ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ, ಭಾರಿ ಪರಿಶ್ರಮದಿಂದ ಕಾವ್ಯಸೃಷ್ಟಿ

‘ಅಮೃತದ ಒರತೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಈಶ್ವರಪ್ಪ
Last Updated 17 ಆಗಸ್ಟ್ 2019, 12:28 IST
ಅಕ್ಷರ ಗಾತ್ರ

ದಾವಣಗೆರೆ: ಕಾವ್ಯ ಸೃಷ್ಟಿ ಅಷ್ಟು ಸುಲಭದ ಕೆಲಸವಲ್ಲ. ಪ್ರತಿಭೆ ಇರಬೇಕು. ಜತೆಗೆ ಕಠಿಣ ಪರಿಶ್ರಮವೂ ಇರಬೇಕು. ಸಾಹಿತ್ಯವನ್ನು ಓದಿ ಕರಗತ ಮಾಡಿಕೊಂಡಿರಬೇಕು. ಭಾಷೆಯನ್ನು ತಮ್ಮದಾಗಿಸಿಕೊಂಡಿರಬೇಕು ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ಪವಿತ್ರ ಪ್ರಕಾಶನ ಹೊರತಂದಿರುವ ಸೋಮೇಶ್ವರ ವಿದ್ಯಾಲಯದಲ್ಲಿ ಶನಿವಾರ ಡಿವೈಎಸ್‌ಪಿ ಡಾ.ಬಿ. ದೇವರಾಜ ಅವರ ‘ಅಮೃತದ ಒರತೆ’ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆಯ ಅಧಿಕಾರಿ ಕವನ ಸಂಕಲನ ಪ್ರಕಟಿಸಿರುವುದೇ ದೊಡ್ಡ ಸಾಧನೆ. ಇಂಡಿಯನ್‌ ಪಿನಲ್‌ ಕೋಡ್‌ಗಳನ್ನು ಅಧ್ಯಯನ ಮಾಡುತ್ತಾ ಸಮಾಜವನ್ನು ನಿಯಂತ್ರಿಸುವ ನಡುವೆ ಸಾಹಿತ್ಯಗಳನ್ನು ಓದಲು ಸಮಯ ಸಿಗುವುದು ಕಷ್ಟ ಎಂದು ವಿಶ್ಲೇಷಿಸಿದರು.

ಶಾಸ್ತ್ರ ಮೆದುಳಿನಿಂದ ಬಂದರೆ, ಕಾವ್ಯ ಹೃದಯದಿಂದ ಹುಟ್ಟುತ್ತದೆ. ಕವಿ ಸೃಷ್ಟಿ ಮತ್ತು ಸಹೃದಯರ ಸ್ವೀಕಾರ ಒಟ್ಟಿಗೆ ಆದರೆ ಕವಿ ಬೆಳೆಯುತ್ತಾನೆ ಎಂದ ಅವರು, ‘ಪೊಲೀಸರು ಕಠಿಣ ಹೃದಯಿಗಳಾಗಿ ಇರಬೇಕಾಗುತ್ತದೆ. ಇಲ್ಲದೇ ಹೋದರೆ ಸಮಾಜವನ್ನು ನಿಯಂತ್ರಿಸುವುದು ಕಷ್ಟ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ‘ಪಶು ವೈದ್ಯಕೀಯದಲ್ಲಿ ಡಾಕ್ಟರೇಟ್ ಮಾಡಿರುವ ಡಾ.ದೇವರಾಜ ಪ್ರತಿಭಾವಂತರು. ಅವರು ಇನ್ನಷ್ಟು ಬರೆಯಲಿ. ಇತ್ತೀಚೆಗೆ ಪೊಲೀಸ್ ಇಲಾಖೆ ಬೆಂಗಳೂರಿನಲ್ಲಿ ಕವಿಗೋಷ್ಠಿ ನಡೆಸಿತ್ತು. ಇಲಾಖೆಯಲ್ಲಿ ಬಹಳ ಪ್ರತಿಭೆಗಳಿಗೆ ದೇವರಾಜ್‌ ಸ್ಫೂರ್ತಿಯಾಗಲಿ’ ಎಂದು ಹಾರೈಸಿದರು.

ಕರಾವಳಿ ಕಾವಲು ಪಡೆಯ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ‘ದೇವರಾಜ್‌ ಬಹುಮುಖಿ ಪ್ರತಿಭೆಯುಳ್ಳವರು. ಎಲ್ಲ ರಂಗಗಳಲ್ಲೂ ಆಸಕ್ತಿ ಇರುವುದಷ್ಟೇ ಅಲ್ಲ. ಅದನ್ನು ಕಲಿಯಬೇಕು ಎಂಬ ಹುಮ್ಮಸ್ಸನ್ನು ಹೊಂದಿದ್ದಾರೆ. ತಾಯಿ, ಪ್ರೀತಿ, ಪ್ರೇಮ, ಪ್ರಕೃತಿ, ದೇಶಪ್ರೇಮ ಹೀಗೆ ನಿತ್ಯ ಕಾಣುವ ಎಲ್ಲವೂ ವಿಷಯಗಳ ಕುರಿತು ಕವಿತೆಗಳನ್ನು ಬರೆದಿದ್ದಾರೆ’ ಎಂದು ಹೇಳಿದರು.

ಪೊಲೀಸ್ ಇಲಾಖೆಯವರು ಅಂದರೆ ಇದೇ ರೀತಿ ಇರ್ತಾರೆ ಎಂದು ಸಮಾಜ ಭಾವಿಸುತ್ತದೆ. ಪೊಲೀಸರು ಮಾತ್ರವಲ್ಲ ವೈದ್ಯರು, ಉಪನ್ಯಾಸಕರು ಹೀಗೆ ಎಲ್ಲರ ಬಗ್ಗೆಯೂ ಒಂದು ಚಿತ್ರಣ ಇರುತ್ತದೆ. ಅದನ್ನು ಮೀರಿದವರು ದೇವರಾಜ್‌ ಎಂದು ಶ್ಲಾಘಿಸಿದರು.

ಸಾಹಿತಿ ಆನಂದ ಋಗ್ವೇದಿ, ‘ಮನಸ್ಸಿನ ಭಾವವನ್ನು ಹೇಳಿಕೊಳ್ಳುವ ಮಾಧ್ಯಮವೇ ಕವಿತೆ. ಪ್ರೀತಿ, ಸಂಕಟ, ಬಡತನ ಎಲ್ಲವನ್ನೂ ಒಳಗೊಂಡ ಮನುಷ್ಯ ಪ್ರೀತಿಯ ಕವಿತೆಗಳು ಈ ಕೃತಿಯಲ್ಲಿ ಮೂಡಿವೆ’ ಎಂದು ಕೃತಿ ಪರಿಚಯಿಸಿದರು.

ಕೃತಿಕಾರ ಡಾ. ಬಿ. ದೇವರಾಜ ಮಾತನಾಡಿ, ‘ಸಾಹಿತ್ಯದ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದವನು ನಾನು. ಏನೋ ಸಾಧಿಸಬೇಕು ಎಂಬ ಉತ್ಕಟತನ, ಹುಚ್ಚುತನದಿಂದಾಗಿ ಬಿದ್ದಾಗ, ಅವಮಾನ ಅನುಭವಿಸಿದಾಗ ಕಣ್ಣೀರಾದ ಕ್ಷಣಗಳ ಹೊತ್ತಿಗೆ ಸಾಹಿತ್ಯ ಅಪ್ಪಿಕೊಂಡಿತು. ಸಾಹಿತ್ಯದಲ್ಲಿ ತಾಯಿ ಹೃದಯ ಇರುತ್ತದೆ. ಏನೇ ಮಾಡಿದರೂ ಅದನ್ನು ದಾಖಲಿಸಬೇಕು ಎಂಬುದನ್ನು ಪೊಲೀಸ್‌ ಇಲಾಖೆ ಕಲಿಸಿಕೊಟ್ಟಿತು’ ಎಂದು ಅನುಭವಗಳನ್ನು ಹಂಚಿಕೊಂಡರು.

ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ. ಶಿವಯೋಗಿಸ್ವಾಮಿ, ಭದ್ರಾನಾಯ್ಕ್‌ ಉಪಸ್ಥಿತರಿದ್ದರು.

ಅದಮ್ಯ ಕಲಾಸಂಸ್ಥೆ ಮಕ್ಕಳಿಂದ ಭಾವಗೀತೆ ಗಾನ ನಡೆಯಿತು. ಪಾಂಡುನಾಯ್ಕ ಪ್ರಾರ್ಥನೆ ಮಾಡಿದರು. ಶಿಲ್ಪಾ ಸ್ವಾಗತಿಸಿದರು. ದೇವರಾಜ್‌ ಸಂಗೇನಹಳ್ಳಿ ವಂದಿಸಿದರು. ಸತೀಶ್‌ ಪಾಟೀಲ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT