ಗುರುವಾರ , ಸೆಪ್ಟೆಂಬರ್ 23, 2021
20 °C
ತೆರಿಗೆ ಸಲಹೆಗಾರರ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌

ಸರ್ಕಾರ, ಜನರ ನಡುವಿನ ಕೊಂಡಿ ತೆರಿಗೆ ಸಲಹೆಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರ ಮತ್ತು ಆದಾಯ ಇರುವ ಜನರ ನಡುವಿನ ಕೊಂಡಿಯಂತೆ ಕೆಲಸ ಮಾಡುವವರು ತೆರಿಗೆ ಸಲಹೆಗಾರರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಬಣ್ಣಿಸಿದರು.

ನಗರದ ಜಯದೇವ ಹಾಸ್ಟೆಲ್‌ನಲ್ಲಿ ಗುರುವಾರ ನಡೆದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಐಪಿಎಸ್‌ ಪರೀಕ್ಷೆ ಬರೆಯುವ ಮೊದಲು ಮೂರು ವರ್ಷ ತೆರಿಗೆ ಸಲಹೆಗಾರನಾಗಿ ಕೆಲಸ ಮಾಡಿದ್ದೆ. ಜನರು ಸರಿಯಾಗಿ ತೆರಿಗೆ ಕಟ್ಟುವಂತೆ ಮಾಡುವ ಮತ್ತು ತೆರಿಗೆದಾರರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳೇನು ಎಂಬುದನ್ನು ತಿಳಿಸುವ ಕೆಲಸನವನ್ನು ಸಲಹೆಗಾರರ ಮಾಡಬೇಕು’ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ‘ಯಾವುದೇ ದುಡಿಮೆಗಾರ ತನ್ನ ದುಡಿಮೆಯಲ್ಲಿ ಒಂದು ಪಾಲನ್ನು ಸರ್ಕಾರಕ್ಕೆ ನೀಡುವುದನ್ನು ತೆರಿಗೆ ಎಂದು ಕರೆಯುತ್ತೇವೆ. ರಸ್ತೆ, ನೀರು, ಚರಂಡಿ, ವಿಮಾನ ಹೀಗೆ ಅನೇಕ ಸೌಲಭ್ಯಗಳನ್ನು ಬಯಸುವ ನಾವು ತೆರಿಗೆ ಕಟ್ಟಲು ತಯಾರಿಲ್ಲ ಎನ್ನುವುದು ಸರಿಯಲ್ಲ’ ಎಂದು ಹೇಳಿದರು.

‘ನಾವು ದೊಡ್ಡ ದಾನಿಗಳಾಗಬೇಕಿಲ್ಲ. ಆದರೆ ಕಾಯ್ದೆಯನ್ವಯ ನಾವು ಕಟ್ಟಬೇಕಾದ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡಿದರೂ ಸಾಕು. ದೇಶದ ಅಭಿವೃದ್ಧಿಗೆ ಕೊಡುಗೆಯಾಗುತ್ತದೆ. ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸುತ್ತೇವೆ ಎಂದರೆ ಅದು ನಮಗೆ ನಾವೇ ವಂಚನೆ ಮಾಡಿದಂತೆ’ ಎಂದರು.

ತೆರಿಗೆ ಸಲಹೆಗಾರರಿಗೆ ಕೋವಿಡ್‌ ನಿರೋಧಕ ಎರಡನೇ ಲಸಿಕೆ ಹಾಕಿಸಬೇಕು ಎಂಬ ಬೇಡಿಕೆಯನ್ನು ಪೂರೈಸಲಾಗುವುದು. ಸ್ವಂತ ಕಚೇರಿ ಕಟ್ಟಡ ಕಟ್ಟಲು ಅನುದಾನದ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಲಹೆಗಾರರ ಅಹವಾಲುಗಳಿಗೆ ಉತ್ತರಿಸಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕೊರೊನಾ ಅಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುತ್ತಿತ್ತು. ಎಲ್ಲ ಶಾಸಕರು ಅನುದಾನ ನೀಡುವ ಭರವಸೆ ನೀಡಿದ್ದರು’ ಎಂದು ಹೇಳಿದರು.

ತೆರಿಗೆ ಸಲಹೆಗಾರರ ಸಂಘದ ಸಂಸ್ಥಾಪಕ ಸದಸ್ಯರಾದ ಎಚ್‌. ಬಸವರಾಜಪ್ಪ ಮತ್ತು ವಿ.ಎಸ್‌. ಅರುಣಾಚಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಉಪಾಧ್ಯಕ್ಷ ಮಂಜುನಾಥ ಎಚ್‌.ಎಸ್‌., ಕಾರ್ಯದರ್ಶಿ ರೇವಣಸಿದ್ಧಯ್ಯ ಡಿ.ಎಂ., ಜತೆ ಕಾರ್ಯದರ್ಶಿ ಜಗದೀಶ ಜಿ.ಎಸ್‌. ಸದಸ್ಯರಾದ ಬಿ. ವಿನಯಕುಮಾರ್‌, ಎಚ್‌.ಎಸ್‌. ನಾಗರಾಜ ರಾವ್‌, ಮುಸ್ತಫಾ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.