ದಾವಣಗೆರೆ: ‘ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿಯಲ್ಲಿದ್ದುಕೊಂಡು ಅಧಿಕಾರ, ಅಂತಸ್ತನ್ನು ಅನುಭವಿಸಿ ಈಗ ತಾನು ಬೆಳೆದು ಬಂದ ಪಕ್ಷವನ್ನು ಮುಳುಗುವ ದೋಣಿ ಎಂದು ಹೇಳಿಕೆ ಕೊಡುತ್ತಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಬಿಜೆಪಿಯ ಒಬಿಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಗಂಡಗಾಳೆ ಟೀಕಿಸಿದರು.
‘ರೇಣುಕಾಚಾರ್ಯ ಅವರ ಹೇಳಿಕೆಯಿಂದ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ. ಇತ್ತೀಚಿನ ದಿನಗಳಲ್ಲಿ ರೇಣುಕಾಚಾರ್ಯ ಅವರು ಹಾದಿ ಬೀದಿಗಳಲ್ಲಿ ಪಕ್ಷ ಹಾಗೂ ಜಿ.ಎಂ.ಸಿದ್ದೇಶ್ವರ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
‘ಜಿ.ಎಂ.ಸಿದ್ದೇಶ್ವರ್ ಬರುವುದಕ್ಕೂ ಮುಂಚೆ ನಾನು ಬಿಜೆಪಿಯಲ್ಲಿದ್ದೆ ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ. ಆದರೆ, 1996ರಲ್ಲಿಯೇ ಜಿ.ಎಂ.ಸಿದ್ದೇಶ್ವರ್ ಅವರು ಲೋಕಸಭಾ ಚುನಾವಣೆಯ ನೇತೃತ್ವ ವಹಿಸಿದ್ದರು. ಆಗಿನಿಂದಲೂ ಬಿಜೆಪಿಯಲ್ಲಿಯೇ ಇದ್ದಾರೆ. ಆಗಿನ ದಿನಗಳಲ್ಲಿ ಇದೇ ಎಂ.ಪಿ.ರೇಣುಕಾಚಾರ್ಯ ಅವರು ‘ಚನ್ನೇಶ್’ ಎನ್ನುವ ಬೋರ್‌ವೆಲ್ ಇಟ್ಟುಕೊಂಡು ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹಿಂದೆ ಮುಂದೆ ಓಡಾಡಿಕೊಂಡಿದ್ದರು’ ಎಂದು ಟೀಕಿಸಿದರು.
‘ಬಿಜೆಪಿ ನಿಮಗೆ ಎಲ್ಲಾ ಅಧಿಕಾರಗಳನ್ನು ಕೊಟ್ಟಿದೆ. ನಿಮ್ಮ ಸಹೋದರನ ಮನೆಯವರಿಗೂ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಪಕ್ಷ ಕೊಟ್ಟಿದೆ. ತಾವು ಗೌರವವಾಗಿ ಪಕ್ಷದಲ್ಲಿ ಇರುವುದಾದರೆ ಇರಬಹುದು. ಇಲ್ಲವಾದರೆ, ಯಾವ ಪಕ್ಷದಲ್ಲಿ ದೋಣಿ ಮುಳುಗುತ್ತಿಲ್ಲವೋ ಆ ದೋಣಿಯಲ್ಲಿ ಹೋಗಿ ಕುಳಿತುಕೊಳ್ಳಬಹುದು’ ಎಂದು ಹೇಳಿದರು.
ಪಾಲಿಕೆ ಸದಸ್ಯ ಶಿವಾನಂದ, ಎಸ್.ಟಿ.ಯೋಗೀಶ್ವರ್, ಜಿ.ಎಸ್.ಡಿ.ಮೂರ್ತಿ, ಜಯಪ್ರಕಾಶ್, ಬಿ.ಟಿ.ಲೋಕೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.