ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಪ್ರತಿಭಟನಕಾರರು–ಪೊಲೀಸರ ನಡುವೆ ವಾಗ್ವಾದ

ರೈತ ವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮೋದಿ, ಶಾ ಪ್ರತಿಕೃತಿ ದಹನಕ್ಕೆ ವಿರೋಧ
Last Updated 19 ಅಕ್ಟೋಬರ್ 2021, 4:27 IST
ಅಕ್ಷರ ಗಾತ್ರ

ದಾವಣಗೆರೆ: ಬೆಲೆ ಏರಿಕೆ, ರೈತ ವಿರೋಧಿ ನೀತಿ ಹಾಗೂ ಉತ್ತರ ಪ್ರದೇಶದಲ್ಲಿ ರೈತರ ಹತ್ಯೆ ಖಂಡಿಸಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದಕ್ಕೆ ಸಾಕ್ಷಿಯಾಯಿತು.

ಮೋದಿ-ಅಮಿತ್ ಶಾ ಭಾವಚಿತ್ರಗಳನ್ನು ಹಿಡಿದು ಕೇಂದ್ರ ಸರ್ಕಾರ, ಕೇಂದ್ರ ಸಚಿವರ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ಮೋದಿ, ಶಾ ಭಾವಚಿತ್ರ ಪ್ರದರ್ಶನ ಮಾಡಬಾರದು ಮತ್ತು ದಹನ ಮಾಡಬಾರದು. ಪ್ರತಿಭಟನೆಗೆ ಮಾತ್ರ ಅವಕಾಶ ಎಂದು ಪೊಲೀಸರು ತಿಳಿಸಿದರು. ಆಗ ಮಾತಿನ ಚಕಮಕಿ ನಡೆಯಿತು. ಮುಖಂಡರಾದ ಆವರಗೆರೆ ಎಚ್.ಜಿ. ಉಮೇಶ್, ಡಾ.ಸುನೀತ್‌ ಕುಮಾರ್‌, ಆವರಗೆರೆ ಚಂದ್ರು, ಮಂಜುನಾಥ ಕುಕ್ಕವಾಡ ಸಹಿತ ಹಲವರನ್ನು ಪೊಲೀಸರು ಜೀಪು ಹತ್ತಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ತಳ್ಳಾಟಗಳು ಉಂಟಾದವು.

ಈ ಎಲ್ಲ ಗೊಂದಲದ ನಡುವೆ ಪ್ರತಿಭಟನ ಮೆರವಣಿಗೆ ಜಯದೇವ ಸರ್ಕಲ್‌ನಿಂದ ಮಹಾತ್ಮ ಗಾಂಧಿ ವೃತ್ತಕ್ಕೆ ತಲುಪಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರ ಪ್ರದರ್ಶಿಸಲು ಪೊಲೀಸರು ಅನುಮತಿ ನಿರಾಕರಿಸಿದರು.

ಬಿಜೆಪಿಗೆ ಎಲ್ಲ ಅನುಮತಿ ನೀಡುತ್ತೀರಿ, ನಮಗೆ ನಿರಾಕರಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಏಜೆಂಟರಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೊನೆಗೆ ಮೋದಿ-ಶಾ ಭಾವಚಿತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿ ಪ್ರತಿಭಟನೆ ಮುಂದುವರಿಸಿದರು.

ರೈತರಿಗೆ ಮಾರಕವಾದ ಕೃಷಿ ಕಾಯ್ದೆ ಕೈಬಿಡಬೇಕು. ವಿದ್ಯುತ್ ಖಾಸಗೀಕರಣದಿಂದ ಹಿಂದೆ ಸರಿಯಬೇಕು. ಉತ್ತರ ಪ್ರದೇಶದಲ್ಲಿ ರೈತರ ಹತ್ಯೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಐರಣಿ ಚಂದ್ರು, ಮಂಜುನಾಥ ಕುಕ್ಕವಾಡ, ಮಧು ತೊಗಲೇರಿ, ಭಾರತಿ, ಪರಶುರಾಮ, ರಂಗನಾಥ, ಆಮ್ ಆದ್ಮಿ ಪಾರ್ಟಿಯ ಆದಿಲ್ ಖಾನ್ ಒಳಗೊಂಡಂತೆ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು, ಅಖಿಲ ಭಾರತ ಕಿಸಾನ್ ಸಭಾ, ಪ್ರಾಂತ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ರಾಜ್ಯ ರೈತ ಸಂಘ-ಹಸಿರು ಸೇನೆ, ಕರ್ನಾಟಕ ಜನಶಕ್ತಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಜನ ಸಂಘಟನೆ, ಎಐಯುಟಿಯುಸಿ, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಎಐಟಿಯುಸಿ ಸೇರಿ ಅನೇಕ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT