ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು ಪುಷ್ಕರಣಿಗೆ ಟ್ಯಾಂಕರ್‌ ನೀರು

Last Updated 16 ಮಾರ್ಚ್ 2019, 11:33 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಪುಷ್ಕರಣಿಗೆ ಟ್ಯಾಂಕರ್ ನೀರು ಹರಿಸಲು ಗ್ರಾಮದ ಯುವಕರು ಸ್ವಯಂ ಸೇವಕರಾಗಿ ಭಗೀರಥ ಪ್ರಯತ್ನ ನಡೆಸಿದ್ದಾರೆ.

ಸತತ ಬರಗಾಲದಿಂದ ನೀರಿನ ಮಟ್ಟ ಕುಸಿತಗೊಂಡಿತ್ತು. ಉದ್ಯಾನದ ನಿರ್ವಹಣೆಗೆ ಪುಷ್ಕರಣಿ ನೀರು ಬಳಸುತ್ತಿದ್ದ ಕಾರಣ ಕೆಲವೇ ದಿನಗಳಲ್ಲಿ ಬರಿದಾಗುವ ಆತಂಕ ಕಾಡಿತ್ತು. ಜಲ ಮೂಲ ನಂಬಿದ್ದ ನೂರಾರು ಪಕ್ಷಿ ಸಂತತಿ, ಜಲಚರಗಳ ಜೀವಕ್ಕೆ ಕುತ್ತು ಎದುರಾಗಿತ್ತು. ನೀರಿಲ್ಲದೇ ಭಣಗುಡುವ ಪುಷ್ಕರಣಿ ಜೀವ ಕಳೆ ಕಳೆದುಕೊಂಡಿತ್ತು. ಈ ಕಾರಣ ನೀರು ತುಂಬಿಸಲು ಊರಿನ ಗ್ರಾಮಸ್ಥರು ಸಂಕಲ್ಪ ಮಾಡಿದ್ದರು.

ಭದ್ರಾ ನಾಲೆಯಿಂದ ತೋಟ ಉಳಿಸಲು ನಿತ್ಯ ಈ ಭಾಗದಲ್ಲಿ ನೂರಾರು ಟ್ಯಾಂಕರ್ ಓಡಾಡುತ್ತವೆ. ಪ್ರತಿ ಟ್ಯಾಂಕರ್ ಒಂದು ಲೋಡ್ ಉಚಿತವಾಗಿ ಪುಷ್ಕರಣಿಗೆ ಹರಿಸಲು ರೈತರ ಮನವೊಲಿಸಲಾಯಿತು. ಮೂರ್ನಾಲ್ಕು ದಿನಗಳಿಂದ ಪೈಪ್ ಅಳವಡಿಸಿ ನೀರು ಹರಿಸಲಾಗುತ್ತಿದೆ.

ಈಗಾಗಲೇ ಸುಮಾರು 50 ಟ್ಯಾಂಕರ್ ನೀರು ಪುಷ್ಕರಣಿಗೆ ಹರಿದಿದೆ. ನಾಲ್ಕೈದು ಮೆಟ್ಟಿಲು ನೀರಿನ ಮಟ್ಟ ಏರಿದೆ. ಸದ್ಯ ತಾತ್ಕಾಲಿಕವಾಗಿ ಪುಷ್ಕರಣಿ ನೀರಿನ ಮಟ್ಟದಲ್ಲಿ ಚೇತರಿಕೆ ಕಂಡಿದೆ. ಸ್ವ ಆಸಕ್ತಿಯಿಂದ ಟ್ಯಾಂಕರ್ ನೀರು ಹರಿಸಲು ಮಾಲೀಕರಿಗೆ ಮನವಿ ಮಾಡಲಾಗಿದೆ. ಒಳ್ಳೆಯ ಉದ್ದೇಶದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಕಿರಣ್, ಸ್ವಾಮಿ, ರುದ್ರೇಶ್.

2013ರಲ್ಲಿ ಪುಷ್ಕರಣಿ ಹೂಳೆತ್ತಲು ನೀರು ಖಾಲಿ ಮಾಡಲಾಗಿತ್ತು. ಆಗ ನೀರಿನ ಮಧ್ಯದ ಕಾರಂಜಿ ಮಂಟಪಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡಿದ್ದರು. ಮಳೆ ನೀರಿನ ಆಸರೆಯಲ್ಲಿ ಮರುಪೂರಣಗೊಂಡಿತ್ತು ಎನ್ನುತ್ತಾರೆ ಗ್ರಾಮದ ಕೆ.ಸಿದ್ದಲಿಂಗಪ್ಪ.

ಪುಷ್ಕರಣಿ ಸದಾ ನೀರಿನಿಂದ ಕಂಗೊಳಿಸುವಂತೆ ಮಾಡಲು ಶಾಶ್ವತ ಪರಿಹಾರದ ಚಿಂತನೆ ನಡೆಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಿ. ದೇವೇಂದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT