ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ತಾಲ್ಲೂಕಿಗೊಂದು ಗ್ರ್ಯಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್

ವಿಧಾನಪ‍ರಿಷತ್ ಸದಸ್ಯ ಎಂ. ಚಿದಾನಂದಗೌಡ ಭರವಸೆ
Last Updated 13 ಡಿಸೆಂಬರ್ 2020, 13:39 IST
ಅಕ್ಷರ ಗಾತ್ರ

ದಾವಣಗೆರೆ: ‘ಪದವೀಧರರಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ತಾಲ್ಲೂಕಿಗೆ ಒಂದು ಗ್ರ್ಯಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್ ಆರಂಭಿಸುವ ಉದ್ದೇಶವಿದೆ’ ಎಂದುವಿಧಾನಪ‍ರಿಷತ್ ಸದಸ್ಯ ಎಂ. ಚಿದಾನಂದಗೌಡ ಹೇಳಿದರು.

ಜಿಲ್ಲಾ ಬಿಜೆಪಿಯಿಂದ ಇಲ್ಲಿನ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳ‌ಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಅವರಿಗೆ ಹಣಕಾಸು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಆಲೋಚನೆ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಉದ್ದೇಶವಿದ್ದು, ನನ್ನ ಕ್ಷೇತ್ರದ ವ್ಯಾಪ್ತಿಯ 32 ತಾಲ್ಲೂಕುಗಳಲ್ಲಿ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ದೆಹಲಿಯಂತೆ ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಶಾಸಕರಿಗೆ ಬರುವ ಅನುದಾನ ಕಡಿಮೆ ಇದ್ದು, ಕಾರ್ಪೊರೇಟ್ ಕಂಪನಿಗಳ ಸಹಾಯದಿಂದ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

‘ಶಿರಾದಲ್ಲಿ ಐಎಎಸ್ ಅಕಾಡೆಮಿ ಇದ್ದು, ಒಂದೊಂದು ತಾಲ್ಲೂಕಿನಿಂದ ಐದು ಆಕಾಂಕ್ಷಿಗಳನ್ನು ಪ್ರತಿವರ್ಷ ಆಯ್ಕೆ ಮಾಡಿಕೊಂಡು 10 ತಿಂಗಳು ಅವರಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ ತಜ್ಞರ ತಂಡ ರಚಿಸಿ‌ದ್ದು, ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದೆ’ ಎಂದರು.

‘6ರಿಂದ 12ನೇ ತರಗತಿಯ ಶಾಲಾ ಮಕ್ಕಳಿಗೆ ಒಂದೇ ಸೂರಿನಡಿ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 10 ಗ್ರಾಮಗಳಿಗೆ ಒಂದರಂತೆ ಶಾಲಾ ಸಂಕೀರ್ಣ ಆರಂಭಿಸಲಾಗುವುದು. ಇಂದು ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅನುಪಾತ ಸರಿಯಾಗಿಲ್ಲ. ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಕಡೆ ಮಕ್ಕಳು ಜಾಸ್ತಿ, ಮಕ್ಕಳು ಜಾಸ್ತಿ ಇರುವ ಕಡೆ ಶಿಕ್ಷಕರು ಕಡಿಮೆ ಇರುತ್ತಾರೆ. ವೈಜ್ಞಾನಿಕ ರೀತಿಯಲ್ಲಿ ಮರುಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಶಾಲಾ ಸಂಕೀರ್ಣ ಮಾಡುವ ಉದ್ದೇಶವಿದೆ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ದಾವಣಗೆರೆ ಜಿಲ್ಲೆಯಿಂದ ಯಾವಾಗಲೂ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬರುತ್ತವೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಮತ ಕಡಿಮೆ ಬಂದು ಸೋತಿರುವ ಉದಾಹರಣೆಯೂ ಇದೆ.ಮತದಾರರ ತೊಂದರೆ ಬಗೆಹರಿಸಲು ಒತ್ತು ನೀಡಬೇಕು. ಅಭಿನಂದನಾ ಸಮಾರಂಭವು ನಿಮ್ಮ ಹೆಗಲ ಮೇಲೆ ಮತ್ತು ಕಾರ್ಯಭಾರ ಹೊರೆಸಿದ್ದು, ಉತ್ತಮ ಕೆಲಸ ಮಾಡುವ ಮೂಲಕ ಆ ಕಾರ್ಯಭಾರವನ್ನು ಕಡಿಮೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮೇಯರ್ ಬಿ.ಜಿ. ಅಜಯ್‌ಕುಮಾರ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಪ್ರಸನ್ನ ಕುಮಾರ್, ಗೌರಮ್ಮ ಗಿರೀಶ್, ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ರಾಕೇಶ್ ಜಾಧವ್, ಗಾಯತ್ರಿಬಾಯಿ ಖಂಡೋಜಿರಾವ್, ಯಶೋದಮ್ಮ ಯಗ್ಗಪ್ಪ, ರೇಣುಕಾ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT