ಮಂಗಳವಾರ, ನವೆಂಬರ್ 19, 2019
23 °C
ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಉದ್ಘಾಟಿಸಿದ ಸಂಸದ ದೇವೇಂದ್ರಪ್ಪ

ಮಡಿವಾಳ ಸಮಾಜ ಎಸ್‌ಸಿ ಕೆಟಗರಿಗೆ ಸೇರಿಸಲು ಬೆಂಬಲ

Published:
Updated:
Prajavani

ದಾವಣಗೆರೆ: ‘ಮಡಿವಾಳ ಸಮಾಜವನ್ನು ಎಸ್‌ಸಿ ಕೆಟಗರಿಗೆ ಸೇರಿಸಲು ನಿಮ್ಮ ಜತೆ ನಾನೂ ಧ್ವನಿಗೂಡಿಸುವೆ’ ಎಂದು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಹೇಳಿದರು.

ಜಿಲ್ಲಾ ಮಡಿವಾಳರ ಸಂಘದಿಂದ ತ್ರಿಶೂಲ್‌ ಕಲಾ ಭವನದಲ್ಲಿ ಭಾನುವಾರ ನಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬ ನಿಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಳಿ ಪ್ರಸ್ತಾಪಿಸಲು ನಿಯೋಗ ಹೋಗೋಣ ಎಂದು ತಿಳಿಸಿದರು.

ಬಡವರು ಮತ್ತು ಶ್ರೀಮಂತರು ಓದುವುದು ಒಂದೇ ಪುಸ್ತಕ. ಹಾಗಾಗಿ ಶ್ರಿಮಂತರಷ್ಟೇ ಸಾಧನೆವುದಲ್ಲ, ಶ್ರಮ ವಹಿಸಿದರೆ ನೀವು ಖಂಡಿತ ಸಾಧನೆ ಮಾಡಬಹುದು. ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸದೇ ಮುಂದುವರಿಸಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಉಮಾಪತಿ ಮಾತನಾಡಿ, ‘ಬಹಳ ಹಿಂದುಳಿದ ಸಮಾಜ ನಮ್ಮದು. ಈವರೆಗೆ ನಮ್ಮವರು ಯಾರೂ ಶಾಸಕರಾಗಿಲ್ಲ. ಮಲ, ಮೂತ್ರ ಮಾಡಿದ ಬಟ್ಟೆಗಳನ್ನು ಇವತ್ತಿಗೂ ಹಳ್ಳಿಗಳಲ್ಲಿ ತಲೆ ಮೇಲೆ ಹೊತ್ತುಕೊಂಡು ಹೋಗಿ ಒಗೆದು ತಂದು ಕೊಡುತ್ತಾರೆ. ವಿಧಾನಸೌಧದಲ್ಲಿ ಇದರ ವಿರುದ್ಧ ಧ್ವನಿ ಎತ್ತಲು ನಮ್ಮವರೊಬ್ಬರು ಇರುತ್ತಿದ್ದರೆ ಈ ಪದ್ಧತಿ ಉಳಿಯುತ್ತಿರಲಿಲ್ಲ. ಬಸವಲಿಂಗಪ್ಪ ಎಂಬವರು ಹಿಂದೆ ಧ್ವನಿ ಎತ್ತಿದ್ದರಿಂದ ಹೇಗೆ ಮಲ ಹೊರುವ ಪದ್ಧತಿ ನಿಷೇಧವಾಯಿತೋ ಹಾಗೆ ಈ ಪದ್ಧತಿಯೂ ನಿಷೇಧವಾಗುತ್ತಿತ್ತು’ ಎಂದ ಹೇಳಿದರು.

‘ನಮ್ಮ ಸಮಾಜಕ್ಕೆ ಸಹಾಯ ಮಾಡುವ ಮನಸ್ಸು ಯಾವ ರಾಜಕಾರಣಿಗಳಿಗೂ ಇಲ್ಲ. ಜನ ಎರಡು ಹೊತ್ತು ಊಟ ಮಾಡುವಂತೆ ಅಕ್ಕಿ ಕೊಟ್ಟ ಸಿದ್ದರಾಮಯ್ಯ ಕೂಡ ನಮ್ಮ ಸಮಾಜವನ್ನು ಎಸ್‌ಸಿಗೆ ಸೇರಿಸುವ ಪ್ರಸ್ತಾವಕ್ಕೆ ನೋಡೋಣ, ಮಾಡೋಣ ಎಂದರೇ ಹೊರತು ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಅಧ್ಯಕ್ಷ ನಂಜಪ್ಪ ಮಾತನಾಡಿ, ‘ಯಡಿಯೂರಪ್ಪ ಒಂದು ಏಕ ಸದಸ್ಯ ಸಮಿತಿ ಮಾಡಿ ಮಡಿವಾಳ ಸಮಾಜದ ಬಗ್ಗೆ ಅಧ್ಯಯನ ಮಾಡಿಸಿದ್ದರು. ಆದರೆ ಆ ವರದಿ ಬರುವ ಹೊತ್ತಿಗೆ ಮುಖ್ಯಮಂತ್ರಿಯಾಗಿ ಅವರಿರಲಿಲ್ಲ. ಜಗದೀಶ ಶೆಟ್ಟರ್‌ ಇದ್ದರು. ಹಾಗಾಗಿ ಸಮಾಜವನ್ನು ಎಸ್‌ಸಿಗೆ ಸೇರಿಸಲು ಆಗಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಸರ್ಕಾರದಿಂದಲೇ ಮಡಿವಾಳ ಮಾಚಿದೇವ ಜಯಂತಿ ಘೋಷಿಸಿದರು. ಅಲ್ಲಿವರೆಗೆ ನಮ್ಮ ಗುರುವಿನ ಜಯಂತಿ ಕೂಡ ಇರಲಿಲ್ಲ’ ಎಂದರು.

ಈಗ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಎಸ್‌ಸಿಗೆ ಸೇರಿಸುವುದಾಗಿ ಅವರು ಹಿಂದೆ ಹೇಳಿದ ಮಾತನ್ನು ಮತ್ತೆ ನೆನಪಿಸೋಣ. ಎಸ್‌ಸಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಎಲ್ಲರೂ ಸೌಲಭ್ಯ ಪಡೆದಿರುವುದರಿಂದ ಹಲವು ಕಡೆ ಸೌಲಭ್ಯ ಪಡೆಯಲು ಫಲಾನುಭವಿಗಳೇ ಇಲ್ಲ. ಆದರೂ ನಾವು ಸೇರುವುದಕ್ಕೆ ವಿರೋಧಿಸುತ್ತಾರೆ’ ಎಂದು ಟೀಕಿಸಿದರು.

ಅಥಣಿ ಜಂಜರವಾಡ ಬಸವ ಕುಟೀರದ ಬಸವರಾಜೇಂದ್ರ ಶರಣರು ಸಾನ್ನಿಧ್ಯ ವಹಿಸಿದ್ದರು. ಇನ್‌ಸ್ಪೆಕ್ಟರ್‌ ಗುರುರಾಜ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ. ಬಸವರಾಜ್‌ ಮಾತನಾಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಜಿನಪ್ಪ, ದ್ರುವಕುಮಾರ, ಸಮಾಜದ ಮುಖಂಡರಾದ ಡಾ. ರವಿಕುಮಾರ್‌, ಅಮರನಾಥ್‌, ಸುರೇಶ್‌ ಮಡಿವಾಳ, ರಮೇಶ, ಧನಂಜಯ, ನಾಗರಾಜ್‌, ಬಸವರಾಜಪ್ಪ, ರಾಮಚಂದ್ರಪ್ಪ, ಡಾ.ಭೀಮಪ್ಪ, ರಾಮಪ್ಪ, ನಾಗಮ್ಮ, ಅನ್ನಪೂರ್ಣಮ್ಮ, ಪ್ರಕಾಶ್‌, ಭೀಮಣ್ಣ, ರಂಗನಾಥ, ಅಂಜಿನಪ್ಪ, ಗುಡ್ಡಪ್ಪ ಉಪಸ್ಥಿತರಿದ್ದರು.

ಉಮಾಪತಿ,, ಕೊಟ್ರಪ್ಪ, ಗುರುನಂಜಪ್ಪ, ನಾಗರಾಜಪ್ಪ, ಶೇಖರಪ್ಪ, ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಮಕ್ಕಳ್ನು ಗೌರವಿಸಲಾಯಿತು.

ಪ್ರತಿಕ್ರಿಯಿಸಿ (+)