕ ನವೀನ ಹಾಗೂ ಸಮಾಜಕ್ಕೆ ಉಪಯುಕ್ತವಾದ ಯೋಜನೆಗಳನ್ನು ರೂಪಿಸಿ ಸಮಾಜಕ್ಕೆ ಕೊಡುವೆಯಾಗಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಶ್ಲಾಘಿಸಿದರು.

ಪ್ರಸ್ತುತ ವರ್ಷ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ಪ್ರಸ್ತಾವನೆಗಳಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ)ಯು 24 ಪ್ರಸ್ತಾವನೆ ಅತ್ಯುತ್ತಮ ಎಂದು ಪರಿಗಣಿಸಿ ಹಣಕಾಸು ನೆರವು ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರದ ನ್ಯೂ ಏಜ್ ಇನ್‍ಕ್ಯುಬೇಷನ್ ನೆಟ್‌ವರ್ಕ್ 10 ಯೋಜನೆ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 20 ಅತ್ಯುತ್ತಮ ಯೋಜನೆಗಳು ಎಂದು ಗುರುತಿಸಿ ಹಣಕಾಸಿನ ನೆರವು ನೀಡಿವೆ. ಜೊತೆಗೆ ಉತ್ತಮ 15 ಯೋಜನೆಗಳಿಗೆ ಬಿಐಇಟಿಯಿಂದ ಹಣಕಾಸಿ ನೆರವು ಸೇರಿ ವಿದ್ಯಾರ್ಥಿಗಳಿಗೆ ಒಟ್ಟು ₹ 30 ಲಕ್ಷ  ಆರ್ಥಿಕ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬಿಐಇಟಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಸಾರ್ವಜನಿಕ ಸಂಪರ್ಕ ಡೀನ್ ಡಾ.ಜಿ.ಪಿ. ದೇಸಾಯಿ, ಭರತ್ ಅದ್ವಾನಿ, ಡಾ.ಪೂರ್ಣಿಮಾ ಅವರೂ ಇದ್ದರು.

ಪ್ರಾಣಿ ಬಂದರೆ ಎಚ್ಚರಿಕೆ ನೀಡುವ ಯಂತ್ರ
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಇಂಟರ್ನೆಟ್ ಆಫ್‌ ಥಿಂಗ್ಸ್ ಮೂಲಕ ಕೃಷಿ ಭೂಮಿ ರಕ್ಷಣೆಗೆ ಕಾಡು ಪ್ರಾಣಿ ಪತ್ತೆ ಮತ್ತು ಎಚ್ಚರಿಸುವ ವ್ಯವಸ್ಥೆ ಕುರಿತು ತಯಾರಿಸಿದ ಪ್ರಾಜೆಕ್ಟ್ ಗಮನ ಸೆಳೆಯಿತು.

ಮಲೆನಾಡು ಭಾಗದಲ್ಲಿ ಕೃಷಿ ಭೂಮಿಗೆ ಆನೆ ದಾಳಿ ಮತ್ತು ಕಾಡು ಪ್ರಾಣಿಗಳ ದಾಳಿಯಿಂದ ಬೆಳೆನಾಶ ಮತ್ತು ಜೀವಹಾನಿ ತಪ್ಪಿಸಲು ಈ ತಂತ್ರಜ್ಞಾನದಿಂದ ಸಾಧ್ಯ ಎಂದು ವಿದ್ಯಾರ್ಥಿಗಳಾದ ಅನನ್ಯ ಮಲಾಡ್ಕರ್, ಅರವಿಂದ್ ಚೌಧರಿ, ಸಂದೀಪ್ ಸದಾಶಿವ ನೇರ್ಲಿಕರ್, ಪಿ.ಎಸ್.ಮಹೇಶ್ ವಿವರಿಸಿದರು.

ಬೆಳೆಹಾನಿ ಮತ್ತು ಜೀವಹಾನಿ ಮಾಡುವ ಕಾಡು ಪ್ರಾಣಿಗಳನ್ನು ಗುರುತಿಸಿ, ಛಾಯಾಚಿತ್ರ ತೆಗೆದು ಕೃಷಿ ಭೂಮಿಯ ಮಾಲೀಕರಿಗೆ ಈ-ಮೇಲ್ ರವಾನಿಸುತ್ತದೆ. ಕಾಡು ಪ್ರಾಣಿಯ ಇರುವಿಕೆಯ ಬಗ್ಗೆ ಜೋರಾಗಿ ಅಲಾರಮ್‌ ಸದ್ದು ಮೊಳಗಿಸುತ್ತದೆ. ಈ ಯೋಜನೆಗೆ ರಾಸ್ಪ್ ಬೆರಿ ಪೈ ಎಂಬ ಕ್ರೆಡಿಟ್ ಕಾರ್ಡ್ ಗಾತ್ರದ ಚಿಕ್ಕ ಗಣಕಯಂತ್ರ ಬಳಸಲಾಗಿದೆ. ಕಾಡು ಪ್ರಾಣಿಗಳ ಚಟುವಟಿಕೆಯನ್ನು ಗಮನಿಸಲು ಪ್ಯಾಸಿವ್ ಇನ್ಫ್ರಾರೆಡ್ ಸಂವೇದಕ ಉಪಯೋಗಿಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.