ಸೋಮವಾರ, ಮಾರ್ಚ್ 1, 2021
23 °C
ಬೂದಾಳ್‌ರಸ್ತೆಯ ಬಾಬುಜಗಜೀವನರಾಮ್ ನಗರದಲ್ಲಿ ‘ಜಯದೇವ ಜೋಳಿಗೆ’ ಹಿಡಿದ ಬಸವಪ್ರಭು ಶ್ರೀ

ಸ್ವಾಮೀಜಿ ಜೋಳಿಗೆಗೆ ಬಿತ್ತು ಬೀಡಿ, ಸಿಗರೇಟು, ಗುಟ್ಕಾ, ಬಾಟಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಮುಂಜಾವಿನಲ್ಲಿಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಯವರು ಜೋಳಿಗೆ ಹಿಡಿದು ಮನೆಮನೆಗೆ ಭೀಕ್ಷೆ ಬೇಡಲು ಹೊರಟಿದ್ದರು. ಸ್ವಾಮೀಜಿಯ ಜೋಳಿಗೆಯಲ್ಲಿ ಬಿದ್ದಿದ್ದು ಧವಸ, ಧಾನ್ಯ, ಧನ ಅಲ್ಲ. ಬದಲಾಗಿ ಬೀಡಿ, ಸಿಗರೇಟು, ತಂಬಾಕು, ಗುಟ್ಕಾ, ಬಾಟಲಿಗಳು.

ಬೂದಾಳ್‌ರಸ್ತೆಯ ಬಾಬೂ ಜಗಜೀವನರಾಮ್ ನಗರದಲ್ಲಿ ಈ ದೃಶ್ಯವು ಕಂಡು ಬಂತು. ಶ್ರಾವಣಮಾಸದ ಅಂಗವಾಗಿ ಬಸವಕೇಂದ್ರ, ಮುರುಘರಾಜೇಂದ್ರ ವಿರಕ್ತಮಠ, ಎಸ್.ಜೆ.ಎಂ ಶಿವಯೋಗಾಶ್ರಮ ಟ್ರಸ್ಟ್ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಈ ವಸ್ತುಗಳಿಗೆ ಜೋಳಿಗೆಯೊಡ್ಡಿದರು.

‘ಜಯದೇವ ಜೋಳಿಗೆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಿಸಲು ಪಣ ತೊಟ್ಟಿದ್ದೇವೆ. ಕಲ್ಯಾಣ ರಾಜ್ಯವನ್ನು ನಾವು ಈಗ ಕಟ್ಟಬೇಕಾಗಿದೆ’ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.

ವ್ಯಸನಮುಕ್ತ ಸಮಾಜವನ್ನು ಬಸವಣ್ಣ 12ನೇ ಶತಮಾನದಲ್ಲಿ ನಿರ್ಮಿಸಿದ್ದರು. ಅಂತಹ ಆದರ್ಶವಾದ ಕಲ್ಯಾಣ ರಾಜ್ಯವನ್ನು ಕಟ್ಟಬೇಕು. ಅದಕ್ಕಾಗಿ ದುಶ್ಚಟ, ದುರ್ಗುಣ ಬಿಡಬೇಕು. ದುಶ್ಚಟವೆಂದರೆ ದುಡ್ಡು ತೆತ್ತು ಆರೋಗ್ಯ, ಆಯುಷ್ಯ ಕ್ಷೀಣಿಸಿಕೊಳ್ಳುವ ದುಷ್ಟ ಹವ್ಯಾಸ. ಕುಡಿತದಿಂದ ಮಾನವನ ಕರುಳು ಸುಡುತ್ತದೆ. ಬೀಡಿ ಸೇದುವುದರಿಂದ ಕ್ಯಾನ್ಸರ್, ಗುಟ್ಕಾ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ, ಕ್ಯಾನ್ಸರ್ ನಮ್ಮ ಜೀವನವನ್ನು ಕ್ಯಾನ್ಸಲ್ ಮಾಡುತ್ತದೆ ಎಂದು ವಿವರಿಸಿದರು.

‘ನಿಮ್ಮಲ್ಲಿರುವ ದುಶ್ಚಟಗಳನ್ನು ನನಗೆ ಕಾಣಿಕೆ ರೂಪದಲ್ಲಿ ನೀಡುವ ಮೂಲಕ ನೀವು ಒಬ್ಬ ಶರಣರಾಗಿ, ದಾರ್ಶನಿಕರಾಗಿ ಬದುಕಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ನಾಯಕ ಡಿ.ಬಸವರಾಜ್, ‘ಬಡಜನರ, ಕೂಲಿ ಕಾರ್ಮಿಕರ ಜೀವನ ತುಂಬ ದುಸ್ತರವಾಗಿದೆ. ಚಟಗಳಿಗೆ ದಾಸರಾಗಿ ಮತ್ತಷ್ಟು ಬಡವರಾಗಿದ್ದಾರೆ. ಹಾಗಾಗಿ ಸ್ವಾಮೀಜಿ ಜೋಳಿಗೆಗೆ ದುಶ್ಚಟಗಳನ್ನು ನೀಡಿ ಪ್ರತಿಜ್ಞೆ ಮಾಡುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಿ’ ಎಂದು ತಿಳಿಸಿದರು.

ಕರುಣಾಜೀವ ಕಲ್ಯಾಣಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ‘ಕುಡಿತವು ಎಲ್ಲಾ ಅಪರಾಧಗಳ ತಾಯಿಯಾಗಿದೆ. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಅನಾಚಾರಗಳಿಗೆ ಕಾರಣವೇ ಕುಡಿತ’ ಎಂದರು.

ವೈದ್ಯಾಧಿಕಾರಿ ಡಾ. ಯೋಗೇಂದ್ರಕುಮಾರ್ ಜನರಿಗೆ ಆರೋಗ್ಯದ ಮಹತ್ವ ಮತ್ತು ದುಶ್ಚಟಗಳ ದುಷ್ಪರಿಣಾಮವನ್ನು ತಿಳಿಸಿದರು.

ಅನೀಷ್ ಪಾಷಾ, ಎಚ್.ಸಿ. ಗುಡ್ಡಪ್ಪ, ದೋಣಿ ನಿಂಗಪ್ಪ, ಹೋಟೆಲ್ ಬಸಣ್ಣ, ಕೆ.ಸಿ.ಮಲ್ಲಿಕಾರ್ಜುನ್, ಲಂಬಿ ಮುರುಗೇಶ್, ಎನ್.ಜೆ. ಶಿವಕುಮಾರ್, ಎಂ.ಚೌಡಪ್ಪ, ದೇವರಾಜ ನಾಯ್ಕ, ಶರಣಬಸವ, ಕೀರ್ತಿಕುಮಾರ್, ಕುಮಾರಸ್ವಾಮಿ, ರುದ್ರಾಕ್ಷಿಬಾಯಿ, ಶಿವಬಸಮ್ಮ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.