ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಸಮಾಜ ಕಟ್ಟಿದ ಶರಣರು

ಶರಣ ಸಂಗಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರೊ. ಮಲ್ಲಿಕಾರ್ಜುನ ಹಲಸಂಗಿ
Last Updated 4 ನವೆಂಬರ್ 2019, 10:58 IST
ಅಕ್ಷರ ಗಾತ್ರ

ದಾವಣಗೆರೆ: ಜಡ್ಡುಗಟ್ಟಿದ, ಶೋಷಣಾ ಸಮಾಜಕ್ಕೆ ವಿರುದ್ಧವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಪರ್ಯಾಯ ಸಮಾಜವನ್ನು ಬಸವಣ್ಣ ಮತ್ತು ಇತರ ಶರಣರು ಕಟ್ಟಿದರು ಎಂದು ಎ.ಆರ್‌.ಜಿ. ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಆರ್‌. ಹಲಸಂಗಿ ಹೇಳಿದರು.

ವಿರಕ್ತಮಠ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ನಿಂದ ಭಾನುವಾರ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಶರಣ ಸಂಗಮ ಪ್ರಯುಕ್ತ ‘ಅಂತರಂಗದ ಬೆಳಗು–ಬಹಿರಂಗದ ಬೆರಗು’ ಬಗ್ಗೆ ಅವರು ಉಪನ್ಯಾಸ ನೀಡಿದರು.

ಬುದ್ಧ ಪ್ರಥಮ ಕ್ರಾಂತಿ ಪುರುಷನಾದರೆ, ಬಸವಣ್ಣ ಎರಡೇ ಕ್ರಾಂತಿಪುರುಷ, ಅಂಬೇಡ್ಕರ್‌ ಮೂರನೇಯವರು. ಇವರೆಲ್ಲ ಬೇರೆ ಬೇರೆ ಕಾಲಘಟ್ಟದಲ್ಲಿ ಬದುಕಿದವರು. ತಮ್ಮ ಸಮಕಾಲೀನ ಸಮಾಜಕ್ಕೆ ಪ್ರತಿಕ್ರಿಯಿಸಿ ಸಮ ಸಮಾಜದ ಕನಸು ಕಂಡವರು ಎಂದು ವಿವರಿಸಿದರು.

ಪ್ರಜ್ಞೆ, ಕರುಣೆ ಮತ್ತು ಸಮತೆಯನ್ನಿಟ್ಟುಕೊಂಡು ನಾಗರಿಕ ಸಮಾಜದ ಕನಸು ಕಂಡು ಕರ್ಮಠ ಸಮಾಜಕ್ಕೆ ಪರ್ಯಾಯವನ್ನು ಮೊದಲು ಬುದ್ಧ ಕಟ್ಟಿದ. 12ನೇ ಶತನಾಮದಲ್ಲಿ ಅದೇ ದಾರಿಯಲ್ಲಿ ಬಂದ ಬಸವಣ್ಣ ಜಾತಿ ಮತ್ತು ಮೌಢ್ಯದ ವಿರುದ್ಧ ಪರ್ಯಾಯ ಸಮಾಜ ಕಟ್ಟಿದರು. ದಯೆ, ಸಹಬಾಳ್ವೆ, ಸಹಕಾರ, ಕಾಯಕ, ದಾಸೋಹ, ವ್ಯಕ್ತಿ ಗೌರವ ಮುಂತಾದ ಮೌಲ್ಯಗಳೇ ಇದಕ್ಕೆ ಆಧಾರವಾಗಿಟ್ಟುಕೊಂಡರು ಎಂದರು.

ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಶೂದ್ರರು, ಅತಿಶೂದ್ರರು ಭಾಗಿಯಾಗುವ ಅವಕಾಶದಿಂದಲೇ ಶೂದ್ರರನ್ನು, ಪಂಚಮರೆಂದು ಕರೆಯುವ ಅತಿಶೂದ್ರರನ್ನು ವಂಚಿತರನ್ನಾಗಿ ಮಾಡಲಾಗಿತ್ತು. ವರ್ಣಾಶ್ರಮ ಧರ್ಮವನ್ನು ದಿಟ್ಟವಾಗಿ ಎದುರಿಸಿ ಶೋಷಣಾಮುಕ್ತವಾದ ಸಮಾಜವನ್ನು ಕಟ್ಟುವ ಪ್ರಯತ್ನವನ್ನು ಶರಣರು ಮಾಡಿದರು. ಶೋಷಣೆ ಎನ್ನುವುದು ಭಾರತದ ಅವಿಭಾಜ್ಯ ಅಂಗವಾಗಿ ಇರುವುದನ್ನು ನೋಡಿದಾಗ ಈ ಕ್ರಾಂತಿಯ ಮಹತ್ವ ಗೊತ್ತಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಬಹಿರಂಗದ ಕತ್ತಲನ್ನು ನಿವಾರಿಸಲು ಸೂರ್ಯ, ಚಂದ್ರ, ಹಣತೆ, ವಿದ್ಯುತ್‌ದೀಪಗಳು ಇವೆ. ಕಣ್ಣಿಗೆ ಕಾಣದ ಅಂತರಂಗದ ಕತ್ತಲು ಓಡಿಸಲು ಬಸವಾದಿ ಶರಣರ ವಚನಗಳೇ ಬೆಳಕು’ ಎಂದು ಹೇಳಿದರು.

ಆಧುನಿಕ ಕಾಲದಲ್ಲಿ ಮಾನವ ಬಹಿರಂಗವಾಗಿ ಸುಮದರವಾಗಿ ಕಾಣಲು ಬಯಸುತ್ತಾನೆ. ಅಂತರಂಗದಲ್ಲಿ ಪ್ರೀತಿ ಮರೆಯಾಗಿ ನಾಟಕೀಯತೆ ಇರುತ್ತದೆ. ನಾಟಕೀಯತೆಯಿಂದ ಹೊರಬಂದು ಸಹಜತೆಗೆ ಮರಳಬೇಕು. ಜಾತೀಯತೆ, ಮಡಿವಂತಿಕೆ, ಭ್ರಷ್ಟಾಚಾರ, ಮೌಢ್ಯ, ಶೋಷಣೆ, ಮದ್ಯಪಾನ, ಹಿಂಸೆಗಳೆಂಬ ಕತ್ತಲೆಗಳನ್ನು ಬಸವತತ್ವಗಳ ಮೂಲಕ ಕಳೆಯಬೇಕು ಎಂದು ತಿಳಿಸಿದರು.

ಜ.ಜ.ಮು. ಪ್ರೌಢಶಾಲೆಯ ಚಿತ್ರಕಲಾವಿದ ಶಾಂತಯ್ಯ ಪರಡಿಮಠ, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ರಾಜ್ಯಾಧ್ಯಕ್ಷೆ ಡಾ. ಪುಷ್ಪಲತಾ ಪವಿತ್ರರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT