ಶುಕ್ರವಾರ, ನವೆಂಬರ್ 22, 2019
20 °C

‘ಕೊಳೆಗೇರಿ ಜನರಿಗಾಗಿ ಸ್ಪಂದಿಸುವವರನ್ನು ಬೆಂಬಲಿಸಿ’

Published:
Updated:

ದಾವಣಗೆರೆ: ಕೊಳೆಗೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಕೊಳೆಗೇರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಿದ್ಧರಿರುವವರನ್ನು ಮಾತ್ರ ಬೆಂಬಲಿಸಬೇಕು ಎಂದು ಸ್ಲಂ ಜನಾಂದೋಲನ ಕರೆ ಕೊಟ್ಟಿದೆ.

ನಗರವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿರುವ, ಆದರೆ ನಗರ ಸೌಕರ್ಯಗಳಿಂದ ವಂಚಿತರಾಗಿರುವ ಸಮುದಾಯಗಳು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಶ್ರಮಜೀವಿಗಳೇ ತುಂಬಿರುವ ಈ ಜನರನ್ನು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪರಿಗಣಿಸಲಾಗುತ್ತದೆ. ಉಳಿದ ಸಮಯದಲ್ಲಿ ಮರೆತುಬಿಡಲಾಗುತ್ತದೆ ಎಂದು ವಕೀಲ ಎಲ್‌.ಎಚ್‌. ಅರುಣಕುಮಾರ್‌, ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಯಲ್ಲಮ್ಮ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಸಂಸ್ಥೆಗಳು ನಗರಾಡಳಿತವನ್ನು ವಾಣಿಜ್ಯೀಕರಣಗೊಳಿಸಿ ಜನರಿಗೆ ಒದಗಿಸುವ ಸೇವೆಗಳಿಗೂ ಶುಲ್ಕ ನಿಗದಿ ಮಾಡಲಾಗಿದೆ. ವಿಕೇಂದ್ರೀಕರಣವನ್ನು ಸಾಂಕೇತಿಕಗೊಳಿಸಿ ಕಂಪನಿ ಆಡಳಿತಗಳಿಗೆ ಸ್ಥಳೀಯ ಸಂಸ್ಥೆಗಳನ್ನು ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೊಳೆಗೇರಿಗಳ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿರುವ ಮಹಮ್ಮದ್‌ ನೌಸಿನ್‌ 9ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ. ಜನ ಹೇಗೆ ಬೆಂಬಲಿಸಲಿದ್ದಾರೆ ಎಂಬುದನ್ನು ಪ್ರಾಯೋಗಿಕವಾಗಿ ನೋಡಲು ಅವರು ಕಣದಲ್ಲಿದ್ದಾರೆ. ಅವರನ್ನು ಜನ ಬೆಂಬಲಿಸಬೇಕು. ಉಳಿದ ವಾರ್ಡ್‌ಗಳಲ್ಲಿ ಕೊಳೆಗೇರಿಗೆ ಮೂಲಸೌಲಭ್ಯ ಒದಗಿಸುವವರನ್ನು ಗುರುತಿಸಿ ಬೆಂಬಲಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಬ್ಬೀರ್‌ಸಾಬ್‌, ಬಸವರಾಜ್‌, ಮಹಮ್ಮದ್‌ ಮನ್ಸೂರ್‌, ಶೇಖ್‌ ಅನ್ವರ್‌ಸಾಬ್‌, ಮರಿಯಪ್ಪ, ನಸ್ರುಲ್ಲಾ ಅವರೂ ಇದ್ದರು.

ಪ್ರತಿಕ್ರಿಯಿಸಿ (+)