ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರ ಪರ ಮಠಾಧೀಶರು ಮಾತನಾಡುವುದು ಸರಿಯಲ್ಲ: ಶಾಸಕ ರವೀಂದ್ರನಾಥ್ ಬೇಸರ

Last Updated 21 ಜುಲೈ 2021, 18:26 IST
ಅಕ್ಷರ ಗಾತ್ರ

ದಾವಣಗೆರೆ: ‘ಮಠಾಧೀಶರು ರಾಜಕೀಯ ಮಾಡಬಾರದು. ಒಬ್ಬರ ಪರವಾಗಿ ಎಲ್ಲರೂ ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಬಿಜೆಪಿ ಹಿರಿಯ ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿರುವ ಮಠಾಧೀಶರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನೂ ವೀರಶೈವ ಲಿಂಗಾಯತನೇ. ಜಗದೀಶ ಶೆಟ್ಟರ್, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಎಲ್ಲರೂ ಲಿಂಗಾಯತ ನಾಯಕರೇ. ಎಲ್ಲರೂ ಮಠಗಳ ಭಕ್ತರೇ. ಹೀಗಿರುವಾಗ ಒಬ್ಬರ ಪರವಾಗಿ ಮಠಾಧೀಶರು ಮಾತನಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಗೆ ಬಂದು ಮಾತನಾಡಲಿ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಈಗ ಕಾಳಜಿ ವಹಿಸುತ್ತಿರುವ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ ಅವರು ಹಿಂದೆ ಸರ್ಕಾರ ರಚಿಸುವ ಕಾಲದಲ್ಲಿ ಎಲ್ಲಿದ್ದರು? ಕಾಂಗ್ರೆಸ್‌ನಲ್ಲಿದ್ದುಕೊಂಡು ಬೆಂಬಲ ಕೊಡ್ತೇವೆ ಎನ್ನುವುದು ನ್ಯಾಯವಲ್ಲ. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಮಾತನಾಡಲಿ’ ಎಂದು ಸಲಹೆ ನೀಡಿದ್ದಾರೆ.

‘ಮುಖ್ಯಮಂತ್ರಿ ಯಾರು ಇರಬೇಕು ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್‌ ಹೇಳುತ್ತದೆ. ಅದನ್ನೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ನಾನು ಕೂಡ ಅದನ್ನೇ ಹೇಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಪರ ವೀರಶೈವ ಮಠಾಧೀಶರ ವಕಾಲತ್ತು

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಇಲ್ಲದಿದ್ದರೆ ಸಾಮೂಹಿಕ ಹೋರಾಟ ಅನಿವಾರ್ಯ ಎಂದು ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಎಚ್ಚರಿಸಿತು.

‘ಮಠಗಳು ಸಮಾಜದ ಕೇಂದ್ರಗಳು. ಸಮಾಜಸೇವೆ ಮುಖ್ಯ ಉದ್ದೇಶ. ಸೇವೆ ಮಾಡುವ ಜನರನ್ನು ಗೌರವಿಸುವುದು ಮಠಗಳ ಕೆಲಸ. ನಿಜವಾದ ಸೇವಾ ಧುರೀಣ ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದೆ. ‘ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಬಾರದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಠಾಧೀಶರ ಪರಿಷತ್ ಅಧ್ಯಕ್ಷ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಆಗ್ರಹಿಸಿದರು. ಗೋಷ್ಠಿಯಲ್ಲಿ 21 ಮಠಾಧೀಶರು ಭಾಗವಹಿಸಿದ್ದರು.

‘ಮಠಾಧೀಶರ ವರ್ತನೆ ತಲೆ ತಗ್ಗಿಸುವಂತಿದೆ’

ಬೆಂಗಳೂರು: ‘ರಾಜ್ಯದ ಹಲವು ಮಠಾಧೀಶರು ಜಾತಿ ರಾಜಕಾರಣದೊಳಕ್ಕೆ ಸಕ್ರಿಯವಾಗಿ ಧುಮುಕಿ, ಈ ಕಾರಣಕ್ಕಾಗಿಯೇ ಜನವಿರೋಧಿ ಸರ್ಕಾರವೊಂದರ ಬೆಂಬಲಕ್ಕೆ ನಿಂತಿರುವ ಪರಿಯು ತಲೆ ತಗ್ಗಿಸುವಂತಿದೆ’ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಟೀಕಿಸಿದ್ದಾರೆ.

ಮಠಾಧೀಶರ ವರ್ತನೆ ಕುರಿತು ಬುಧವಾರ ಹೇಳಿಕೆ ನೀಡಿರುವ ಅವರು, ‘ಮಠಾಧೀಶರು ತಮ್ಮ ಕರ್ತವ್ಯವನ್ನು ಮರೆತು ಜನವಿರೋಧಿ ಸರ್ಕಾರವನ್ನು ಬೆಂಬಲಿಸುತ್ತಿರುವುದು ಜಾತಿವಾದಿ ಸಮಾಜವನ್ನು ಮುಂದುವರಿಸುವ ಅಪಾಯದ ಸೂಚನೆ ನೀಡುತ್ತಿದೆ’ ಎಂದು ಹೇಳಿದ್ದಾರೆ.

ಬೆಲೆ ಏರಿಕೆ, ಕಳಪೆ ಆಡಳಿತದ ಮೂಲಕ ಸಾಮಾನ್ಯ ಜನರ ಬದುಕು ದುಸ್ಥಿತಿಗೆ ತಲುಪುವಂತೆ ಮಾಡಿರುವ ಸರ್ಕಾರಕ್ಕೆ ಮಠಾಧೀಶರು ಚಾಟಿ ಬೀಸಬೇಕಿತ್ತು. ಆದರೆ, ಜವಾಬ್ದಾರಿ ಮರೆತ ಅವರು ಜನವಿರೋಧಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತೈಲ ಬೆಲೆ ಏರಿಕೆ ಮತ್ತು ಕೋಮುವಾದಿಗಳ ವಿರುದ್ಧ ಮಠಾಧೀಶರು ಒಗ್ಗೂಡಿ ಧ್ವನಿ ಎತ್ತಿದ್ದರೆ ನೆಮ್ಮದಿ ಅನಿಸುತ್ತಿತ್ತು. ಆದರೆ, ಜನರ ಬದುಕಿಗೆ ಅನನುಕೂಲ ಮಾಡಿರುವ ನಾಯಕನ ರಕ್ಷಣೆಗೆ ಜಾತಿ ಕಾರಣಕ್ಕೇ ಕಾಯಲು ಒಗ್ಗಟ್ಟಾಗಿರುವುದು ಬೇಸರದ ಸಂಗತಿ’ ಎಂದಿದ್ದಾರೆ.

ಸಿ.ಎಂ ಬದಲಾವಣೆ ಇಲ್ಲ: ಬೊಮ್ಮಾಯಿ, ಡಿವಿಎಸ್‌

ಬೆಂಗಳೂರು: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಸಿ.ಎಂ ಆಗಿ ಮುಂದುವರಿಯುವುದಾಗಿ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರೂ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದು ಈಗಾಗಲೇ ಹೇಳಿದ್ದಾರೆ’ ಎಂದರು.

‘ರಾಜಕೀಯ ಅಸ್ಥಿರತೆ ಸೃಷ್ಟಿಸಲು ಗೊಂದಲ ಹುಟ್ಟು ಹಾಕಲಾಗಿದೆ. ಯಡಿಯೂರಪ್ಪ ಪ್ರಬಲ ನಾಯಕ ಮಾತ್ರವಲ್ಲ, ನಮ್ಮ ನಾಯಕರೂ ಹೌದು. ನಿಸ್ಸಂಶಯವಾಗಿಯೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ’ ಎಂದು ಹೇಳಿದರು.

ಬದಲಾವಣೆ ಇಲ್ಲ– ಡಿವಿಎಸ್‌: ‘ರಾಜಕೀಯವೇ ಅನಿರೀಕ್ಷಿತ. ಏನು ಬೇಕಾದರೂ ಆಗಬಹುದು. ಆದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಉಳಿದದ್ದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು’ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.

‘ಯಡಿಯೂರಪ್ಪ ಇತ್ತೀಚೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು. ಆಗ, ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರನ್ನು ಬದಲಿಸಲಾಗುತ್ತದೆ ಎಂಬ ವಿಚಾರದಲ್ಲಿ ಸತ್ಯಾಂಶ ಇಲ್ಲ’ ಎಂದರು.

‘ಯಡಿಯೂರಪ್ಪ ಒಳ್ಳೆ ಕೆಲಸ ಮಾಡಿದ್ದರಿಂದಲೇ ಮಠಾಧೀಶರು ಅವರ ನೆರವಿಗೆ ಧಾವಿಸಿದ್ದಾರೆ. ಶಾಸಕ ಯತ್ನಾಳ ಅವರ ಬಗ್ಗೆ ಮಾತನಾಡುವುದಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗಲೇ ಅವರನ್ನು 6 ವರ್ಷಗಳ ಕಾಲ ಉಚ್ಛಾಟಿಸಿದ್ದೆ’ ಎಂದು ಅವರು ಹೇಳಿದರು.

‘ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ’

ಕೂಡಲಸಂಗಮ (ಬಾಗಲಕೋಟೆ): ‘ಆರ್‌ಎಸ್‌ಎಸ್‌ನವರ ಪ್ರಭಾವದಿಂದ ಬಿಜೆಪಿ ವರಿಷ್ಠರು ಬಿ.ಎಸ್‌.ಯಡಿಯೂರಪ್ಪ ಅವರನ್ನು ಬದಲಿಸಿದರೆ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ’ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಎಚ್ಚರಿಸಿದ್ದಾರೆ.

‘ಲಿಂಗಾಯತರು ಯಡಿಯೂರಪ್ಪ ಅವರನ್ನು ನೋಡಿ ಬಿಜೆಪಿಗೆ ಮತ ಹಾಕಿದ್ದಾರೆ. ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೋರಿಸುವುದು ಸರಿಯಲ್ಲ. ಧರ್ಮದ ವಿಷಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ, ಯಡಿಯೂರಪ್ಪ ಅವರಿಗೇ ನಮ್ಮ ಬೆಂಬಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವನಬಾಗೇವಾಡಿ (ವಿಜಯಪುರ) ವರದಿ: ‘ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಇಳಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ನಿಶ್ಚಿತ. ಲಿಂಗಾಯತರು ಬಿಜೆಪಿಯಿಂದ ದೂರವಾಗುತ್ತಾರೆ’ ಎಂದು ಇಂಗಳೇಶ್ವರದ ವಚನ ಶಿಲಾಮಂಟಪದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT