ಅರಸೀಕೆರೆ: ಬಸವ ತತ್ವದ ಮಹಾಬೆಳಗಿನಲ್ಲಿ ಬೆಳಗಿದ ಲಿಂಗೈಕ್ಯ ಚನ್ನಬಸವ ಮಹಾಶಿವಯೋಗಿಗಳು ಬಸವ ತತ್ವ ಹಾಗೂ ಅಧ್ಯಾತ್ಮದ ಅಪಾರ ಪಾಂಡಿತ್ಯ ಹೊಂದಿದ್ದರು. ನಡೆದಾಡಿಕೊಂಡು ವೈಚಾರಿಕತೆಯ ಸಮಾಜದ ಕಟ್ಟಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಸುತ್ತೂರು ವೀರ ಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಕಮ್ಮತ್ತಹಳ್ಳಿ ವಿರಕ್ತ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಯವರ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳದ ಸಾನಿಧ್ಯ ವಹಿಸಿ ಮಾತನಾಡಿದರು.
ಶರಣರ ತತ್ವ, ಕ್ಲಿಷ್ಟಕರ ಸಾಹಿತ್ಯ ಗ್ರಂಥಗಳನ್ನು ಅರ್ಥೈಸಿಕೊಂಡು ಸಾಮಾನ್ಯರಿಗೆ ಪ್ರವಚನ ನೀಡಿ, ಸರಳ ಜೀವನದ ಮೂಲಕ ಮಾದರಿಯಾಗಿದ್ದರು. ಆಧುನಿಕ ಕಾಲದಲ್ಲೂ ತತ್ವ ಶಾಸ್ತ್ರಗಳು ಹಲವು ಭಾಷೆಗಳಿಗೆ ಅನುವಾದಗೊಂಡು ಚರಿತ್ರೆ ಮರುಕಳಿಸುತ್ತಿರುವುದು ದೇಶದ ಹಿರಿಮೆಗೆ ಪಾತ್ರವಾಗಿದೆ. ರಾಜಕಾರಣಿಗಳು ಧರ್ಮದ ತಳಹದಿ ಮೇಲೆ ನಡೆದರೆ ದೇಶದ ಅಭಿವೃದ್ಧಿ ಸಾಧ್ಯ. ಶಿವ ಶರಣರ ತತ್ವಾದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಲಿಂಗ ಜಾತಿಯ ಸಂಕೇತ ಅಲ್ಲ, ಸಮಾನತೆಯ ಸಂಕೇತ ಎಂದು ತಿಳಿಸಿದರು.
ಕಮ್ಮತಹಳ್ಳಿ - ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, 'ಸಭೆ ಸಮ್ಮೇಳನ ಜಾತ್ರೆಯಾಗಿರದೆ, ವೈಚಾರಿಕತೆ ಪ್ರಸರಿಸುವ ಕೇಂದ್ರಗಳಾಗಿ ಮಠಗಳು ಹೊರಹೊಮ್ಮಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸನ್ಮಾರ್ಗದ ಕಡೆಗೆ ಕರೆದುಕೊಂಡುವ ಹೋಗುವ ಕೆಲಸ ಸ್ವಾಮೀಜಿಗಳು ಮಾಡಬೇಕು ಎಂದರು.
ಎಂ.ಎಲ್ ಹುಂಡಿ ಮಠದ ಗೌರಿ ಶಂಕರ ಸ್ವಾಮೀಜಿ, ಗಂದಿಗವಾಡ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿದರು.
ಇಳಕಲ್ ಗುರು ಮಹಾಂತ ಸ್ವಾಮೀಜಿ, ಲಿಂಗನಾಯಕನ ಹಳ್ಳಿ ಚನ್ನವೀರ ಸ್ವಾಮೀಜಿ, ಸೋಮಶೇಖರ ಸ್ವಾಮೀಜಿ, ಜಯ ಬಸವ ಸ್ವಾಮೀಜಿ, ಸಿದ್ಧಲಿಂಗಯ್ಯ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಅರಸೀಕೆರೆ ಸಮೀಪದ ಕಮ್ಮತ್ತಹಳ್ಳಿ ವಿರಕ್ತ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಯವರ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನ ಸಾನಿಧ್ಯ ವಹಿಸಿ ಸುತ್ತೂರು ವೀರ ಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಅರಸೀಕೆರೆ ಸಮೀಪದ ಕಮ್ಮತ್ತಹಳ್ಳಿ ವಿರಕ್ತ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಯವರ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನಕ್ಕೆ ಪಾಲ್ಗೊಂಡ ಭಕ್ತ ಸಮೂಹ.