ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಹಳ್ಳಿಗಳಿಗಿಲ್ಲ ಸ್ಮಶಾನ ಭಾಗ್ಯ

ದಾವಣಗೆರೆ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ತಹಶೀಲ್ದಾರ್‌ ಸಂತೋಷ ಕುಮಾರ್‌
Last Updated 30 ನವೆಂಬರ್ 2018, 5:46 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ 21 ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಸರ್ಕಾರ ನಿಗದಿಗೊಳಿಸಿದ ದರದಲ್ಲಿ ಜಮೀನು ಲಭ್ಯವಾಗದೇ ಇರುವುದರಿಂದ 6 ಹಳ್ಳಿಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್‌ ಸಂತೋಷ ಕುಮಾರ್‌ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕೆ.ಜಿ. ಚಂದ್ರಪ್ಪ ಅವರು ರುದ್ರಭೂಮಿಗಳಿಗೆ ಹದ್ದುಬಸ್ತು ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌, ‘ಹಲವು ಕಡೆ ಸರ್ಕಾರಿ ಜಾಗ ಲಭ್ಯ ಇಲ್ಲದಿರುವುದಿಂದ ಸ್ಮಶಾನ ನಿರ್ಮಾಣ ಸಾಧ್ಯವಾಗಿಲ್ಲ. ಹೀಗಾಗಿ ಈಗ ಭೂಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಜಿಲ್ಲಾಧಿಕಾರಿಗೆ ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಸರ್ವೆಯರ್‌ ಕೊರತೆ ಇರುವುದರಿಂದ ಭೂಮಾಪನಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗಿದ್ದರೂ ಸ್ಮಶಾನ ಭೂಮಿಯನ್ನು ಆದ್ಯತೆ ಮೇಲೆ ಸರ್ವೆ ನಡೆಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯ ಬಿ.ಜಿ. ಸಂಗಜ್ಜಗೌಡ್ರು, ‘ಬೇತೂರು– ಕಲಪನಹಳ್ಳಿಯ ರುದ್ರಭೂಮಿಯಲ್ಲಿ ಜಾಲಿ ಗಿಡಗಳು ಬೆಳೆದಿವೆ. ಹೋಗಲು ಸರಿಯಾದ ರಸ್ತೆ ಇಲ್ಲ. ಇದಕ್ಕೆ ಹದ್ದುಬಸ್ತು ಮಾಡಬೇಕು’ ಎಂದು ಮನವಿ ಮಾಡಿದರು.

ಸದಸ್ಯ ಎಂ. ಮಂಜಪ್ಪ ಅವರು ಸ್ಮಶಾನ ಜಾಗ ಒತ್ತುವರಿಯಾಗುತ್ತಿದೆ ಎಂದು ಹಾಗೂ ಸದಸ್ಯ ಆಲೂರು ನಿಂಗರಾಜು ಅವರು ಆಲೂರಿನ ಸ್ಮಶಾನ ಸಮಸ್ಯೆ ಬಗ್ಗೆ ಸಭೆಯ ಗಮನಕ್ಕೆ ತಂದರು.

ಆಲೂರಿನಲ್ಲಿ ಸ್ಮಶಾನ ನಿರ್ಮಿಸಲು ಸದ್ಯಕ್ಕೆ 20 ಗುಂಟೆ ಜಾಗವನ್ನು ಗುರುತಿಸಲಾಗಿದೆ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದರು.

ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಿಸಿ: ‘ಹಲವು ಹಳ್ಳಿಗಳಲ್ಲಿ ಕಂದಾಯ ರಹಿತ ಗ್ರಾಮಗಳಿವೆ. ಅವುಗಳಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಅವುಗಳಿಂದ ಪಂಚಾಯಿತಿಗೆ ಆದಾಯ ಬರುತ್ತಿಲ್ಲ. ಹೀಗಾಗಿ ಗ್ರಾಮ ಠಾಣಾದ ವ್ಯಾಪ್ತಿಯನ್ನು ವಿಸ್ತರಿಸಿ, ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು’ ಎಂದು ಬಿ.ಜಿ. ಸಂಗಜ್ಜಿಗೌಡ್ರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌, ‘ತಾಲ್ಲೂಕಿನಲ್ಲಿ ಹೊಸದಾಗಿ 10 ಕಂದಾಯ ಗ್ರಾಮಗಳನ್ನು ಮಾಡಲಾಗುತ್ತಿದೆ. ಗ್ರಾಮ ನಕ್ಷೆಯನ್ನು ದುರಸ್ತಿಗೊಳಿಸಬೇಕು. ಸಹಾಯಕ ನಿರ್ದೇಶಕ ಭೂದಾಖಲೆ ಇಲಾಖೆಯ ಸಭೆಯನ್ನು ಶೀಘ್ರದಲ್ಲೇ ಕರೆದು ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅಧಿಕಾರಿಗಳ ಮೇಲೆ ಅಧ್ಯಕ್ಷೆ ಗರಂ: ಸಭೆಯ ಆರಂಭದಲ್ಲಿ ಯಾವ ಯಾವ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರಾಗಿದ್ದಾರೆ ಎಂಬ ಮಾಹಿತಿ ಪಡೆದ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ‘ಮೂರು ತಿಂಗಳಿಗೆ ಒಮ್ಮೆ ನಡೆಯುವ ಸಭೆಗೂ ಅಧಿಕಾರಿಗಳಿಗೆ ಬರಲು ಆಗುವುದಿಲ್ಲವೇ? ಹಾಗಾದರೆ ಇನ್ನು ಮುಂದೆ ಸಭೆಗೆ ಬರಲೇ ಬೇಡಿ; ಎಲ್ಲದಕ್ಕೂ ಇ.ಒ ಉತ್ತರಿಸುತ್ತಾರೆ. ಇಲ್ಲವೇ ಇಲಾಖೆಯ ಅಧಿಕಾರಿಗಳು ಹಾಗೂ ಇಒ ಮಾತ್ರ ಸಭೆ ಮಾಡಿ. ಶಾಲೆಗೆ ಹೋಗಿ ಪರಿಶೀಲಿಸಲು ಕರೆದರೂ ಬಿಇಒ ನಮ್ಮ ಜೊತೆ ಬರುತ್ತಿಲ್ಲ. ಸಭೆಗೂ ಬಂದು ಉತ್ತಿರಿಸುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಉಪಾಧ್ಯಕ್ಷ ಎಚ್‌.ಆರ್‌. ಮರುಳಸಿದ್ಧಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜಿ.ಎಸ್‌. ನಾಗರಾಜ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರತಿಧ್ವನಿಸಿದ ಬೆಳೆ ವಿಮೆ

ಈ ಬಾರಿಯ ಸಭೆಯಲ್ಲೂ ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ರೈತರಿಗೆ ವಿತರಣೆಯಾಗುತ್ತಿಲ್ಲ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತನ್ನಿ’ ಎಂದು ಮಮತಾ ಮಲ್ಲೇಶಪ್ಪ ಸೂಚಿಸಿದರು.

ಕಾರ್ಯನಿರ್ವಹಣಾಧಿಕಾರಿ ಎಲ್‌.ಎಸ್‌. ಪ್ರಭುದೇವ, ‘ಕಳೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿರುವ ನಡಾವಳಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಯೋಜನೆಯಲ್ಲಿನ ಲೋಪ ಸರಿಪಡಿಸುವ ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಆರಂಭಗೊಂಡಿದೆ. ತರಳಬಾಳು ಶ್ರೀಗಳು ಕೃಷಿ ಸಚಿವರೊಂದಿಗೆ ಬುಧವಾರ ಸಭೆ ನಡೆಸಿ ಚರ್ಚಿಸಿದ್ದಾರೆ’ ಎಂದು ತಿಳಿಸಿದರು.

ನಕಲಿ ಔಷಧ: ಎಚ್ಚರಿಕೆ ವಹಿಸಿ

‘ಭತ್ತದ ಬೆಳೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಂಗಡಿಯವರು ಯಾವುದೋ ಔಷಧಗಳನ್ನು ನೀಡುತ್ತ ಹಗಲು ದರೋಡೆ ನಡೆಸುತ್ತಿದ್ದಾರೆ. ಅವುಗಳು ಸರಿಯಾಗಿದೆಯೇ ಎಂಬ ಬಗ್ಗೆ ಕೃಷಿ ಇಲಾಖೆ ಪರಿಶೀಲನೆ ನಡೆಸಬೇಕು’ ಎಂದು ಸದಸ್ಯ ಎನ್‌.ಜಿ. ಮುರುಗೇಂದ್ರಪ್ಪ ಒತ್ತಾಯಿಸಿದರು.

‘ವಿಶೇಷವಾಗಿ ತೋಟಗಾರಿಕೆ ಬೆಳೆಗಳಲ್ಲಿ ನಕಲಿ ವೈದ್ಯರ ಕಾಟ ಹೆಚ್ಚಾಗಿದೆ. ಮನೆ ಮನೆಗೆ ಬಂದು ಔಷಧ ನೀಡುವವರ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಅವುಗಳ ಗುಣಮಟ್ಟವನ್ನು ಪರೀಕ್ಷಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT