ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಡಸ್ ಪ್ರಭಾವ: ಭತ್ತದ ಕಟಾವು ಮುಂದೂಡಿ

Last Updated 12 ಡಿಸೆಂಬರ್ 2022, 6:39 IST
ಅಕ್ಷರ ಗಾತ್ರ

ದಾವಣಗೆರೆ: ‘ಮ್ಯಾಂಡಸ್‌’ ಚಂಡಮಾರುತದ ಪ್ರಭಾವ ಜಿಲ್ಲೆಯಾದ್ಯಂತ ಭಾನುವಾರವೂ ಮುಂದುವರಿಯಿತು.

ಜಿಲ್ಲೆಯ ವಿವಿಧೆಡೆ ಶನಿವಾರ ದಿನವಿಡೀ ಸುರಿದ ಮಳೆ, ಭಾನುವಾರವೂ ಮುಂದುವರಿಯಿತು. ದಟ್ಟ ಮಂಜು, ನಿರಂತರ ಮಳೆಗೆ ಚಳಿಯ ಪ್ರಮಾಣ ಹೆಚ್ಚಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

‘ಮಳೆಯಿಂದಾಗಿ ಭತ್ತದ ಕಟಾವಿಗೆ ತೊಂದರೆಯಾಗಿದೆ. ಆದರೆ ಹಿಂಗಾರು ಬೆಳೆಗಳಾದ ಸೂರ್ಯಕಾಂತಿ, ಜೋಳಗಳಿಗೆ ಅನುಕೂಲವಾಗಿದೆ. ಭತ್ತದ ತೆನೆ ಕಾಳುಕಟ್ಟುವ ಹಂತದಲ್ಲಿದ್ದರೆ ಅಂತಹ ರೈತರು ಶಿಲೀಂದ್ರ ನಾಶಕವನ್ನು ಸಿಂಪಡಣೆ ಮಾಡಬೇಕು. ಸಿಂಪಡಣೆ ಮಾಡದೇ ಇದ್ದರೆ ಕಾಳು ಕಪ್ಪಾಗುವ ಸಂಭವ ಹೆಚ್ಚು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.

ಶೀತಗಾಳಿ, ಮಳೆಯ ಕಾರಣ ಜನರು ಮನೆಯಿಂದ ಹೊರಗೆ ಬರಲು ಹಿಂಜರಿದರು. ಭಾನುವಾರ ರಜೆಯ ದಿನ ಜನರು ಮನೆಯಲ್ಲಿಯೇ ಉಳಿಯಲು ಕಾರಣವಾಯಿತು. ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಜಗಳೂರು ತಾಲ್ಲೂಕುಗಳಲ್ಲಿ ಮಳೆಯಾಗಿದೆ.

ಎಲ್ಲೆಡೆ ಮಳೆ; ಕೃಷಿ ಚಟುವಟಿಕೆ ಸ್ಥಗಿತ

ಚನ್ನಗಿರಿ: ವಾಯುಭಾರ ಕುಸಿತದ ಕಾರಣಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಶನಿವಾರ ಸಾಧಾರಣ ಮಳೆಯಾಯಿತು. ಭಾನುವಾರ ಸಂಜೆ ಸುಮಾರು ಅರ್ಧ ಗಂಟೆಗಳ ಕಾಲ ಬಿರುಸಿನಿಂದ ಸುರಿಯಿತು. ಮಳೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಶನಿವಾರ ಇಡೀ ರಾತ್ರಿ ತಾಲ್ಲೂಕಿನಾದ್ಯಂತ ಜಿಟಿಜಿಟಿ ಮಳೆಯಾಗಿದೆ. ಅದೇ ರೀತಿ ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೂ ಎಡೆಬಿಡದೇ ಜಿಟಿಜಿಟಿ ಮಳೆ ಬಂದಿತು. ಮಳೆಯಿಂದ ಅಡಿಕೆ ಕೊಯ್ಲಿಗೆ, ಅಡಿಕೆ ಒಣಗಿಸಲು ಹಾಗೂ ಮೆಕ್ಕೆಜೋಳ ಬೆಳೆ ಕೊಯ್ಲಿಗೆ ಮಳೆ ಅಡ್ಡಿಯಾಗಿದೆ. ಜಿಟಿಜಿಟಿ ಮಳೆ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವಂತಾಗಿದೆ.

ಮಳೆಯ ಜತೆಗೆ ಚಳಿಯ ವಾತಾವರಣ ಇದ್ದು, ಚಳಿಯನ್ನು ತಡೆಯಲಾಗದೇ ಜನರು ಮನೆಗಳನ್ನು ಬಿಟ್ಟು ಹೊರಬರದಂತಾಗಿದೆ. ಹಾಗೆಯೇ ಮೂಲೆ ಸೇರಿದ್ದ ಕೊಡೆಗಳು ಮತ್ತೆ ಹೊರಕ್ಕೆ ಬರುವಂತಾಗಿದೆ. ಈ ತಿಂಗಳಲ್ಲಿ ಮಳೆಯಾಗಿರುವುದು ತಡವಾಗಿ ಬಿತ್ತನೆ ಮಾಡಿದ್ದ ಹಿಂಗಾರು ಬೆಳೆಗಳಿಗೆ ಸಹಾಯಕವಾಗಲಿದೆ. ಕೃಷಿ ಚಟುವಟಿಕೆಗಳ ಜತೆಗೆ ಕಟ್ಟಡ ಕಟ್ಟುವ ಕಾಮಗಾರಿಗಳು ಕೂಡಾ ಸಂಪೂರ್ಣ ಸ್ಥಗಿತಗೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT