ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರೆಕೆರೆ ಪಿಎಚ್‌ಸಿಗೆ ಸ್ವಚ್ಛತೆಯ ಗರಿ

ಸ್ವಚ್ಛ ಮಹೋತ್ಸವ ಪ್ರಶಸ್ತಿ: ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ
Last Updated 7 ಸೆಪ್ಟೆಂಬರ್ 2019, 7:38 IST
ಅಕ್ಷರ ಗಾತ್ರ

ದಾವಣಗೆರೆ: ನೈರ್ಮಲ್ಯ ಹಾಗೂ ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಮುಕುಟಕ್ಕೆ ಇದೀಗ ರಾಷ್ಟ್ರ ಮಟ್ಟದ ‘ಸ್ವಚ್ಛ ಮಹೋತ್ಸವ’ ಪ್ರಶಸ್ತಿಯ ಗರಿಯೂ ಸೇರ್ಪಡೆಯಾಗಿದೆ.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಪ್ರಸಕ್ತ ಸಾಲಿನಿಂದ ಸ್ವಚ್ಛ ಪಿಎಚ್‌ಸಿಗಳಿಗೆ ‘ಸ್ವಚ್ಛ ಮಹೋತ್ಸವ’ ಪ್ರಶಸ್ತಿ ನೀಡಲು ಆರಂಭಿಸಿದ್ದು, ತಾವರೆಕೆರೆ ಪಿಎಚ್‌ಸಿಗೆ ತೃತೀಯ ಸ್ಥಾನ ಲಭಿಸಿದೆ. ಮೊದಲ ಸ್ಥಾನವು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೆಲ್ಪುರು ಪಿಎಚ್‌ಸಿ ಪಡೆದರೆ, ಗುಜರಾತಿನ ಜಾಮನಗರದ ಜಾಮವಂತಲ್ಲಿಯ ಪಿಎಚ್‌ಸಿ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿದೆ. ಸೆ. 6ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ರೋಗಿಗಳಿಗೆ ದೇವರಾದ ದೇವರಾಜ: ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ತಾವರೆಕೆರೆ ಪಿಎಚ್‌ಸಿಯಲ್ಲಿ ಮೂವರು ವೈದ್ಯರು ಇರಬೇಕಾಗಿತ್ತು. ಆದರೆ, 2010ರಿಂದ 2015ರವರೆಗೂ ಯಾವೊಬ್ಬ ವೈದ್ಯನೂ ಇಲ್ಲಿಗೆ ಹೋಗಲು ಬಯಸುತ್ತಿರಲಿಲ್ಲ. ಇದರಿಂದಾಗಿ ಈ ಭಾಗದ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದರು. 2015ರ ಡಿಸೆಂಬರ್‌ನಲ್ಲಿ ಕೆಪಿಎಸ್‌ಸಿ ಮೂಲಕ ನೇಮಕಗೊಂಡ ಡಾ. ಎಸ್. ದೇವರಾಜ್‌ ಅವರನ್ನು ಈ ಪಿಎಚ್‌ಸಿ ನಿಯೋಜಿಸಲಾಯಿತು. ಅಂದಿನಿಂದ ಇದರ ‘ಭಾಗ್ಯ’ವೇ ಬದಲಾಯಿತು. ಡಾ. ದೇವರಾಜ ಅವರು ರೋಗಿಗಳ ಪಾಲಿಗೆ ದೇವರಾದರು.

ಹ್ಯಾಟ್ರಿಕ್‌ ಕಾಯಕಲ್ಪ ಪ್ರಶಸ್ತಿ: ಡಾ. ದೇವರಾಜ ಅವರು ಆಡಳಿತ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಪಿಎಚ್‌ಸಿಯನ್ನು ಅಭಿವೃದ್ಧಿಗೊಳಿಸಲು ಸಂಕಲ್ಪ ಮಾಡಿದರು. ಕೇಂದ್ರದಲ್ಲಿ ಗುಣಮಟ್ಟದ ಚಿಕಿತ್ಸೆಯ ಜೊತೆಗೆ ನೈರ್ಮಲ್ಯವನ್ನೂ ಕಾಪಾಡಲು ಮುಂದಾದರು. ಆರೋಗ್ಯ ಇಲಾಖೆ ನೀಡುವ ರಾಜ್ಯಮಟ್ಟದ ‘ಕಾಯಕಲ್ಪ’ ಪ್ರಶಸ್ತಿಗೆ 2016ರಲ್ಲೇ ತಮ್ಮ ಪಿಎಚ್‌ಸಿಗೆ ಜಿಲ್ಲೆಗೆ ಸಮಾಧಾನಕರ ಬಹುಮಾನ ದಕ್ಕುವಂತೆ ಮಾಡುವಲ್ಲಿ ಯಶಸ್ವಿಯಾದರು.

2017ರಿಂದ ಸತತವಾಗಿ ಮೂರು ವರ್ಷಗಳ ಕಾಲ ಈ ಪಿಎಚ್‌ಸಿ ಜಿಲ್ಲೆಯ ‘ಕಾಯಕಲ್ಪ’ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಡಾ. ದೇವರಾಜ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.

‘ನಮ್ಮ ಪಿಎಚ್‌ಸಿಯಲ್ಲಿನ ಆರೋಗ್ಯ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಗುಣಮಟ್ಟದ ಖಾತ್ರಿ ಯೋಜನೆಗೆ ನೇಮಕಗೊಂಡಿದ್ದು, ಶೀಘ್ರದಲ್ಲೇ ಇದರ ಫಲಿತಾಂಶ ಹೊರಬೀಳಲಿದೆ. ಈ ಪ್ರಶಸ್ತಿಯೂ ಲಭಿಸುವ ನಿರೀಕ್ಷೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

24 ಗಂಟೆಯೂ ಕಾರ್ಯನಿರ್ವಹಿಸುವ ಈ ಪಿಎಚ್‌ಸಿಯಲ್ಲಿ ಇದೀಗ ಹೆರಿಗೆ ಮಾಡಿಸಲಾಗುತ್ತಿದೆ. ಸುತ್ತಲಿನ 36 ಗ್ರಾಮಗಳ ರೋಗಿಗಳ ಪಾಲಿಗೆ ಈ ಪಿಎಚ್‌ಸಿ ಆಸರೆಯಾಗಿದೆ.

**

ಸೋಂಕು ಹರಡುವುದನ್ನು ತಡೆಯಲು ಪಿಎಚ್‌ಸಿಯಲ್ಲಿ ನೈರ್ಮಲ್ಯ ಕಾಪಾಡಿದ್ದೆವು. ಇದನ್ನು ಪರಿಗಣಿಸಿ ಸ್ವಚ್ಛ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
– ಡಾ. ಎಸ್. ದೇವರಾಜ, ಆಡಳಿತ ವೈದ್ಯಾಧಿಕಾರಿ, ತಾವರೆಕೆರೆ ಪಿಎಚ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT