ಶನಿವಾರ, ನವೆಂಬರ್ 23, 2019
23 °C
ಸಿರಿಗೆರೆ ಮಠಧ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ

ವಿದೇಶದಲ್ಲೂ ಕನ್ನಡ ಅಧ್ಯಯನ ಪೀಠ ಸ್ಥಾಪಿಸಿ

Published:
Updated:
Prajavani

ದಾವಣಗೆರೆ: ಕನ್ನಡವನ್ನು ಜಾಗತಿಕ ಮಟ್ಟಕ್ಕೆ ಒಯ್ಯಲು ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳು ಯುರೋಪ್‌ನ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಲ್ಲಿಯೂ ಕನ್ನಡ ಅಧ್ಯಯನ ಪೀಠ ಆರಂಭಿಸಬೇಕು ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ‘ಮಧ್ಯ ಕರ್ನಾಟಕದ ಕನ್ನಡ ಸಾಹಿತ್ಯ– ತಾತ್ವಿಕ ನೆಲೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ಪ್ರಸಾರಾಂಗ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನವೆಂಬರ್ ತಿಂಗಳು ಬಂದಾಗ ಕನ್ನಡ ಎಂದು ಬೊಬ್ಬೆ ಹೊಡೆದುಕೊಂಡರೆ ಸಾಲದು. ಗಡಿಯನ್ನು ದಾಟಿ ಕನ್ನಡದ ಕೆಲಸ ಮಾಡಬೇಕಾಗಿದೆ. ಹೀಗಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳು ವಿಯೆನ್ನಾ, ಹೈಡಲ್‌ಬರ್ಗ್‌, ಮುನಿಚ್‌ ವಿಶ್ವವಿದ್ಯಾಲಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕನ್ನಡ ಅಧ್ಯಯನ ಪೀಠ ಸ್ಥಾಪಿಸಬೇಕು. ಅಲ್ಲಿನ ವಿದ್ಯಾರ್ಥಿಗಳು ಇಲ್ಲಿಗೆ ಹಾಗೂ ಇಲ್ಲಿನ ವಿದ್ಯಾರ್ಥಿಗಳು ಅಲ್ಲಿಗೆ ತೆರಳಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಪ್ರತಿಪಾದಿಸಿದರು.

‘ಬೆಂಗಳೂರಿನಲ್ಲಿ ತರಳಬಾಳು ಹುಣ್ಣಿಮೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮಠಕ್ಕೆ ಏನು ಮಾಡಬೇಕು ಎಂದು ಖಾಸಗಿಯಾಗಿ ಕೇಳಿದ್ದರು. ಯುರೋಪ್‌ನ ಹೈಡಲ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿದ್ದ ಕನ್ನಡ ಅಧ್ಯಯನ ಪೀಠವು ಪ್ರೊ. ಐತಾಳ್‌ ನಿವೃತ್ತರಾದ ಬಳಿಕ ಮುಚ್ಚಿರುವುದನ್ನು ನೆನಪಿಸಿಕೊಂಡೆ. ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಿಗೆ ವಿದೇಶಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ಅನುದಾನ ನೀಡುವಂತೆ ಕೋರಿದ್ದೆ. ಅದಕ್ಕೆ ಸ್ಪಂದಿಸಿ ಯಡಿಯೂರಪ್ಪ ಅವರು ತಲಾ ₹ 1 ಕೋಟಿ ಅನುದಾನ ಮಂಜೂರು ಮಾಡಿದ್ದರು. ದುರದೃಷ್ಟವಶಾತ್‌ ಇದು ನನೆಗುದಿಗೆ ಬಿದ್ದಿದೆ. ಈಗಿನ ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅವರು ಈಗ ಮತ್ತೆ ಕನ್ನಡ ಅಧ್ಯಯನ ಪೀಠ ಆರಂಭಿಸುವ ಬಗ್ಗೆ ಪ್ರಯತ್ನಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಸೇತುವೆ ಕಟ್ಟಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ವಿಚಾರಸಂಕಿರಣಗಳಲ್ಲಿ ವಿಷಯಗಳ ಮೇಲೆ ಮುಕ್ತವಾಗಿ ಚರ್ಚೆ ನಡೆಯಬೇಕು. ಆದರೆ, ನಮಲ್ಲಿ ವಾದ–ವಿವಾದ ನಡೆದು ತಾರಕ್ಕೆ ಹೋಗುತ್ತವೆ. ‘ಅರಿವಿಗೆ ಹಿರಿದು–ಕಿರಿದುಂಟೆ’ ಎಂದು ಬಸವಣ್ಣ ವಚನದಲ್ಲಿ ಹೇಳಿದ್ದಾರೆ. ಜ್ಞಾನಕ್ಕೆ ದೊಡ್ಡವರು–ಸಣ್ಣವರು ಎಂಬುದಿಲ್ಲ. ಜ್ಞಾನ ಪಿಪಾಸುಗಳಾಗಿ ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ದೇಶದ ಖ್ಯಾತ ಸಂಸ್ಕೃತ ವಿದ್ವಾಂಸರ ಪ್ರಬಂಧವನ್ನು ಟೀಕಿಸಿದಾಗ ಆದ ಕಹಿ ಅನುಭವ ಹಾಗೂ ವಿದೇಶದ ಸಂಶೋಧಕರೊಬ್ಬರ ಬರಹವನ್ನು ಟೀಕಿಸಿದಾಗ ಅವರು ಆಡಿದ ಪ್ರೋತ್ಸಾಹದ ಮಾತುಗಳನ್ನು ಸ್ವಾಮೀಜಿ ನೆನಪಿಸಿಕೊಂಡರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್‌ ಆಶಯನುಡಿಗಳನ್ನಾಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ, ಮೌಲ್ಯಮಾಪನ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್‌, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ್‌ ಅವರೂ ಇದ್ದರು.

ಪ್ರತಿಕ್ರಿಯಿಸಿ (+)