ಬುಧವಾರ, ಜೂನ್ 29, 2022
26 °C

ಹುಡುಗುಬುದ್ಧಿಯಲ್ಲಿ ಎಡವಿದ್ದಾರೆ: ನಬೀಸಾಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜಾತ್ರೆಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದಾಗ ಒಡೆದು ಹಾಕಿದರು. ದಾರಿ ಯಾವುದು ಬದುಕಲು ಎಂದು ಆಗ ಗೊತ್ತಾಗಿರಲಿಲ್ಲ. ರಾಜ್ಯದ ಎಲ್ಲ ಜನರು ನನ್ನ ಬೆಂಬಲಕ್ಕೆ ನಿಂತರು. ಹುಡುಗುಬುದ್ಧಿಯಲ್ಲಿ ಎಡವಿಬಿದ್ದಿದ್ದರಿಂದ ಆದ ಘಟನೆ ಬಗ್ಗೆ ಚಿಂತಿಸುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಈ ಮುದುಕನ ಮೇಲೆ ಇರುವವರೆಗೆ ಯಾರೂ ಏನೂ ಮಾಡಲಾರರು..’

ಇದು ಧಾರವಾಡದಲ್ಲಿ ಕೋಮುವಾದಿಗಳಿಂದ ತೊಂದರೆಗೀಡಾಗಿದ್ದ ಕಲ್ಲಂಗಡಿ ವ್ಯಾಪಾರಿ ನಬೀಸಾಬ್‌ ಕಿಲ್ಲೇದಾರ್‌ ಮೇ ಸಾಹಿತ್ಯ ಮೇಳದಲ್ಲಿ ಹೇಳಿದ ಅನುಭವ ಕಥನ.

‘ಎಲ್ಲರಿಗೂ ಶಾಂತಿ ನೀಡಿದ ದೇವರು ನನಗೂ ಶಾಂತಿ ನೀಡದಿರುವನೇ? ಕಳಬೇಡ ಕೊಲಬೇಡ ಎಂಬ ಬಸವಣ್ಣನ ತತ್ವದಂತೆ ಯಾರಿಗೂ ತೊಂದರೆ ನೀಡದೇ ಬದುಕಿದ್ದೇನೆ. ನನಗೆ ಯಾರೂ ಇಲ್ಲ ಎಂಬ ಭಾವನೆ ಬಂದಾಗ ನಾವಿದ್ದೇವೆ ಎಂದು ನೀವೆಲ್ಲ ಕೈಜೋಡಿಸಿದ್ದೀರಿ. ಇದಕ್ಕಿಂತ ದೊಡ್ಡದು ನನಗೇನು ಬೇಕು’ ಎಂದು ಹೇಳಿದರು.

ಮದುವಯಾದ ದಿನವೇ ಸಂಸಾರ ಮಾಡಲಾರದ ಗಂಡ ಎಂದು ತಿಳಿದು ಅನುಭವಿಸಿದ ನೋವು. ಆ ಮನೆಯವರು ನೀಡಿದ ಹಿಂಸೆ. ಬದುಕಿ ತವರು ಮನೆ ಸೇರಿದ ಮೇಲೆ ಎರಡನೇ ಮದುವೆಯಾದರೆ ಅಲ್ಲಿ ಆತ ಮೊದಲ ಪತ್ನಿಯನ್ನು ಕೊಂದಿರುವುದು ಗೊತ್ತಾಗಿ ಉಂಟಾದ ಸಂಕಟ. ತವರು ಮನೆಯಲ್ಲಿ ತಮ್ಮ ಪತ್ನಿಯ ಸಾವು. ಅದರಿಂದ ನೊಂದು ತಮ್ಮ ಮತ್ತು ತಾಯಿ ಆತ್ಮಹತ್ಯೆ ಮಾಡಿಕೊಂಡಾಗ ಸಮಾಜ ತುಚ್ಛವಾಗಿ ಕಂಡ ರೀತಿ. ಮಹಿಳಾ ಸಮಾಜ ಕರ್ನಾಟಕ ತುಂಬಿದ ಸ್ಥೈರ್ಯಗಳನ್ನು ಮಮತಾ ಯಜಮಾನ್‌ ಬಿಚ್ಚಿಟ್ಟರು.

‘ಹೋರಾಟಕ್ಕೆ ತಮ್ಮ ವೈಯಕ್ತಿಕ ನೋವಿನಿಂದ ಕೆಲವರು, ಸಮುದಾಯದ ನೋವಿನಿಂದ ಕೆಲವರು, ತತ್ವ ಸಿದ್ಧಾಂತಕ್ಕಾಗಿ ಕೆಲವರು ಬರುತ್ತಾರೆ. ಸೌಹಾರ್ದ ಕುಟುಂಬದಿಂದ ಬಂದ ನಾನು ತತ್ವ ಸಿದ್ಧಾಂತಕ್ಕಾಗಿ ಹೋರಾಟಕ್ಕೆ ಬಂದೆ. ಬಾಲ್ಯವನ್ನು ನಗುನಗುತ್ತಾ ಕಳೆದಿದ್ದ ನಾನು ದಾವಣಗೆರೆ ಜಿಎಂಐಟಿಯಲ್ಲಿ ಎಂಜಿನಿಯರಿಂಗ್‌ ಓದುತ್ತಿರುವಾಗ ರಾಜಕೀಯದ ತಿಳಿವಳಿಕೆ ಬಂತು. ಆಂಧ್ರಪ್ರದೇಶದ ವಿದ್ಯಾರ್ಥಿಗಳ ಮೂಲಕ ಭೂಮಾಲೀಕರ, ಪ್ರಭುತ್ವದ, ಪೊಲೀಸರ ದೌರ್ಜನ್ಯಗಳು, ರೈತರ, ವಿದ್ಯಾರ್ಥಿಗಳ ಹೋರಾಟದ ಅರಿವು ಬಂತು. ಕೈಗಾ ಮೂವ್‌ಮೆಂಟ್‌ ಮೂಲಕ ಹೋರಾಟಕ್ಕೆ ಇಳಿದೆ. ಮಾವೋವಾದಿ ಪಾರ್ಟಿ ನನಗೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯುತ್ತಿರುವ ಕಪಟತನ, ಟೊಳ್ಳುತನವನ್ನೂ, ಹೋರಾಟವನ್ನೂ ಕಲಿಸಿತು’ ಎಂದು ನೂರ್‌ ಶ್ರೀಧರ್‌ ನೆನಪಿಸಿಕೊಂಡರು.

‘ನಮ್ಮ ಹೋರಾಟಗಳು ಸೋಲುತ್ತಿರುವುದು ನಮಗೆ ಪಾಠಗಳನ್ನು ಕಲಿಸಿದವು. ಜತೆಗೆ ನಾಯಕತ್ವ ವಹಿಸಿದವರ ವರ್ತನೆಯ ವಿರುದ್ಧವೂ ಹೋರಾಟ ಮಾಡಿದೆವು. ಈ ಎಲ್ಲ ಹೋರಾಟಗಳೊಂದಿಗೆಯೇ ನಮ್ಮ ಗುರಿ, ತತ್ವ ಸರಿ ಇದ್ದರೂ ದಾರಿ ಸರಿ ಇಲ್ಲ ಎಂಬ ಅರಿವೂ ಬಂತು. ಜಾತಿ ವ್ಯವಸ್ಥೆಯ ಭಾರತದ ಸಮಾಜದಲ್ಲಿ ರಷ್ಯಾ, ಚೀನಾ ಮಾದರಿಯ ನಮ್ಮ ಹೋರಾಟ ಹೊಂದಿಕೆಯಾಗುತ್ತಿಲ್ಲ ಎಂಬುದು ಗೊತ್ತಾಯಿತು. ಹಾಗಾಗಿ ಹೊಸ ದಾರಿ ಕಂಡುಕೊಳ್ಳಬೇಕಿತ್ತು. ನಕ್ಸಲರಾಗಿದ್ದವರಿಗೆ ಹೊಸದಾರಿ ಕಂಡುಕೊಳ್ಳುವುದು ಸುಲಭವಲ್ಲ’ ಎಂದು ವಿವರಿಸಿದರು.

12ನೇ ಶತಮಾನದ ಬಸವಣ್ಣನಿಂದ ಅಂಬೇಡ್ಕರ್‌ವರೆಗೆ ನಡೆದ ಕ್ರಾಂತಿಗಳು ಉತ್ತಮ ಸಂವಿಧಾನ ರಚನೆಯಾಯಿತು. ಈಗ ಮತ್ತೆ ಪ್ರತಿಕ್ರಾಂತಿ ಜಯಗಳಿಸಿದೆ. ಪ್ರಾಮಾಣಿಕ ಶಕ್ತಿಗಳು ಒಂದಾಗುತ್ತಿಲ್ಲ. ಹಾಗಾಗಿ ಪ್ರತಿಕ್ರಾಂತಿ ಗೆದ್ದಿದೆ. ಮತ್ತೆ ನಾವು ಜನಕ್ರಾಂತಿ ಮೂಲಕ ಪ್ರತಿಕ್ರಾಂತಿಗೆ ಉತ್ತರ ನೀಡಬೇಕಿದೆ. ಸುಳ್ಳಿನ ಸಾಮ್ರಾಜ್ಯ ಪತನವಾಗಲಾಗಿದೆ. ಅದು ಅರಾಜಕತೆಗೆ ದಾರಿಯಾಗದೇ ಪರಿವರ್ತನೆ ಕಡೆಗೆ ಹೋಗಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು